ಜಿಲ್ಲೆಯ ಮೂವರು ಉನ್ನತಾಧಿಕಾರಿಗಳನ್ನು ಮಂಗಗಳಿಗೆ ಹೋಲಿಸಿದ ಎನ್. ಎಚ್.ಶಿವಶಂಕರ ರೆಡ್ಡಿ!
ಸಚಿವರ ಕಾರಿನ ಡೋರ್ ತೆಗೆಯುವ ಡಿವೈಎಸ್‌ಪಿಗೆ ಸಮವಸ್ತ್ರದ ಸ್ವಾಭಿಮಾನದ ಪಾಠ ಮಾಡಿದ ಮಾಜಿ ಸಚಿವ
ಚಿಕ್ಕಬಳ್ಳಾಪುರ: ಜಿಲ್ಲೆಯ ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಮೂರು ಮಂಗಗಳಿಗೆ ಹೋಲಿಸಿರುವ ಗೌರಿಬಿದನೂರು ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಆ ಮೂವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ʼ100 ನಾಟ್ ಔಟ್ʼ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಈ ಮೂವರು ಉನ್ನತ ಅಧಿಕಾರಿಗಳನ್ನು ಮಂಗಗಳಿಗೆ ಹೋಲಿಸಿ ಬೀದಿಯಲ್ಲೇ ಲೇವಡಿ ಮಾಡಿದರು.
ಈ ಮೂಲಕ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್ ಅವರ ಕಾರ್ಯವೈಖರಿಯನ್ನು ಅವರು ಕಟುವಾಗಿ ಟೀಕಿಸಿದರು. ಈ ಮೂವರು ಅಧಿಕಾರಿಗಳು ಜನರ ಹಿತವನ್ನು ಮರೆತು ಉಸ್ತುವಾರಿ ಸಚಿವ ಡಾ,ಕೆ.ಸುಧಾಕರ್ ಅವರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆಂದು ನೇರವಾಗಿ ಆರೋಪಿಸಿದರು ಶಿವಶಂಕರ ರೆಡ್ಡಿ.
ಗಾಂಧಿಜಿ ಅವರ ಮಂಗಗಳ ರೂಪಕಕ್ಕೆ ಹೋಲಿಕೆ!!
ಜಿಲ್ಲಾಧಿಕಾರಿ ಆರ್.ಲತಾ
ಮಹಾತ್ಮ ಗಾಂಧಿಜಿ ಅವರ ಮಂಗಳ ರೂಪಕಕ್ಕೆ ತ್ರಿವಳಿ ಅಧಿಕಾರಿಗಳ ವೈಖರಿಯನ್ನು ಹೋಲಿಸಿದ ರೆಡ್ಡಿ; ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ ಹಾಗೂ ಕೆಟ್ಟದ್ದನ್ನು ಮಾತನಾಡಬೇಡಿ ಎಂದು ಗಾಂಧೀಜಿ ಹೇಳಿದ್ದಂತೆ ಈ ಮೂವರು ಅಧಿಕಾರಿಗಳು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿರುವ ಕೋತಿಗಳಾಗಿದ್ದಾರೆ. ಇನ್ನು, “ಬೇರೆಯವರ ಮಾತನ್ನು ಕೇಳಬೇಡಿ! ನಮ್ಮ ಮಾತನ್ನೇ (ಸಚಿವರು) ಕೇಳಿ. ಬೇರೆಯವರು ನೋಡಿದ್ರೆ ಕಣ್ಮುಚ್ಚಿಕೊಳ್ಳಿ!! ಬೇರೆಯವರ ಬಗ್ಗೆಯೂ ಮಾತನಾಡಬೇಡಿ!!! ಎನ್ನುವಂತೆ ಆಗಿದೆ ಇವರ ಕಾರ್ಯವೈಖರಿ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್
ಇಷ್ಟಕ್ಕೂ ರೆಡ್ಡಿ ಹೇಳಿದ್ದೇನು? ಇಲ್ಲಿದೆ ಪೂರ್ಣ ಪಾಠ
ಅಧಿಕಾರಿಗಳು ಸಚಿವರ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಇವರು ಶ್ರೀ ಸಾಯಿಕೃಷ್ಣಾ ಚಾರಿಟಬಲ್ ಟ್ರಸ್ಟ್‌ಗೆ ಸೆಕ್ರೆಟರಿ, ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರಿಗೆ.
