ಜುಲೈ 1ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ-ಕಾಲೇಜು ಆರಂಭಕ್ಕೆ ಹಸಿರು ನಿಶಾನೆ
photos courtesy: Wikipedia
ಹೈದರಾಬಾದ್: ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಕೋವಿಡ್ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ವಾಪಸ್ ಪಡೆಯಲಾಗಿದೆ. ಈ ಬಗ್ಗೆ ರಾಜ್ಯ ಸಂಪುಟ ಸಭೆ ಶನಿವಾರ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿಗಳ ಕಾರ್ಯಾಲಯ ಟ್ವಿಟರ್ ಮೂಲಕ ಪ್ರಕಟಣೆ ನೀಡಿದೆ. ನಾಳೆ ಬೆಳಗ್ಗೆಯಿಂದ ಹೈದರಾಬಾದ್ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲೂ ಕೋವಿಡ್ ನಿರ್ಬಂಧಗಳು ಇರುವುದಿಲ್ಲ.
ಸೋಂಕು ಕಡಿಮೆಯಾದ ಬಗ್ಗೆ ಆರೋಗ್ಯ ಇಲಾಖೆ ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ಮೇಲೆ ಸಂಪುಟ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಭಾನುವಾರ ಬೆಳಗ್ಗೆಯಿಂದಲೇ ಎಲ್ಲ ಕಡೆ ಸಾರಿಗೆ, ವಾಣಿಜ್ಯ, ಜನಜೀವನ ಎಂದಿನಂತೆ ಮೊದಲ ಸ್ಥಿತಿಗೆ ಮರಳಲಿದೆ.
ಇನ್ನು, ಶಾಲಾ ಕಾಲೇಜುಗಳು ಜುಲೈ 1ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಮತ್ತೊಂದೆಡೆ ಲಾಕ್‌ಡೌನ್ ತೆಗೆದು ಹಾಕಿದ ಮೇಲೆ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸ್ ಮಾಡಿಕೊಳ್ಳುವ ಪರಿಪಾಠ ಬಿಡಬಾರದು ಎಂದು ತಿಳಿಸಲಾಗಿದೆ.
ತೆಲಂಗಾಣ ರಾಜ್ಯದಲ್ಲಿ ಕೋವಿಡ್ ಸೋಂಕು ಬಹಳ ಕಡಿಮೆಯಾಗಿದೆ. ಸತತ ಪ್ರಯತ್ನದಿಂದ ನಾವು ಈ ಸಾಧನೆ ಮಾಡಿದ್ದೇವೆ. ಭಾನುವಾರ ಬೆಳಗ್ಗೆಯಿಂದ ಇಡೀ ರಾಜ್ಯದಲ್ಲಿ ಎಲ್ಲಿಯೂ ನಿರ್ಬಂಧಗಳು ಇರುವುದಿಲ್ಲ
-ಕೆ.ಚಂದ್ರಶೇಖರ ರಾವ್ / ತೆಲಂಗಾಣ ಮುಖ್ಯಮಂತ್ರಿ