ಬೆಂಗಳೂರಿನಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಬೆಂಗಳೂರು: ಯೋಗವು ಯಾವುದೇ ದೇಶ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ನಿಜವಾದ ವಿಜ್ಞಾನವೇ ಯೋಗ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಮಹಾ ಸ್ವಾಮೀಜಿ ಹೇಳಿದರು.
ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಅವರು ಮಾತನಾಡಿರು.
ಕೆಲವರಿಗೆ ಅನಿಸಬಹುದು, ಯೋಗ ಒಂದು ಧರ್ಮಕ್ಕೆ ಸೇರಿದ್ದು, ಅಂಥನ್ನು ಸಾರ್ವತ್ರೀಕರಣಗೊಳಿಸಲು ಅವಕಾಶ ಇದೆಯಾ ಅಂತ. ಯೋಗ ಯಾವುದೇ ದೇಶಕ್ಕೂ ಸೇರಿದ್ದಲ್ಲ. ಅದು ಎಲ್ಲರಿಗೂ ಸೇರಿದ್ದು ಎಂಬುದನ್ನು ಸ್ವಾಮೀಜಿ ಅವರು ವಿವರಿಸಿ ಹೇಳಿದರು.
ಜಗತ್ತಿನ ಅನೇಕ ವಿಜ್ಞಾನಿಗಳು ಅನೇಕ ವೈಜ್ಞಾನಿಕ ಸತ್ಯಗಳನ್ನು ಸಂಶೋಧಿಸಿ, ಆವಿಷ್ಕರಿಸಿ ನಮ್ಮ ಉಪಯೋಗಕ್ಕಾಗಿ ಕೊಟ್ಟು ಹೋಗಿದ್ದಾರೆ. ಹಾಗಂತ, ಬೇರೆ ಬೇರೆ ದೇಶದ ವಿಜ್ಞಾನಿಗಳು ಸಂಶೋಧಿಸಿದರು ಎಂಬ ಕಾರಣಕ್ಕೆ ಆ ಸಂಶೋಧನೆಯ ಉಪಯೋಗ ನಾವು ಪಡೆದುಕೊಳ್ಳದಿದ್ದರೆ ಅದು ನಮಗೆ ನಷ್ಟ.
-ಶ್ರೀ ನಿರ್ಮಲಾನಂದ ನಾಥ ಮಹಾ ಸ್ವಾಮೀಜಿ
ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್ ವಿಜ್ಞಾನಿ ಲವಾಶಿಯರ್ ಅವರು ಆಮ್ಲಜನಕವನ್ನು ಸಂಶೋಧಿಸಿದರು. ಅವರು ಬೇರೆ ದೇಶದವರು, ಬೇರೆ ಧರ್ಮದವರು ಎಂಬ ಕಾರಣಕ್ಕೆ ನಾವು ಆಮ್ಲಜನಕವನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗವು ಈ ದೇಶದ, ಈ ಮಣ್ಣಿನ ಸಂಶೋಧನೆ. ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.
ಯೋಗವನ್ನು ನಾಡು, ಜಗತ್ತಿನೆಲ್ಲಡೆ ಪಸರಿಸಬೇಕು ಹಾಗೂ ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಆಮ್ಲಜನಕವನ್ನು ಬಳಸದಿದ್ದರೆ ಹೇಗೆ ತೊಂದೆರೆ ಆಗುತ್ತದೆಯೋ, ಯೋಗವನ್ನು ರೂಢಿಸಿಕೊಳ್ಳದಿದ್ದರೆ ಉತ್ತಮ ಆರೋಗ್ಯ ಸಿಗಲಾರದು ಎಂಬ ಸಂಗತಿಯನ್ನು ಎಲ್ಲರೂ ಮನಗಾಣಬೇಕು. ಯಾವುದೇ ಆಸನ ಮಾಡುವಾಗ ಅದರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಅದರ ಸಾರ್ಥಕತೆಯನ್ನು ಅನುಭವಿಸಿ ಒಳಿತನ್ನು ಕಾಣಬೇಕು ಎಂದು ಮಹಾಸ್ವಾಮೀಜಿ ಅವರು ಹೇಳಿದರು.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಯೋಗಾಸನ ಮಾಡುವುದನ್ನು ಕಾಲೇಜು ಶಿಕ್ಷಣ ಇಲಾಖೆಯ ವಿಜಯಿಭವ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.