ಒಬ್ಬ ಎಸ್‌ಪಿಗಾಗಲಿ, ಡೀಸಿಗಾಗಲಿ ಘನತೆ ಅನ್ನೋದು ಇರುತ್ತದೆ. ಇಲ್ಲಿ ಕೆಲಸ ಮಾಡುವ ಡಿವೈಎಸ್‌ಪಿ ಸಚಿವರ ಕಾರಿನ ಬಾಗಿಲು ತೆರೆಯುತ್ತಾರಂತೆ! ಅವರು ತೊಟ್ಟಿರುವ ಡ್ರೆಸ್‌ಗೆ ಮರ್ಯಾದೆ ಬೇಡವೇ? ಸ್ವಾಭಿಮಾನ ಇಲ್ವಾ? ಸಮವಸ್ತ್ರಕ್ಕೆ ಮರ್ಯಾದೆ ಇಲ್ವಾ? ಸಚಿವರು ಬಂದರೆ ಅವರ ಜತೆ ಈ ಅಧಿಕಾರಿಗಳೆಲ್ಲ ಎಲ್ಲ ಕಡೆಗೂ ಹೋಗಬೇಕು. ಯಾವ ಹಳ್ಳಿಗೆ ಹೋದ್ರೂ ಹೋಗಬೇಕು. ಇವರು ಸಚಿವ ಮಹಾಶಯರಿಗೆ ಎಸ್ಕಾರ್ಟ್ ಕೊಡಬೇಕೇ. ಮುಂದೆ ಎರಡು ವಾಹನ, ಹಿಂದೆ ಎರಡು ವಾಹನ. ನಾನು ಕೂಡ ಮಂತ್ರಿಯಾಗಿದ್ದೆ. ಎಷ್ಟು ಸಲ ಎಸ್ಕಾರ್ಟ್ ಕೇಳಿದ್ದೆ. ಎಷ್ಟು ಸಲ ನನಗೆ ಎಸ್ಕಾರ್ಟ್ ನೀಡಿದ್ರಿ?
ಅಧಿಕಾರವನ್ನು ಈ ರೀತಿ ದುರುಪಯೋಗ ಮಾಡಿಕೊಳ್ಳಬಾರದು. ಎಸ್ಕಾರ್ಟ್ ಮೂಲಕ ದರ್ಬಾರ್ ತೋರಿಸೋದು ಸರಿಯಲ್ಲ. ಇಂಥ ರಾಜಕಾರಣ ಬಹಳ ದಿನ ಉಳಿಯೋದಿಲ್ಲ. ಇಂಥ ಢೋಂಗೀ ರಾಜಕಾರಣ ಬಹಳ ದಿನ ಇರಲ್ಲ. ಕಾಲ ಬದಲಾಗುತ್ತೆ, ಇದೆಲ್ಲ ಅದಲು ಬದಲಾಗುವ ದಿನಗಳೂ ಬರುತ್ತವೆ. ಕಳೆದ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ಆಂಜಿನಪ್ಪ ಅವರ ವಿಚಾರದಲ್ಲಿ ಸ್ವಲ್ಪ ಯಾಮಾರಿದೆವಷ್ಟೇ. ಅವರ ಮುಂದೆ (ಡಾ.ಕೆ.ಸುಧಾಕರ್) ನಮ್ಮ ಕೈಲಿ ದುಡ್ಡು ಒದಗಿಸಲಿಕ್ಕೆ ಆಗಲಿಲ್ಲ. ಇಲ್ಲಾಂದ್ರೆ ಆವಾಗ್ಲೆ ತೋಪಡಾ ಮಾಡಿಬಿಡ್ತಿದ್ವಿ. ಆದರೆ, ಇನ್ನು ಇದೆ ಅವಕಾಶ. ಆ ಸಂದರ್ಭ ಬಂದೇ ಬರುತ್ತದೆ.
