ʼಚುಂಚಶ್ರೀʼ ಪ್ರಶಸ್ತಿಗೆ ಪಾತ್ರರಾಗಿದ್ದ ದಲಿತ ಕವಿ
ಬೆಂಗಳೂರು: ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ನಿಧನಕ್ಕೆ ಆದಿಚುಂಚನಗಿರಿ ಮಠದ ಪೀಠಾಧೀಶರಾದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾ ಸ್ವಾಮೀಜಿ ಅವರು ಸಂತಾಪ ಸೂಚಿಸಿದ್ದಾರೆ.
ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಡಾ.ಸಿದ್ದಲಿಂಗಯ್ಯನವರು ಇನ್ನಿಲ್ಲವಾಗಿರುವುದು ಅತ್ಯಂತ ವಿಷಾದನೀಯ. ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಮ್ಮ ಸಾಹಿತ್ಯ ಸೇವೆಯ ಮೂಲಕ ಜನಮನ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದ ಅವರು, ರಚಿಸಿದ್ದ ಹಲವಾರು ಕ್ರಾಂತಿ ಗೀತೆಗಳು ಶೋಷಿತರ ಧ್ವನಿಯಾಗಿದ್ದವು. ಪ್ರಾಧ್ಯಾಪಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸಿದ್ದಲಿಂಗಯ್ಯ ಅವರು ಸಲ್ಲಿಸಿರುವ ಸೇವೆ ಆವಿಸ್ಮರಣೀಯ. ತಮ್ಮ ಸೃಜನಶೀಲ ಸಾಹಿತ್ಯ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದ ಅವರ ಸೇವೆಯನ್ನು ಗುರುತಿಸಿ ಆದಿಚುಂಚನಗಿರಿ ಮಹಾ ಸಂಸ್ಥಾನವು 2016ನೇ ವರ್ಷದಲ್ಲಿ ಅವರಿಗೆ ʼಚುಂಚಶ್ರೀʼ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಭಗವಂತನು ಇವರ ನಿಧನದಿಂದ ದುಃಖತಪ್ತವಾಗಿರುವ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸ್ವಾಮೀಜಿ ಅವರು ಆಶಿಸಿದ್ದಾರೆ.