SHG-95 ಮುಖಗವಸು 90% ಜೀವ ಕಣಗಳು, ಧೂಳು ಹಾಗೂ 99% ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸುವ ದಕ್ಷತೆ ಹೊಂದಿವೆ
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಸೋಂಕು ಜಗತ್ತಿನಾದ್ಯಂತ ಇಡೀ ಮನುಕುಲವನ್ನೇ ಕಾಡುತ್ತಿದೆ. ಈ ಸೋಂಕು ಹರಡುವುದನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಪ್ರಾಥಮಿಕವಾಗಿ ಮಾಡಬೇಕಾದ ರಕ್ಷಣಾ ಕ್ರಮಗಳೆಂದರೆ, ನಿಯಮಿತವಾಗಿ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವುದು, ಮಾಸ್ಕ್ ಧರಿಸುವುದು, ಕನಿಷ್ಠ 2 ಗಜ ದೂರ ಭೌತಿಕ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಸೋಂಕಿತ ವ್ಯಕ್ತಿಯಿಂದ ಕೋವಿಡ್-19 ಸೋಂಕು ಹರಡುವುದನ್ನು N95 ಮಾಸ್ಕ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ದೀರ್ಘ ಕಾಲದ ಬಳಕೆಗೆ N95 ಮಾಸ್ಕ್ ಬಳಕೆ ಹಿತಕರವಲ್ಲ ಮತ್ತು ಅದನ್ನು ಹೆಚ್ಚಿನ ಬಾರಿಗೆ ವಾಶ್ ಮಾಡಲಾಗದು ಎಂಬುದು ಇದೀಗ ಸಾಬೀತಾಗಿದೆ.
ಈ ನಿಟ್ಟಿನಲ್ಲಿ ಇದಕ್ಕೆ ಪರ್ಯಾಯವಾಗಿ ಬಹು ಪದರದ ಹೈಬ್ರಿಡ್ ಮಾಸ್ಕ್ʼಗಳನ್ನು ಅಭಿವೃದ್ಧಿಪಡಿಸುವಂತೆ ಪರಿಶೋಧನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಕೋರಿತ್ತು. ಇದಕ್ಕೆ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ(ಬಿರಾಕ್) ಮತ್ತು ಐಕೆಪಿ ನಾಲೆಡ್ಜ್ ಪಾರ್ಕ್ ಭಾಗಶ: ಬೆಂಬಲ ನೀಡಿ ಕೇಂದ್ರ ಸರಕಾರದ ಕ್ಷಿಪ್ರ ಕೋವಿಡ್ ನಿಧಿ ಅಡಿ ಆರ್ಥಿಕ ನೆರವು ಒದಗಿಸಲಾಗಿತ್ತು.
ಅಭಿವೃದ್ಧಿಗೆ ಈಗಾಗಲೇ ಚಾಲನೆ
SHG-95 ಹೆಸರಿನ ಸಾಮಾಜಿಕ ಮುಖಗವಸುಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಈಗಾಗಲೇ ಚಾಲನೆ ದೊರೆತಿದ್ದು, ಮೇಡ್ ಇನ್ ಇಂಡಿಯಾದ ಈ ಮುಖಗವಸುಗಳು 90% ಜೀವ ಕಣಗಳು ಮತ್ತು ಧೂಳು ಹಾಗೂ 99% ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸುವ ದಕ್ಷತೆ ಹೊಂದಿವೆ. ಈ ಮುಖಗವಸುಗಳು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಡಲಿವೆ, ಆರಾಮದಾಯಕ ಕಿವಿ ಕುಣಿಕೆ ಇರುತ್ತದೆ. ಉಷ್ಣವಲಯದ ಪರಿಸ್ಥಿತಿಯಲ್ಲೂ ಬಳಸಲು ಅನುಕೂಲಕರವಾಗಿದೆ. ಏಕೆಂದರೆ ಅವುಗಳನ್ನು ಸಂಪೂರ್ಣ ಕೈಯಿಂದ ನೇಯ್ಗೆ ಮಾಡಿದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಈ ಮುಖಗವಸಿಗೆ ವಿಶೇಷ ಶುದ್ಧೀಕರಣ ಪದರ ಅಳವಡಿಸಿರುವುದು ಮತ್ತೊಂದು ಅನುಕೂಲ. ಕೈಯಿಂದ ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಈ ಮಾಸ್ಕ್|ಗಳನ್ನು 50-75 ರೂಪಾಯಿಗೆ ಮಾರಾಟ ಮಾಡಲು ಕಂಪನಿ ಅಂದಾಜಿಸಿದೆ. ಎಲ್ಲರಿಗೂ ಕೈಗೆಟಕುವ ದರಕ್ಕೆ ಮುಖಗವಸು ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ.
ಈಗಾಗಲೇ ಸುಮಾರು 1,45,000ಕ್ಕಿಂತ ಹೆಚ್ಚಿನ ಮುಖಗವಸುಗಳು ಮಾರಾಟವಾಗಿವೆ. ಈ ಉಪಕ್ರಮಕ್ಕೆ ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಸಂಸ್ಥೆ ಆರ್ಥಿಕ ನೆರವು ಒದಗಿಸಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯ ಬೇಡಿಕೆಗೆ ಅನುಗುಣವಾಗಿ SHG-95 ಹೆಸರಿನ ಮಾಸ್ಕ್|ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಲವಾರು ಸ್ವಸಹಾಯ ಗುಂಪುಗಳ ಸದಸ್ಯರನ್ನು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಅವರ ಜೀವನಾಧಾರ ಸುಧಾರಣೆಗೆ ಒತ್ತು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು www.dbtindia.gov.in ಮತ್ತು www.birac.nic.in ಇಲ್ಲಿಂದ ಪಡೆಯಬಹದಾಗಿದೆ.
- ವರದಿ: ಪಿಐಬಿ
- Lead photo courtesy: Amazon