ಸಿಕ್ಕಿಬಿದ್ದಿದ್ದುಹೇಗೆ? ಕ್ಲೂ ಕೊಟ್ಟವರು ಯಾರು?
ಬಿಪಿಎಲ್ ಕಾರ್ಡುದಾರರ ಅನ್ನಕ್ಕೇ ಕನ್ನ ಹಾಕಿದ ಕಿರಾತಕರು I ಆಹಾರ ಇಲಾಖೆಯಲ್ಲಿ 2 ಕೋಟಿ ರೂ. ಗೋಲ್‌ಮಾಲ್ ಬಯಲಿಗೆಳೆದ ಶಾಸಕ
ಬಾಗೇಪಲ್ಲಿ: ಒಂದೆಡೆ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರೆ, ಇನ್ನೊಂದೆಡೆ ಸರಕಾರಿ ಆಹಾರ ಗೋದಾಮುಗಳಲ್ಲಿ ʼಸರಕಾರಿ ಹೆಗ್ಗಣಗಳುʼ ಬಿದ್ದಿವೆ. ಆ ಹೆಗ್ಗಣಗಳನ್ನು ಹಿಡಿಯುವ ಕೆಲಸ ಬಾಗೇಪಲ್ಲಿಯಲ್ಲಿ ಆಗಿದೆ.
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಲ್ಲಿ ಒಂದೆಡೆ ಹೆಗ್ಗಣಗಳು ಆಹಾರ ಧಾನ್ಯಗಳನ್ನು ತಿಂದು ಬದುಕಿದ್ದರೆ, ಇನ್ನೊಂದೆಡೆ ಆಧಿಕಾರಿ, ಸಿಬ್ಬಂದಿ ಮತ್ತು ದಲ್ಲಾಳಿಗಳೆಂಬ ಹೆಗ್ಗಣಗಳು ಕೋಟ್ಯಂತರ ರೂ. ಹಗರಣಗಳನ್ನೇ ನಡೆಸಿ ತಿಂದು ತೇಗುತ್ತಿದ್ದಾರೆ.
ಇದೇ ವೇಳೆ, ಬಡವರ ಪಾಲಿನ ಅನ್ನಕ್ಕೆ ಕನ್ನ ಹಾಕಿ ರಾಗಿ ಖರೀದಿ ಮತ್ತು ಅಕ್ಕಿ-ಗೋದಿಯಲ್ಲಿ ಕೋಟ್ಯಂತರ ರೂ. ಮೌತ್ತದ ಗೋಲ್‌ಮಾಲ್ ನಡೆದಿದ್ದು, ಅದನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪತ್ತೆ ಹಚ್ಚಿದ್ದಾರೆ.
ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮುಗಳ ಮೇಲೆ ತಹಶೀಲ್ದಾರ್ ಮತ್ತಿತರೆ ಅಧಿಕಾರಿಗಳ ಜತೆ ಶನಿವಾರ ಹಠಾತ್ ದಾಳಿ ನಡೆಸಿದ್ದ ಶಾಸಕರು, ಆಹಾರ ಇಲಾಖೆಯಲ್ಲಿ ರಾಗಿ ಖರೀದಿಐಲ್ಲಿ ನಡೆದಿರುವ ಬೃಹತ್ ಹಗರಣವನ್ನು ಬಯಲಿಗೆ ಎಳೆದಿದ್ದಾರೆ.
ಶನಿವಾರ ಮದ್ಯಾಹ್ಮ ಯಾವುದೇ ಮುನ್ಸೂಚನೆಯೂ ಇಲ್ಲದೆ, ಕೆಎಫ್‌ಸಿಎಸ್‌ಸಿ ಗೋದಾಮು ಮತ್ತು ಸಗಟು ಮಳಿಗೆಗಳ ಮೇಲೆ ಹಠಾತ್ ದಾಳಿ ನಡೆಸಿ ದಾಸ್ತಾನು ಪ್ರಮಾಣವನ್ನು ಪರಿಶೀಲನೆ ಮಾಡಿದ ಶಾಸಕರು, ಅಲ್ಲಿನ ವ್ಯವಸ್ಥಾಪಕರು ಮತ್ತು ಕಂಪ್ಯೂಟರ್ ಆಪರೇಟರ್ʼಗಳಿಗೆ ಬೆವರಿಳಿಸಿದರು.
ರಾಗಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
ದಾಳ ನಂತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದ್ದಿಷ್ಟು;
ಸರಕಾರ ರೈತರಿಂದ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸುಮಾರು 3,500 ಮೂಟೆಗಳಷ್ಟು ಗೋಲ್‌ಮಾಲ್ ನಡೆಸಿದ್ದಾರೆ. ರಾಗಿ ಸರಬರಾಜು ಮಾಡದೇ ಸರಕಾರದಿಂದ ಹಣ ಪಡೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿತ್ತು. ದಲ್ಲಾಳಿಗಳು ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದು, ಇದಕ್ಕೆ ಇಲಾಖೆಯ ಸಿಬ್ಬಂದಿ ಕೂಡ ಕೈಜೋಡಿಸಿದಾರೆ.
ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ರೈತರು ಸುಮಾರು 23,000 ಕ್ವಿಂಟಾಲ್ ರಾಗಿಯನ್ನು ರೈತರು ಬೆಳೆದಿದ್ದಾರೆ. ಆದರೆ, ಇಲ್ಲಿ 28,000 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ ಎಂದು ದಾಖಲೆಗಳನ್ನು ತೋರಿಸಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ, ಇದರ ಜತೆಗೆ ರೈತರು ತಾವು ಬೆಳೆದ ಅಷ್ಟೂ ರಾಗಿಯನ್ನು ತಾವತ್ತೂ ಮಾರಾಟ ಮಾಡುವುದಿಲ್ಲ. ತಮ್ಮ ಬಳಕೆಗೂ ಅವರು ರಾಗಿಯನ್ನು ಉಳಿಸಿಕೊಳ್ಳುತ್ತಾರೆ.
ಕೊರೋನದಂಥ ಸಂಕಷ್ಟ ಕಾಲದಲ್ಲಿ ಬಡವರ ಅಕ್ಕಿಗೆ ಕನ್ನ ಹಾಕಿ ಕೋಟ್ಯಂತರ ರೂಪಾಯಿಗಳ ಗೋಲ್‌ಮಾಲ್ ನಡೆಸಿರುವುದನ್ನು ಸರಕಾರದ ಮಟ್ಟದಲ್ಲಿ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುತ್ತೇನೆ. ಮುಂದೆ ಇಲಾಖೆಯಲ್ಲಿ ಇಂಥ ಗೋಲ್‌ಮಾಲ್, ಅವ್ಯವಹಾರ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಗೋದಾಮುಗಳಿಗೆ ಬೀಗ
ಪಡಿತರದಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್ ನಡೆದಿರುವ ಹಿನ್ನೆಲೆಯಲ್ಲಿ ದಾಸ್ತಾನು ಮತ್ತು ಲೆಕ್ಕಗಳು ತಾಳೆಯಾಗದ ಕಾರಣಕ್ಕೆ ಗೂಳೂರು ರಸ್ತೆಯಲ್ಲಿನ ಸಗಟು ಮಳಿಗೆ, ಎಪಿಎಂಸಿ ಯಲ್ಲಿನ ಗೋದಾಮು ಮತ್ತು ನಲ್ಲಪರೆಡ್ಡಿಪಲ್ಲಿಯಲ್ಲಿನ ಗೋದಾಮುಗಳಿಗೆ ಬೀಗಮುದ್ರೆ ಹಾಕಿಸಿದರು ಶಾಸಕರು. ತಹಶೀಲ್ದಾರ್ ಡಿ.ವಿ.ದಿವಾಕರ್ ಗೋದಾಮುಗಳಿಗೆ ಬೀಗ ಹಾಕಿಸಿ ಸೀಲ್ ಹಾಕಿಸಿದರು.
ಅಧಿಕಾರಿಗಳ ಲೆಕ್ಕದಲ್ಲಿ 40 ಲಕ್ಷ ರೂ. ಗೋಲ್‌ಮಾಲ್
ಶಾಸಕರು ದಾಳಿ ನಡೆಸಿದ ವೇಳೆಯಲ್ಲಿ ಮಾಹಿತಿ ನೀಡಿದ ಆಹಾರ ಶಿರಸ್ತೇದಾರ್ ರಾಜಣ್ಣ, 841 ಕ್ವಿಂಟಾಲ್ ರಾಗಿ ಮತ್ತು 400 ಕ್ವಿಂಟಾರ್ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ವೆಚ್ಚ 40 ಲಕ್ಷ ರೂ. ಎಂದರು. ಆದರೆ ಈ ಅಂಕಿ-ಅಂಶಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸುಬ್ಬಾರೆಡ್ಡಿ ಅವರು, ನನ್ನ ಬಳಿ ಇರುವ ಮಾಹಿತಿ ಪ್ರಕಾರ 1.5 ಕೋಟಿಯಿಂದ 2 ಕೋಟಿಗೂ ಮೀರಿ ಗೋಲ್‌ಮಾಲ್ ನಡೆದಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದರು.
