ಬಿಕ್ಕಟ್ಟು ಪರಿಹರಿಸಲು ಬುಧವಾರ ಬರುವ ಸಿಂಗ್ ಸ್ವತಃ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬಿಕ್ಕಟ್ಟಿಗೆ ತೆರೆ ಎಳೆಯುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಉಸ್ತುವಾರಿ ಆರುಣ್ ಸಿಂಗ್ ವಿರುದ್ಧವೇ ಅತೃಪ್ತಿಯ ಹೊಗೆಯೆದ್ದಿದೆ.
ಬಿಕ್ಕಟ್ಟು ಶಮನ ಮಾಡುವ ಸಲುವಾಗಿ ನಾಳೆ (ಬುಧವಾರ) ಸಂಜೆ 5 ಗಂಟೆ ಹೊತ್ತಿಗೆ ಬೆಂಗಳೂರಿಗೆ ಲ್ಯಾಂಡ್ ಆಗಲಿದ್ದಾರೆ ಅರುಣ್ ಸಿಂಗ್. ಏರ್‌ಪೋರ್ಟ್‌ನಲ್ಲಿಯೇ ಅವರನ್ನು ಓಲೈಸಲು ಸಿಎಂ ನಿಷ್ಠರು ಸಿದ್ಧತೆ ಮಾಡಿಕೊಂಡಿದ್ದರೆ, ಅಂಥ ಔಪಚಾರಿಕ ಕಸರತ್ತುಗಳಿಂದ ದೂರವಿರಲು ವಿರೋಧಿ ಬಣ ನಿರ್ಧರಿಸಿದೆ.
ಒಂದೆಡೆ ಮುಖ್ಯಮಂತ್ರಿ ಬೆಂಬಲಿಗರ ಒತ್ತಡ, ಇನ್ನೊಂದೆಡೆ ಬಂಡಾಯ ಶಾಸಕರ ವರಸೆಯಿಂದ ಅಡಕತ್ತರಿಯಲ್ಲಿ ಸಿಲುಕಿರುವ ಅರುಣ್ ಸಿಂಗ್, ವರಿಷ್ಠರು ನೀಡಿರುವ ಸೂಚನೆಗಳ ಪಟ್ಟಿ ಇಟ್ಟುಕೊಂಡೇ ಎಲ್ಲ ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಅರುಣ್ ಸಿಂಗ್ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಎದಿರುಗೊಳ್ಳಲು ಅತೃಪ್ತರಲ್ಲದ ಶಾಸಕರು ಸಿದ್ಧತೆ ನಡೆಸಿದ್ದಾರೆ. ಈ ಪೈಕಿ ಶಾಸಕ ರೇಣುಕಾಚಾರ್ಯ ಏನು ಮಾಡುತ್ತಾರೆಂಬ ಕುತೂಹಲ ಎಲ್ಲರದ್ದು. ಮತ್ತೊಂದೆಡೆ ವಾರದಿಂದ ನಗರದ ಹೊರಗಿದ್ದ ಬಹುತೇಕ ಶಾಸಕರು ರಾಜಧಾನಿಗೆ ವಾಪಸ್ ಆಗುತ್ತಿದ್ದಾರೆ. ಕಳೆದ 3 ದಿನಗಳಿಂದ ದೆಹಲಿಯಲ್ಲಿ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಶಾಸಕ ಅರವಿಂದ ಬೆಲ್ಲದ್ ಕೂಡ ಅರುಣ್ ಸಿಂಗ್ ಬರುವುದಕ್ಕೆ ಮೊದಲೇ ವಾಪಸ್ ಬಂದಿದ್ದಾರೆ.
ಅರವಿಂದ ಬೆಲ್ಲದ್
ಸಿಎಂ ವಿರೋಧಿಗಳ ದೂರು ಹಾಗೂ ಸಿಎಂ ಆಪ್ತರ ಪ್ರತಿದೂರಿನಿಂದ ಕಂಗೆಟ್ಟಿರುವ ಹೈಕಮಾಂಡ್ ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನಸ್ಸು ಮಾಡಿದೆ. ಈ ನಡುವೆ ಅರವಿಂದ ಬೆಲ್ಲದ್ ಅವರು, “ದಿಲ್ಲಿ ನಾಯಕರನ್ನು ಭೇಟಿಯಾಗಿದ್ದು ನಿಜ. ಅವರಿಗೆ ಹೇಳಬೇಕಾದ್ದನ್ನು ಹೇಳಿದ್ದೇನೆ” ಎಂದು ಹೇಳಿದ್ದಾರೆ. ಇನ್ನು, ಅರುಣ್ ಸಿಂಗ್ ಮುಂದೆ ಶಾಸಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಲು ಪಕ್ಷ ನಿರ್ಧರಿಸಿದೆ.
