ಹೆಸರಿಗೆ ಫ್ರಂಟ್ಲೈನ್ ವಾರಿಯರ್ಸ್ ! ವೇತನದಲ್ಲಿ ಮಾತ್ರ ಲಾಸ್ಟ್ ಲೈನರ್ಸ್!!
by G S Bharath Gudibande
ಗುಡಿಬಂಡೆ: ರಾಜ್ಯದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಣೆ ಮಾಡಿ ವೇತನ ಕಡಿಮೆ ಇದ್ದರೂ, ಸುರಕ್ಷತೆ ಇಲ್ಲದಿದ್ದರೂ, ಸೋಂಕಿತರ ಪಾಲಿಗೆ ಆಸರೆಯಾಗುತ್ತಿರುವ ಆಂಬ್ಯುಲೆನ್ಸ್ ಚಾಲಕರು ಸಂಕಷ್ಟದಲ್ಲಿದ್ದಾರೆ, ಹಾಗಾಗಿ ಸರಕಾರ ಇವರ ಸಮಸ್ಯೆಗಳನ್ನು ಪರಿಷ್ಕರಿಸಿ ಸೇವಾ ಭದ್ರತೆ ಸೇರಿದಂತೆ ಮುಂತಾದವುಗಳು ನೀಡಬೇಕಾಗಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿದೆ, ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ, ಇಂತಹ ಸಮಯದಲ್ಲಿ ಸೋಂಕಿತರನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸುವುದು ಆಂಬ್ಯುಲೆನ್ಸ್ ಚಾಲಕರ ಕರ್ತವ್ಯ, ಆದರೆ ಮುಂಚೂಣಿಯಲ್ಲಿ ನಿಂತು ಕೊರೋನಾ ವಾರಿಯರ್ಗಳಾಗಿ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಆಂಬ್ಯುಲೆನ್ಸ್ ಚಾಲಕರು ಜೀವನ ಪರಿಸ್ಥಿತಿ ಹೇಳತೀರದು.
ಆಂಬ್ಯುಲೆನ್ಸ್ ಚಾಲಕರ ಪರಿಸ್ಥಿತಿ
ತುರ್ತು ಸಂದರ್ಭದಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಜೀವದ ಭಯ ಬಿಟ್ಟು ಅವರು ಈ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಆದರೆ ಅವರಿಗೆ ಸೂಕ್ತ ವ್ಯವಸ್ಥೆ, ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ಮುಂತಾದವುಗಳನ್ನು ನೀಡಿ ಅವರ ಕುಟುಂಬಗಳನ್ನು ಸುಧಾರಿಸಲು ಮುಂದಾಗಬೇಕಿದೆ. ಆದರೆ, ಅದಕ್ಕೆ ಸರಕಾರ ಮನಸ್ಸು ಮಾಡಿಲ್ಲ.
ಕಾಣದ ವೈರಿಯೊಂದಿಗೆ ಹೋರಾಡುವ ದಾದಿಯರು
ಕಣ್ಣಿಗೆ ಕಾಣುವ ವೈರಿಯೊಂದಿಗೆ ಹೋರಾಡುವುದು ಸುಲಭ ಆದರೆ ಅಗೋಚರ ವೈರಿಯೊಂದಿಗೆ ಹೋರಾಡಿ ಗೆಲ್ಲುವುದು ನಿಜಕ್ಕೂ ಸವಾಲೇ ಸರಿ. ಇಂತಹ ಸವಾಲನ್ನು ಸಂತೋಷದಿಂದ ಸ್ವೀಕರಿಸಿರುವ ದಾದಿಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಇವರ ವೇತನದ ವಿಷಯಕ್ಕೆ ಬಂದರೆ, ಸರಕಾರದ ಬಣ್ಣ ಬಿಚ್ಚಿಕೊಳ್ಳುತ್ತದೆ. ಮಾತೆತ್ತಿದರೆ ಫ್ರಂಟ್ಲೈನ್ ವಾರಿಯರ್ಗಳೆಂದು ಕೊಚ್ಚಿಕೊಳ್ಳುವ ಸರಕಾರ ಸಂಬಳದ ವಿಷಯಕ್ಕೆ ಬಂದರೆ ಡಬಲ್ಗೇಮ್ ಆಡುತ್ತಿದೆ.