ಎಪಿಎಂಸಿ ಗೋದಾಮು ಪರಿಶೀಲನೆ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ತಹಶೀಲ್ದಾರ್ ಡಿ.ವಿ.ದಿವಾಕರ್ ಎಪಿಎಂಸಿ ಮಾರುಕಟ್ಟೆಯಲ್ಲಿರುವ ರಾಗಿ ದಾಸ್ತಾನನ್ನು ಪರಿಶೀಲಿಸಿದರು. ಮೂಟೆಗಳ ಸಂದಿಗಳಲ್ಲಿಯೇ ತೂರಿ ದಾಸ್ತಾನು ಪರಿಶೀಲಿಸಿದರಲ್ಲದೆ ಸಹಾಯಕರನ್ನು ದಾಸ್ತಾನಿನ ಮೇಲೆ ಹತ್ತಿಸಿ ಸ್ಟಾಕ್ ಪ್ರಮಾಣವನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ಮಾಡಿಸಿದರು.
ಕಿಲಾಡಿ ದಲ್ಲಾಳಿಗಳು
ಸರಕಾರ ಜಾರಿಗೆ ತಂದಿರುವ ರಾಗಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿಯನ್ನು ಖರೀದಿ ಮಾಡದೆಯೇ ಖರೀದಿ ಮಾಡಿದಂತೆ ಸುಳ್ಳು ಲೆಕ್ಕ ತೋರಿಸಿ ಬ್ರೋಕರುಗಳ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿಗಳನ್ನು ಜಮೆ ಮಾಡಲಾಗಿತ್ತು. ಒಂದು ಹಂತದಲ್ಲಿ5,000 ಕ್ವಿಂಟಾಲ್ ರಾಗಿ ಗೋಲ್‌ಮಾಲ್ ನಡೆಸಲಾಗಿದ್ದು ಹಗರಣ ಬೆಳಕಿಗೆ ಬರುವ ಮುನ್ಸೂಚನೆ ಅರಿತ ದಲ್ಲಾಳಿಗಳು ಹಾಗೂ ಇಲಾಖೆಯ ಕೆಲವರು ರಾತ್ರೋರಾತ್ರಿ 5,000 ಕ್ವಿಂಟಾಲ್ ರಾಗಿ ಮೂಟೆಗಳನ್ನು ಗೋದಾಮು ಸೇರುವಂತೆ ಮಾಡುವ ಪ್ರಯತ್ನ ವಿಫಲವಾಗಿದೆ. ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ ಈಗ ಭಾರೀ ಸದ್ದು ಮಾಡುತ್ತಿದೆ.
ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಸಿಕ್ಕಿದ ಕ್ಲೂ
ತಾಲೂಕಿನಲ್ಲಿ 100ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೂ 2 ಕ್ವಿಂಟಾಲ್ ರಾಗಿ ಕಡಿಮೆ ನೀಡಿದ್ದು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಗೋದಾಮು ವ್ಯವಸ್ಥಾಪಕರು ತಿಳಿಸಿದ್ದರು ಎಂಬ ಮಾಹಿತಿ ಇತ್ತು. ಹಗರಣ ಬಯಲಿಗೆ ಬರಲು ಈ ಅಂಶವೇ ಕಾರಣವಾಯಿತು.
ಪೊಲೀಸ್ ವಶಕ್ಕೆ ಕಂಪ್ಯೂಟರ್ ಆಪರೇಟರ್
ಶಾಸಕರು ಮತ್ತು ತಹಸೀಲ್ದಾರ್ ಗೋಲ್‌ಮಾಲ್ ಬೆಳಕಿಗೆ ಬರುತ್ತಿದ್ದಂತೆಯೇ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆನ್ನಲಾಗುತ್ತಿರುವ ಸಗಟು ಮಳಿಗೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅಜರುದ್ದೀನ್ ಎಂಬಾತನನ್ನು ತಹಶೀಲ್ದಾರ್ ಡಿ.ವಿ.ದಿವಾಕರ್ ಸ್ಥಳದಲ್ಲಿಯೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚಿಸಿದರು. ಅದರಂತೆ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಡವರ ಅಕ್ಕಿ ಗೋಲ್‌ಮಾಲ್ ಮಾಡಿ ಕೋಟ್ಯಂತರ ರೂ. ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.