ಸಚಿವರು ಸಾಮಾನ್ಯ ಜನರಿಗೆ ಸಿಗಲ್ಲ, ಯಾರನ್ನೂ ಮಾತನಾಡೋದಿಲ್ಲ. ಫೋನಿಗೂ ಸಿಗಲ್ಲ. ನೀವು (ಸಚಿವರು) ಯಾವ ಸೀಮೆ ಜನಪ್ರತಿನಿಧಿ? ನಿಮ್ಮ ಟಾಕುಠೀಕು ನೋಡೋದಕ್ಕಾ ಜನ ವೋಟು ಹಾಕಿದ್ದು? ಜನಕ್ಕೆ ನಿಮ್ಮ ಬಗ್ಗೆ ಅರ್ಥ ಆಗಿದೆ, ಎಲ್ಲ ಹಳ್ಳಿಗಳಲ್ಲೂ ಮಾತನಾಡ್ತಾ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ತಪ್ಪದೇ ಪಾಠ ಕಲಿಸುತ್ತಾರೆ. ನಾವೂ ಕಲಿಸುತ್ತೇವೆ. ಢೋಂಗೀ ಮಾತಾಡಿಕೊಂಡು, ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಾಡಿಕೊಂಡು, ಎಲ್ಲರತ್ರ ರೋಲ್‌ಕಾಲ್ ಮಾಡಿಕೊಂಡು ಆಡಳಿತ ಎಷ್ಟು ದಿನ ನಡೆಸ್ತೀರೋ ನೋಡೋಣ.
ನನಗೆ ಇರೋ ಮಾಹಿತಿ ಪ್ರಕಾರ, ಇವರನ್ನು (ಡಾ.ಸುಧಾಕರ್) ಸಚಿವ ಸ್ಥಾನದಿಂದ ತೆಗೆಯಬೇಕು ಅಂತ ಬಿಜೆಪಿ ಸರ್ಕಲ್‌ನಲ್ಲಿ ಮಾತುಕತೆ ಆಗ್ತಾ ಇದೆ. ಇದು ನನಗೆ ಬಂದಿರುವ ವರದಿ. ಅವರು (ಸಚಿವರು) ಮಾಡಿರುವ ಘನ ಕಾರ್ಯಕ್ಕೆ, ಈ ರಾಜ್ಯಕ್ಕೆ ಕೊಟ್ಟಿರುವ ಹೆಚ್ಚು ಸಾವಿನ ಕೊಡುಗೆಗೆ ಇವರನ್ನೇನೋ ತೆಗೀತಾರೆ ಅಂತ ನನಗೆ ಸುದ್ದಿ ಇದೆ. ಒಂದು ವೇಳೆ ತೆಗೆಯದೆ ಇನ್ನೂ ಇಟ್ಟುಕೊಂಡರೆ ಬಿಜೆಪಿ ತಲೆ ಮೇಲೆ ದೊಡ್ಡ ಬಂಡೆ ಇಟ್ಟುಕೊಂಡ ಹಾಗೆ.
ಭಗವಾನ್ ಬುದ್ಧ ಎರಡು ಮಾತನ್ನು ಹೇಳಿದ್ದಾರೆ. ಬೆಳಕನ್ನ, ಸತ್ಯವನ್ನ ಮುಚ್ಚಿಡಲು ಆಗಲ್ಲ ಅಂತ. ಎಲ್ಲ ಹೊರಗೆ ಬರ್ತದೆ. ಇವರ ದುರಾಡಳಿತಕ್ಕೆ ಕೊನೆಗಾಲ ಬರ್ತದೆ.
- ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಶಿವಶಂಕರ ರೆಡ್ಡಿ ಇನ್ನೇನು ಹೇಳಿದರು?
ಕೋವಿಡ್‌ನಿಂದ ಜಿಲ್ಲೆಯಲ್ಲಿ 24 ಜನ ಸತ್ತಿದ್ದರೆ ಈ ಮಂತ್ರಿ (ಸುಧಾಕರ್) ಕೇವಲ 3 ಜನ ಸತ್ತಿದ್ದಾರೆ ಅಂತ ಸುಳ್ಳು ಹೇಳ್ತಾರೆ. ಮಂತ್ರಿಯೇ ಸುಳ್ಳನ್ನು ಅಧಿಕೃತವಾಗಿ ಹೇಳ್ತಾರೆ. ಇಂಥ ಸುಳ್ಳು ಅಂಕಿ-ಅಂಶಗಳ ಬಗ್ಗೆ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ.
