ಡಾಕ್ಟರ್ ಮಾತು ಕೇಳಿ ಖುಷಿಯಾಗಿ ಲಸಿಕೆ ಶಿಬಿರಕ್ಕೆ ಬಂದ ಹಳ್ಳಿಜನರು
by Ra Na Gopala Reddy Bagepalli
ಬಾಗೇಪಲ್ಲಿ: ಅಪಪ್ರಚಾರಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ್ದ ಗ್ರಾಮಸ್ಥರನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿದ ಪ್ರಸಂಗ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಪಾರ್ವತಿಪುರ (ಸಿದ್ದಪ್ಪಲ್ಲಿ) ತಾಂಡಾದಲ್ಲಿ ನಡೆದಿದೆ.
ಸುಳ್ಳು ವದಂತಿ ನಂಬಿದ್ದ ಜನರು
ಲಸಿಕೆ ಪಡೆದುಕೊಂಡರೆ ಮದ್ಯಪಾನ ಬಿಡಬೇಕು, ಲಸಿಕೆ ತೆಗೆದುಕೊಂಡವರು ಕೆಲವರು ಸತ್ತು ಹೋಗಿದ್ದಾರೆ, ಪಾರ್ಶ್ವವಾಯು ಬರುವುದಂತೆ, ಪುರುಷ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಮೊದಲಾದ ವದಂತಿಗಳನ್ನು ನಂಬಿ ಪಾರ್ವತಿಪುರ ಹಳ್ಳಿ ಜನ ಲಸಿಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಅವರು ಸೋಮವಾರ ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಜನರೆಲ್ಲ ಲಸಿಕೆ ಶಿಬಿರದತ್ತ ಹೆಜ್ಜೆ ಹಾಕಿದರಲ್ಲದೆ, ತಪ್ಪು ಗ್ರಹಿಕೆ, ಸುಳ್ಳು ವದಂತಿ ಬದಿಗಿಟ್ಟು ವ್ಯಾಕ್ಸಿನ್ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಇಂದಿರಾ ಕಬಾಡೆ ಅವರು ಹೇಳಿದ್ದಿಷ್ಟು;
- ಕೋವಿಡ್ ಸೋಂಕಿನ ಎರಡನೇ ಅಲೆ ಜನರನ್ನು ಹೈರಾಣಾಗಿಸಿದೆ. ಕೋವಿಡ್ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ತಪ್ಪು.
- ಹಳ್ಳಿ ಜನರು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿಲ್ಲ. ನಗರ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಹಳ್ಳಿಗಳಲ್ಲಿ ಬೆರಳೆಣಿಕೆ ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹಳ್ಳಿಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಲಸಿಕೆಯಿಂದ ಸಮಸ್ಯೆ ಆದೀತು ಎನ್ನುವ ಕಾರಣವಂತೆ. ಇನ್ನು ಹೊಲದಲ್ಲಿ ದುಡಿಯಲು ಹೋಗುತ್ತಾರೆ. ಲಸಿಕೆ ಹಾಕಿಸಿಕೊಂಡರೇ ಮೈಕೈ ನೋವು, ಜ್ವರ ಬರುತ್ತದೆ ಎನ್ನುವ ಇನ್ನು ಹಲವಾರು ಅಪನಂಬಿಕೆಗಳಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟಿಗೆ ಕಾರಣವೆನ್ನುತ್ತಿದ್ದಾರೆ. ಇದು ಖಂಡಿತಾ ತಪ್ಪು ಗ್ರಹಿಕೆ.
ಲಸಿಕೆ ಅತ್ಯಂತ ಸುರಕ್ಷಿತ. ಯಾರು ಅಂಜಬೇಕಿಲ್ಲ. ದೇಶದ ಪ್ರಧಾನಮಂತ್ರಿಗಳು, ನಮ್ಮ ಮುಖ್ಯಮಂತ್ರಿಗಳು ಸೇರಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಜನರು ಅಂದುಕೊಂಡಂತೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ.
-ಡಾ.ಇಂದಿರಾ ಆರ್.ಕಬಾಡೆ
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಡಿ. ಎ.ದಿವಾಕರ್, ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ,ಹಾಗೂ ಆರೋಗ್ಯ ಸಿಬ್ಬಂದಿ ಹಾಜರಿದ್ದರು.