ಸರಕಾರದ ಪ್ರೀತಿ ತೋರಿಕೆಗೆ ಸೀಮಿತ
ದಾದಿಯರು, ಆಂಬ್ಯುಲೆನ್ಸ್ ಚಾಲಕರು ಹಾಗೂ ಫ್ರಂಟ್ ಲೈನ್ ವಾರಿಯರ್ಸ್ ಬಗ್ಗೆ ಸರಕಾರ ಮತ್ತು ಸಮಾಜ ತೋರುವ ಪ್ರೀತಿ ಕೇವಲ ತೋರಿಕೆಗೆ ಮಾತ್ರ ಎನ್ನುವಂತಾಗಿದೆ. ಸರಕಾರ ಕೊಡುತ್ತಿರುವ ಸೌಲಭ್ಯ, ವೇತನ ಹಾಗೂ ಉದ್ಯೋಗ ಭದ್ರತೆ ಏನೇನು ಸಾಲದು.
ಹಾಗಾದರೆ ಇವರಿಗೆಲ್ಲ ಎಷ್ಟು ಸಂಬಳ ಸಿಗುತ್ತಿದೆ. ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಇವರೆಲ್ಲ ಸರಕಾರಿ ನೌಕರರಲ್ಲ. ಯಾರದ್ದೋ ಏಜೆನ್ಸಿ ಮೂಲಕ ನೇಮಕಗೊಂಡು ಸರಕಾರಕ್ಕೆ ಚಾಕರಿ ಮಾಡುತ್ತಿರುವವ ನತದೃಷ್ಟ ಕಾರ್ಮಿಕರು.
ಆಶಾ ಕಾರ್ಯಕರ್ತೆಯರಿಗೆ ಸೀನಿಯಾರಿಟಿ ಇದ್ದರೆ ಅಬ್ಬಾ ಎಂದರೂ 12,000 ರೂ. ವೇತನ ಸಿಕ್ಕಿದರೆ ಹೆಚ್ಚು. ಇನ್ನು ಹೊಸದಾಗಿ ಬಂದವರಿಗೆ ಸಿಗುವುದು 5,000 ರಿಂದ 7,000 ರೂ. ಮಾತ್ರ. ಅದೂ ಭತ್ಯೆಗಳೂ ಸೇರಿ.
ಇನ್ನೂ ಆಂಬ್ಯುಲೆನ್ಸ್ ಚಾಲಕರಿಗೆ 10,000-12,000 ರೂ. ಸಿಗುತ್ತದೆ. ಇವರು 108 ಸಿಬ್ಬಂದಿಯಾಗಿದ್ದರೆ ಮಾತ್ರ. ಇನ್ನೂ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಪ್ರಕಾರ ಕೆಲಸ ಮಾಡುವವರಿಗೆ ಅಬ್ಬಬ್ಬಾ ಎಂದರೆ 10,000 ರೂ. ದಾಟುವುದಿಲ್ಲ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆಯಲ್ಲೇ ಫ್ರಂಟ್ಲೈನ್ ವಾರಿಯರ್ಗಳ ಜೀವನ ಧಾರುಣವಾಗಿದೆ.
