ವಿಜಯ್ ಮಿದುಳು ನಿಷ್ಕ್ರಿಯ I ಕನ್ನಡ ಚಿತ್ರರಂಗದ ಸಹಜ ನಟನ ಅಂಗಾಂಗ ದಾನ I ಚಿತ್ರರಂಗ ಆಘಾತ I ನಿಧನ ಪ್ರಕಟಣೆ ಇಲ್ಲ
ಬೆಂಗಳೂರು: ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಅಂಗಾಂಗಳನ್ನು ದಾನ ಮಾಡಲಾಗಿದೆ.
ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಜಯ್ ಅವರ ಅಂಗಾಂಗಳನ್ನು ದಾನ ಮಾಡುವ ನಿರ್ಧಾರವನ್ನು ಅವರ ಕುಟುಂಬ ಸದಸ್ಯರು ಕೈಗೊಂಡಿದ್ದು, ಸದ್ಯಕ್ಕೆ ಅಪೊಲೋ ವೈದ್ಯರೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆ ವೈದ್ಯರು ನಡೆಸಿದ ಸರ್ವ ಪ್ರಯತ್ನಗಳು ಫಲಕಾರಿಯಾಗಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಈ ನಿರ್ಧಾರ ಕಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಿದುಳು ಸಂಪೂರ್ಣ ನಿಷ್ಕ್ರಿಯ
ವಿಜಯ್ ಅವರ ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿಲ್ಲ. ಭಾನುವಾರ ತಡರಾತ್ರಿ ಅವರಿಗೆ ಹೃದಯಾಘಾತವೂ ಆಗಿದೆ ಎಂಯ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
ಅಂಗಾಂಗ ದಾನ ಪ್ರಕ್ರಿಯೆ ಮುಗಿಯಲು ಇನ್ನೂ ಕೆಲ ಗಂಟೆಗಳೇ ಬೇಕಾಗಿದ್ದು, ಅದುವರೆಗೂ ಅವರ ನಿಧನ ವಾರ್ತೆಯನ್ನು ಪ್ರಟಿಸಲಾಗದು ಎಂದು ಆಸ್ಪತ್ರೆ ಮೂಲಗಳು ಇವೆ.
ಅಂಗಾಂಗಗಳನ್ನು ತೆಗೆಯುವ ಮುನ್ನ ಆಸ್ಪತ್ರೆಯು ವಿಜಯ್ ಅವರ ಕುಟುಂಬ ಸದಸ್ಯರು ಹಾಗೂ ಸರಕಾರದ ಅನುಮತಿ ಪಡೆಯಬೇಕಾಗುತ್ತಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಆಸ್ಪತ್ರೆಯಲ್ಲಿ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಿದ್ದವು.
ವಿಜಯ್ ಚಿಕಿತ್ಸಾ ವೆಚ್ಚ ಭರಿಸಿದ ಡಿಸಿಎಂ
ಸಂಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂದೆ ಬಂದಿದ್ದಾರೆ.
ಇಂದು ಬೆಳಗ್ಗೆಯೇ ವಿಜಯ್ ಅವರು ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಖುದ್ದಾಗಿ ಕರೆ ಮಾಡಿ ವಿಜಯ್ ಅವರ ಯೋಗ-ಕ್ಷೇಮ ವಿಚಾರಿಸಿದ ಡಿಸಿಎಂ, ಅವರ ಚಿಕಿತ್ಸೆ ಆಗುವ ಸಂಪೂರ್ಣ ವೆಚ್ಚವನ್ನು ತಮ್ಮ ನೇತೃತ್ವದ ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ಭರಿಸುತ್ತದೆ ಎಂದು ಭರವಸೆ ನೀಡಿದರು.
ವಿಜಯ್ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರ ಸಂಬಂಧಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಹಣ ಪಾವತಿಸಿಕೊಳ್ಳದಂತೆ ಅವರು ಆಸ್ಪತ್ರೆ ಆಡಳಿತ ವರ್ಗಕ್ಕೆ ಸೂಚಿಸಿದ್ದಾರೆ. ಬಳಿಕ ಅವರು ಆಸ್ಪತ್ರೆಗೂ ಭೇಟಿ ನೀಡಿ ವೈದ್ಯರ ಬಳಿ ಮಾಹಿತಿ ಪಡೆದರು. ಅಲ್ಲದೆ, ಆಸ್ಪತ್ರೆಯಲ್ಲಿದ್ದ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ನಾನು ಅವನಲ್ಲ…ಅವಳು ಚಿತ್ರದಲ್ಲಿ ಸಂಚಾರಿ ವಿಜಯ್
ಹಬ್ಬಿದ ಸಾವಿನ ಸುದ್ದಿ
ಇನ್ನೊಂದೆಡೆ, ಸಾಮಾಜಿಕ ಜಾಲ ತಾಣಗಳಲ್ಲಿ ಸಂಚಾರಿ ವಿಜಯ್ ನಿಧನರಾಗಿದ್ದಾರೆಂಬ ಸ್ಟೇಟಸ್ ಹಾಕಲಾಗಿದೆ. ಅಲ್ಲದೆ, ಬಹಳಷ್ಟು ಸಚಿವರು ವಿಜಯ್ ನಿಧನಕ್ಕೆ ಸಂತಾಪ ಎಂಬ ಸುದ್ದಿಗಳನ್ನು ಆಗಲೇ ಕಳಿಸಿದ್ದಾರೆ. ಅಷ್ಟೇ ಅಲ್ಲದೆ, ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಕೂಡ ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ. ಆದರೆ, ಅಂಗಾಂಗ ದಾನದ ಪ್ರಕ್ರಿಯೆ ಮುಗಿಯುವ ತನಕ ಈ ಬಗ್ಗೆ ಪ್ರಕಟಣೆ ಇಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಸಿಎಂ ಅಶ್ವತ್ಥನಾರಾಯಣ ಅವರು ವೆಂಟಿಲೇಟರ್ ಮೇಲೆ ವಿಜಯ್ ಉಸಿರಾಡುತ್ತಿದ್ದರು ಎಂದು ತಿಳಿಸಿದರು. ಹಿರಿಯ ನಟ ಜಗ್ಗೇಶ್ ಕೂಡ ಇದೇ ಮಾತನ್ನು ಹೇಳಿದರು. ವೆಂಟಿಲೇಟರ್ ಮೇಲೆ ಮಲಗಿದ್ದ ವಿಜಯ್ ಅವರನ್ನು ಕಂಡು ಜಗ್ಗೇಶ್ ಬಿಕ್ಕಳಿಸಿದರು. ಇನ್ನು ನಟ ನೀನಾಸಂ ಸತೀಶ್ ಬಿಕ್ಕಿಬಿಕ್ಕಿ ಅತ್ತರು. ಡಿಸಿಎಂ ಕೂಡ ತೀವ್ರ ಗದ್ಗದಿತರಾದರು ಎಂದು ಗೊತ್ತಾಗಿದೆ.