ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಅಚ್ಛೇದಿನ್ ಬಂದಿರುವುದು ಬಿಜೆಪಿ ನಾಯಕರಿಗೆ ಹೊರತು ಕಾಮನ್ಮ್ಯಾನ್ಗೆ ಅಲ್ಲ ಎಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ
by M Krishnappa Chikkaballapura
ಚಿಕ್ಕಬಳ್ಳಾಪುರ: ಅಚ್ಛೇ ದಿನ್ ಬಿಜೆಪಿಗೆ ಬಂದಿದೆ. ಜನರಿಗಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ದೂರಿದರು.
ಚಿಕ್ಕಬಳ್ಳಾಪುರಲ್ಲಿ ಮಂಗಳವಾರ ತೈಲ ಬೆಲೆ ಏರಿಕೆ ವಿರುದ್ಧ ನಗರದ ಬಿ.ಬಿ.ರಸ್ತೆಯಲ್ಲಿನ ಭಾರತ ಪೆಟ್ರೋಲ್ ಬಂಕ್ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡೀಸಲ್-ಪೆಟ್ರೋಲ್ ಮಾತ್ರವಲ್ಲದೆ ಅಗತ್ಯ ವಸ್ತುಗಳು ಕೂಡ ದುಬಾರಿಯಾಗಿವೆ. ಪ್ರಧಾನಿ ಮೋದಿ ಅವರು ಪ್ರಾರಂಭದಲ್ಲಿ ಅಚ್ಛೇ ದಿನ್ ಆಯೇಗಾ ಎಂದು ಹೇಳಿದ್ದರು. ಬಹುಶಃ ಇಂಥ ದುರ್ಬರ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಹೇಳಿದ್ದರಾ ಎನ್ನುವ ಪ್ರಶ್ನೆ ನಮಗೆ ಕಾಡುತ್ತಿದೆ ಎಂದರು.
ಭಾರತದಲ್ಲಿ ಇವತ್ತು ಸಾಮಾನ್ಯ ಜನರು ಬದುಕಲು ಸಾಧ್ಯವಿಲ್ಲ. ಇದು ಹಣವಂತರ ಭಾರತವಾಗಿದೆ. ಸಾಮಾನ್ಯರು ಬೆಲೆ ಏರಿಕೆಗೆ ತತ್ತರಿಸಿ ಉಪವಾಸ ಸಾಯುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಕೋವಿಡ್ ರಾಷ್ಟ್ರೀಯ ವಿಪ್ಪತನ ಕಾಲದಲ್ಲೂ ಬೆಲೆಗಳನ್ನು ನಿಯಂತ್ರಿಸದೇ ಮೋದಿ ಅವರು ಕಾರ್ಪೋರೇಟ್ ಕಂಪನಿಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಜಯಚಂದ್ರ ಟೀಕಿಸಿದರು.
ಸುಧಾಕರ್ ವಿರುದ್ಧ ರೆಡ್ಡಿ ವಾಗ್ದಾಳಿ
ಮಾಜಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ ಮಾತನಾಡಿ; “ತೈಲ ಬೆಲೆ ಏರಿಕೆಯಿಂದ ಜನರ ಪಾಡು ದುರ್ಬರವಾಗಿರುವುದು ಒಂದೆಡೆಯಾದರೆ, ಕೋವಿಡ್ ನಿಯಂತ್ರಣದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ” ಎಂದು ಆರೋಪಿಸಿದರು.
ಸಚಿವ ಡಾ.ಕೆ.ಸುಧಾಕರ್ ಅಧಿಕಾರದ ಮದದಿಂದ ಮೆರೆಯುತಿದ್ದಾರೆ. ಅಧಿಕಾರದ ಪಿತ್ತ ಅವರ ನೆತ್ತಿಗೇರಿದೆ. ಅಧಿಕಾರ ಶಾಶ್ವತವಲ್ಲ; ಇಲ್ಲಿನ ಒಬ್ಬ ಡಿವೈಎಸ್ಪಿ ತನ್ನ ಕರ್ತವ್ಯ ಏನೆಂಬುದನ್ನೇ ಅರಿಯದೆ ಸುಧಾಕರ್ʼಗೆ ಸೆಕ್ಯುರಿಟಿ ಗಾರ್ಡ್ ಥರಾ ಕೆಲಸ ಮಾಡ್ತಾರೆ. ತಾನು ಧರಿಸಿದ ಸಮವಸ್ತ್ರಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸುಧಾಕರ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅರಾಜಕತೆ ತಾಂಡವವಾಡುತಿದೆ ಎಂದು ಅವರು ದೂರಿದರು.
ಬಾಗೇಪಲ್ಲಿ ಶಾಸಕ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯ ಶಂಕರ್, ಕೋಚಿಮಲ್ ನಿರ್ದೇಶಕ ಭರಣಿ ವೆಂಕಟೇಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪುರದಗಡ್ಡೆ ಪಿ.ಎನ್ ಮುನೇಗೌಡ, ಕೆಪಿಸಿಸಿ ಕಾರ್ಯದರ್ಶಿ ಅಡ್ಡಗಲ್ ಶ್ರೀಧರ್, ಯಲವಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ವಕೀಲ ನಾರಾಯಣಸ್ವಾಮಿ, ಜಾತವಾರ ರಾಮಕೃಷ್ಣಪ್ಪ. ನರೇಂದ್ರ., ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಮಹಿಳಾ ಮುಖಂಡರಾದ ಮಮತಾ ಮೂರ್ತಿ, ಮಂಗಳಾ ಪ್ರಕಾಶ್, ಸುಮಿತ್ರಾ ನಾರಾಯಣಸ್ವಾಮಿ, ಯುವ ಕಾಂಗ್ರೆಸ್ ಮುಖಂಡರಾದ ಗುಂತಪನಹಳ್ಳಿ ವೆಂಕಟೇಶ್, ಪ್ರೆಸ್ ಸುರೇಶ್, ನಂದಿ ಅಶೋಕ್, ನಗರಸಭೆ ಸದಸ್ಯರಾದ ಕಣಿಹತಳ್ಳಿ ವೆಂಕಟೇಶ್ ಅಂಬರೀಶ್, ನರಸಿಂಹಮೂರ್ತಿ, ಸಂತೋಷ್, ರಾಜಶೇಖರ್ ಬುಜ್ಜಿ, ಜಗದೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮುದಾಸಿರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಬಂಗಾರಿ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಶಾಹಿದ್ ಅಮೀಮ್ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.