ಮತ್ತೊಂದೆಡೆ, ಆಂಬ್ಯುಲೆನ್ಸ್ ಸಿಬ್ಬಂದಿಯಲ್ಲಿ ಹೊರ ಗುತ್ತಿಗೆ ಕಾರ್ಮಿಕರೇ ಹೆಚ್ಚು. ಬರುವ ವೇತನದಲ್ಲಿ ಅರ್ಧ ಪಾಲು ಏಜೆನ್ಸಿಗಳ ಪಾಲಾದರೆ, ಉಳಿದಿದ್ದರಲ್ಲಿ ಅವರು ಜೀವನ ಸಾಗಿಸಬೇಕಿದೆ. ಸರಕಾರ ಮುಂಚೂಣಿ ಕಾರ್ಯಕರ್ತರು ಎಂದು ಭಜನೆ ಮಾಡುತ್ತಿದ್ದರೂ ಅದರಿಂದ ಇವರಿಗೆ ಸಿಗುತ್ತಿರುವ ಭಾಗ್ಯವೇನೂ ಇಲ್ಲ.
ಪ್ರಾಣ ಪಣಕಿಟ್ಟರೂ ಬೆಲೆ ಇಲ್ಲ
ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆರು, ನರ್ಸ್ಗಳು, ವೈದ್ಯರು ಹಾಗೂ 108 ಆಂಬ್ಯುಲೆನ್ಸ್ ಚಾಲಕರು ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವುದರಿಂದ ಶುರುವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ಅವರಿಗೆ ವಾಸಿಯಾದ ನಂತರ ಅವರನ್ನು ಪುನಾ ಮನೆಗೆ ಬಿಡುವವರೆಗೂ ಜವಾಬ್ದಾರಿಯಿಂದ ನಡೆದುಕೊಂಡರೂ ಸಮಾಜದಲ್ಲಿ ಸೂಕ್ತ ಬೆಲೆ ಸಿಗದೆ ಹಿಂದುಳಿದಿದ್ದಾರೆ.
ಯಾರು ಏನಂತಾರೆ?
ಆಂಬ್ಯುಲೆನ್ಸ್ ಚಾಲಕರು ಹಾಗೂ ದಾದಿಯರ ಸೇವೆ ನಿಜಕ್ಕೂ ಶ್ಲಾಘನೀಯ, ಇಂತಹ ಪ್ಯಾಂಡಮಿಕ್ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕರು, ದಾದಿಯರು ಮಾಡುತ್ತಿರುವ ಸೇವೆಗೆ ಸರ್ಕಾರ ಕೂಡಲೇ ಸ್ಪಂದಿಸಿ ಅವರಿಗೆ ಸೂಕ್ತ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಮುಂತಾದ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು, ಹಾಗೂ ಇವರ ಹಗಲಿರುಳು ಮಾಡುವ ಸೇವೆಗೆ ಸಮಾಜದ ಪ್ರತಿಯೊಬ್ಬ ಜನರು ಗೌರವವನ್ನು ನೀಡಬೇಕು.
ಜಿ.ವಿ.ಗೋಪಿ / ಸ್ಥಳೀಯರು, ಗುಡಿಬಂಡೆ
ಕೊರೋನಾ ಆರಂಭದಿಂದ 24/7 ಕೆಲಸ ನಿರ್ವಹಿಸುತ್ತಿದ್ದೇವೆ, ನಮಗೆ ಕಡಿಮೆ ವೇತನ, ಸೌಲಭ್ಯ ಹಾಗೂ ಸುರಕ್ಷಿತವೂ ಕೂಡ ಕಡಿಮೆ ನಮ್ಮ ಸೇವೆಯನ್ನು ಗುರುತಿಸುವವರು ಇಲ್ಲ, ನಮಗೆ ಸೂಕ್ತ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಸೂಕ್ತ ಸೌಲಭ್ಯಗಳನ್ನು ನೀಡಿ ನಮಗೆ ಆಶ್ರಯ ನೀಡಬೇಕೆಂದು ವನವಿ ಮಾಡಿದರು.
ವೆಂಕಟೇಶ್ / ಆಂಬ್ಯುಲೆನ್ಸ್ ಚಾಲಕ, ಗುಡಿಬಂಡೆ