ಮುಂದಿನ ಸಿಎಂ ಯಾರೆಂದು ಹೇಳುವುದು ನಿಮ್ಮ ಕೆಲಸವಲ್ಲ, ಅದನ್ನು ಡಿಸೈಡ್ ಮಾಡೋದು ವರಿಷ್ಠರು
ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಎದ್ದಿರುವ ʼಜಮೀರ್ ರಗಳೆʼ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಪಕ್ಷದ ಉನ್ನತ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪಕ್ಷದ ರಾಜ್ಯದ ಘಟಕದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕ್ಲುಪ್ತವಾಗಿ ರಾಹುಲ್ ಗಾಂಧಿ ಅವರಿಗೆ ವಿವರಿಸಿದ ಡಿಕೆಶಿ, ಜಮೀರ್ ಹಿಂದೆ ನಿಂತಿರುವ ʼಕಾಣದʼ ಕೈಗಳ ಬಗ್ಗೆಯೂ ಮಾಹಿತಿ ನೀಡಿದರು ಎಂದು ಗೊತ್ತಾಗಿದೆ.
“ಡೋಂಟ್ ವರಿ. ಈ ಬಗ್ಗೆ ಸುರ್ಜೇವಾಲ ಜತೆ ಮಾತನಾಡುತ್ತೇನೆ. ಎಲ್ಲವನ್ನೂ, ಎಲ್ಲರನ್ನೂ ಸರಿ ಮಾಡುವೆ” ಎಂದು ಡಿಕೆಶಿಗೆ ರಾಹುಲ್ ಭರವಸೆ ನೀಡಿದ್ದಾರೆ.
ಜಮೀರ್ ಮೇಲೆ ಸರ್ಜೇವಾಲ ಗರಂ
ಕೆಪಿಸಿಸಿ ಅಧ್ಯಕ್ಷರ ಎಚ್ಚರಿಕೆ ಮೀರಿ ʼಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯʼ ಎಂದು ಹೇಳಿಕೆ ನೀಡುತ್ತಲೇ ಇರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬಗ್ಗೆ ಕಾಂಗ್ರೆಸ್ ವರಿಷ್ಠರು ಸಿಟ್ಟಾಗಿದ್ದಾರೆ. ಮುಖ್ಯವಾಗಿ ಸುರ್ಜೇವಾಲ ಅವರು, “ದಿಸ್ ಈಸ್ ಲೂಸ್ ಟಾಕ್” ಎಂದು ಕಾಮೆಂಟ್ ಮಾಡಿದ್ದಾರೆ. ಇದು ಗಮನಾರ್ಹ.
ಇಡೀ ಬೆಳವಣಿಗೆ ಬಗ್ಗೆ ಅವರು ಡಿಕೆಶಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಎಲ್ಲ ವಿಷಯವನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಜತೆ ಚರ್ಚಿಸುವೆ ಎಂದು ಅವರು ತಿಳಿಸಿದ್ದಾರೆ.
“ಮುಖ್ಯಮಂತ್ರಿ ಪದವಿ ಬಗ್ಗೆ ಮಾತನಾಡುವುದನ್ನು ಕೂಡಲೇ ಎಲ್ಲರೂ ನಿಲ್ಲಿಸಿ. ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ. ಮುಖ್ಯಮಂತ್ರಿ ಪದವಿ ಬಗ್ಗೆ ಮಾತನಾಡುವುದು ನಿಮ್ಮ (ಜಮೀರ್) ಕೆಲಸವಲ್ಲ” ಎಂದು ನೇರವಾಗಿ ತಾಕೀತು ಮಾಡಿದ್ದಾರೆ.
ಈ ಬಗ್ಗೆ ಸೋಮವಾರ ಸಂಜೆಯೇ ಸರ್ಜೇವಾಲ ಕರ್ನಾಟಕಕ್ಕೆ ಸಂಬಂಧಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು.