ಈ ಪೈಕಿ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಬಸವಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಎಚ್.ವಿಶ್ವನಾಥ್, ಸುನೀಲ್ ಕುಮಾರ್ ಮುಂತಾದವರ ಜತೆ ಅರುಣ್ ಸಿಂಗ್ ಪ್ರತ್ಯೇಕ ಮಾತಕತೆ ನಡೆಸಲಿದ್ದಾರೆ. “ಈ ಬಗ್ಗೆ ಹೊರಗೆ ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇನ್ನು ಅರುಣ್ ಸಿಂಗ್‌ಗೆ ಹೇಳಬೇಕಾದ್ದನ್ನು ಹೇಳುತ್ತೇನೆ” ಎಂದಿದ್ದಾರೆ ವಿಶ್ವನಾಥ್.
ಹುಣಸೂರಿನಲ್ಲಿ ತಮ್ಮ ಸೋಲು ಹೇಗಾಯಿತು? ಅದಕ್ಕೆ ಸಿ.ಪಿ.ಯೋಗೇಶ್ವರ್ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಹೇಗೆ ಕಾರಣರು ಎಂಬುದನ್ನು ವಿಶ್ವನಾಥ್ ಅವರು ಅರುಣ್ ಸಿಂಗ್ ಅವರಿಗೆ ಬಿಡಿಸಿ ಹೇಳುವ ನಿರೀಕ್ಷೆ ಇದೆ.
ಎಚ್.ವಿಶ್ವನಾಥ್
ಅರುಣ್ ಸಿಂಗ್ ವಿರುದ್ಧ ದೂರು
ಶಾಸಕರ ಅಭಿಪ್ರಾಯ ಆಲಿಸುವ ಮೊದಲೇ ಯಡಿಯೂರಪ್ಪ ಬದಲಾವಣೆ ಇಲ್ಲ ಎಂದು ಹೇಳಿದ್ದ ಅರುಣ್ ಸಿಂಗ್ ಬಗ್ಗೆ ಅರವಿಂದ ಬೆಲ್ಲದ್ ಸೇರಿ ಭಿನ್ನರ ಗುಂಪಿನ ಬಹುತೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಶಾಸಕರ ಅಹವಾಲು ಕೇಳುವುದಕ್ಕೆ ಮೊದಲೇ ದಿಲ್ಲಿಯಲ್ಲಿ ಯಡಿಯೂರಪ್ಪ ಪರವಾಗಿ ಮಾತನಾಡಿದ್ದು ಸರಿಯಲ್ಲ. ಅವರಿಂದ ನಮಗೆ ನ್ಯಾಯ ಸಿಗಲಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬೆಲ್ಲದ್ ಅವರಿಗೆ ಬಿ.ಎಲ್.ಸಂತೋಷ್ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಸ್ತುವಾರಿ ಉಸಾಬರಿಯೇ ಇಲ್ಲದೆ ನೇರವಾಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ.
ಮತ್ತೊಂದೆಡೆ; ಬಸನಗೌಡ ಯತ್ನಾಳ್, ತಿಪ್ಪಾರೆಡ್ಡಿ ಸಚಿವ ಯೋಗೇಶ್ವರ್ ಹಾಗೂ ಸುನೀಲ್ ಕುಮಾರ್ ಮುಂತಾದವರು ಸಿಂಗ್ ನಡೆಯ ಬಗ್ಗೆ ಕಿಡಿಕಾರಿದ್ದಾರೆ.
ನಗರದಲ್ಲೇ ಕೇಂದ್ರ ಸಚಿವರು
ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಷಿ ಅವರನ್ನು ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹ ಮಾಡುವ ಸಮಯದಲ್ಲಿ ನಗರದಲ್ಲೇ ಇರುವಂತೆ ಸಿಎಂ ಬಣ ಕೇಳಿಕೊಂಡಿದೆ ಎಂದು ಗೊತ್ತಾಗಿದೆ. ಈ ಹಿನ್ನೆಯಲ್ಲಿ ಈ ಇಬ್ಬರೂ ಸಚಿವರು ನಾಳೆಯಿಂದ ಮೂರು ದಿನ ರಾಜಧಾನಿಯಲ್ಲೇ ಉಳಿಯಲಿದ್ದಾರೆನ್ನಲಾಗಿದೆ. ಇವರಿಬ್ಬರೂ ಬಹಿರಂಗವಾಗಿಯೇ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಅರುಣ್ ಸಿಂಗ್ ರಾಜ್ಯ ಕೋರ್ ಕಮಿಟಿ ಸದಸ್ಯರ ಜತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆಂಬ ಮಾಹಿತಿ ಸಿಕ್ಕಿದೆ ಹಾಗೂ ಸಂಘ ಪರಿವಾರದ ಪ್ರಮುಖರ ಜತೆಯೂ ಅವರು ಭೇಟಿಯಾಗಲಿದ್ದಾರೆ.