ಆರೋಗ್ಯ ಸಚಿರಾಗಿದ್ದ ಶ್ರೀರಾಮುಲು ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ವೈದ್ಯಕೀಯ ಶಿಕ್ಷಣ ಸಚಿವರು ತುಂಬಾ ಚೆನ್ನಾಗಿ ನಿರ್ವಹಣೆ ಮಾಡ್ತಾರೆ, ಇವರು ಡಾಕ್ಟರ್ ಅಂತ ಶ್ರೀರಾಮುಲು ಖಾತೆಯನ್ನು ಕಿತ್ತು ಸುಧಾಕರ್ ಅವರಿಗೆ ಕೊಟ್ಟರು. ಎರಡೂ ಖಾತೆಗಳನ್ನು ಪಡೆದ ಇವರು ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. 2020ರ ಅಕ್ಟೋಬರ್‌ನಲ್ಲಿ ತಜ್ಞರು ವರದಿ ಕೊಟ್ಟು ಎಚ್ಚೆತ್ತುಕೊಳ್ಳುವಂತೆ ಸಲಹೆ ಮಾಡಿದ್ದರು. ಎರಡನೇ ಅಲೆ ಬರುತ್ತೆ, ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಅವರು ಹೇಳಿದ್ದರು. ಇವರು ಅದನ್ನು ಅಲಕ್ಷ್ಯ ಮಾಡಿದರು. ಆದರೆ ಇವರ ಗಮನವೆಲ್ಲ ಯಾವ ಕಾಂಟ್ರಾಕ್ಟ್‌ಗಳು, ಯಾವ ಡೀಲುಗಳು ಬರುತ್ತವೆ ಅನ್ನೋ ಕಡೆ ಇತ್ತು. ಕೊನೆಗೆ ಸೋಂಕಿನ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಆಗ ಇವರ ಕೈಯ್ಯಲ್ಲಿ ನಿಭಾಯಿಸಲು ಆಗಲಿಲ್ಲ.
ಪೆಟ್ರೋಲ್-ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತನ್ನಿ ಎಂದರೆ ಮೋದಿ ಮಾಡುತ್ತಿಲ್ಲ. ಪ್ರತಿಯೊಂದಕ್ಕೂ ʼಒನ್ ನೇಷನ್ ಒನ್ ಟ್ಯಾಕ್ಸ್ʼ ಎನ್ನುವ ಅವರು, ತೈಲ ವಿಷಯಕ್ಕೆ ಬಂದರೆ ಯಾಕೆ ಪಲಾಯನ ಮಾಡುತ್ತಾರೆ? ʼಒಂದು ದೇಶ ಒಂದು ಜಿಎಸ್‌ಟಿʼ ಇರಬೇಕಲ್ವಾ? ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಹಾಗೆ ಮಾಡಿದರೆ ಕೇಂದ್ರ ಸರಕಾರಕ್ಕೆ ಆದಾಯ ಕಡಿಮೆಯಾಗುತ್ತದೆ. ಜನರನ್ನು ಸುಲಿಗೆ ಮಾಡಬೇಕಲ್ವ? ಅದಕ್ಕೆ ಹೀಗೆ.. ಕಳೆದ ಹತ್ತು ತಿಂಗಳಲ್ಲಿ ಕೇಂದ್ರ ಸರಕಾರ ತೈಲ ಬೆಲೆಯೊಂದರಲ್ಲೇ 3 ಲಕ್ಷ ಕೋಟಿ ಲಾಭ ಮಾಡಿದೆ. ಪೆಟ್ರೋಲ್ ಡೀಸೆಲ್ ತೆರಿಗೆಯಿಂದ ಸಂಪನ್ಮೂಲ ಕೋಡೀಕರಣ ಮಾಡುವಂಥ ಕೆಲಸ ಕೇಂದ್ರ ಸರಕಾರ ಮಾಡ್ತಾ ಇದೆ.
ಅಂದಹಾಗೆ, ಶಿವಶಂಕರ್ ರೆಡ್ಡಿಅವರ ಈ ಭಾಷಣದ ಆಡಿಯೋ ಮತ್ತು ವಿಡಿಯೋ ತುಣುಕುಗಳು ಎಲ್ಲ ಕಡೆ ವೈರಲ್ ಆಗಿವೆ. ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.