ನಾಯಕತ್ವದ ಬಗ್ಗೆ ಮಾತನಾಡುವ ಸಮಯ ಇದಲ್ಲ. ಮೊದಲು ಪಕ್ಷ ಸಂಘಟನೆ, ಆಮೇಲೆ ಅಧಿಕಾರ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದ ಜಮೀರ್ ಹಾಗೂ ರಾಘವೇಂದ್ರ ಹಿಟ್ನಾಳ್ ಇವರಿಬ್ಬರಿಗೂ ವಾರ್ನಿಂಗ್ ಮಾಡಿದ್ದಾರೆ.
“ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಇಂಥವರೇ ಆಗಬೇಕು ಎಂದು ಹೇಳುವುದು ನಿಮ್ಮ ಕೆಲಸವಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜಮೀರ್ ವಿರುದ್ಧ ಗರಂ
ಇನ್ನೊಂದೆಡೆ, ಭೇಟಿ ವೇಳೆ ಡಿಕೆಶಿ ಮಾತು ಆರಂಭಿಸುವ ಮೊದಲೇ ಮಾತಿಗಿಳಿದ ಸುರ್ಜೇವಾಲಾ, “ಜಮೀರ್ ಮತ್ತೇನು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ” ಎಂದು ಡಿಕೆಶಿಗೆ ಪ್ರಶ್ನೆ ಹಾಕಿದ್ದಾರೆ. ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಪೂರ್ಣ ಮಾಹಿತಿ ನನ್ನಲ್ಲಿದೆ. ಹೈಕಮಾಂಡ್ ಯಾವಾಗಲೂ ಪಕ್ಷಕ್ಕೆ ನಿಷ್ಠರಾಗಿರುವವರ ಪರ ಇರುತ್ತದೆ ಎಂದು ಡಿಕೆಶಿಗೆ ಹೇಳಿದ್ದಾರೆ.
ಅಲ್ಲದೆ, ಜಮೀರ್ ನೀಡಿರುವ ಎಲ್ಲ ವಿವಾದಿತ ಹೇಳಿಕೆಗಳ ಪತ್ರಿಕಾ ತುಣುಕುಗಳು, ವಿಡಿಯೋಗಳು, ವಿದ್ಯುನ್ಮಾನ ವಾಹಿನಿಗಳ ಕ್ಲಿಪ್ಪಿಂಗ್‌ಗಳೆಲ್ಲವೂ ಸುರ್ಜೇವಾಲಾ ಕೈಸೇರಿದ್ದು, ಒಂದು ವೇಳೆ ಪಕ್ಷದ ಲಕ್ಷ್ಮಣ ರೇಖೆ ದಾಟಿದರೆ ಜಮೀರ್ ವಿರುದ್ಧ ಕ್ರಮಕ್ಕೆ ವರಿಷ್ಠರು ಹಿಂಜರಿಯುವುದಿಲ್ಲ ಎಂದು ದಿಲ್ಲಿಯ ಮೂಲವೊಂದು ತಿಳಿಸಿದೆ.
ಇದೇ ವೇಳೆ ಸುರ್ಜೇವಾಲಾ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದಲೂ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಜಮೀರ್ ವರ್ತನೆ ಬಗ್ಗೆ ಸ್ವತಃ ಖರ್ಗೆ ಕೂಡ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ಕೂಡಲೇ ಅವರ ಬಾಯಿಗೆ ಬೀಗ ಹಾಕಿ ಎಂದು ಸುರ್ಜೇವಾಲಾ ಅವರಿಗೆ ಖರ್ಗೆ ಹೇಳಿದ್ದಾರೆಂದು ಗೊತ್ತಾಗಿದೆ.
ಒಂದು ವೇಳೆ ಮತ್ತೂ ಕಿರಿಕ್ ಮುಂದುವರಿಸಿದರೆ ಜಮೀರ್‌ಗೆ ಪಕ್ಷದಿಂದ ಗೇಟ್‌ಪಾಸ್ ಕೊಡಲಿಕ್ಕೆ ವರಿಷ್ಠರು ಸಿದ್ಧವಿದ್ದಾರೆ. ಬಿಜೆಪಿಗೆ ಹೋಗುವ ಅವಕಾಶ ಇಲ್ಲ. ಜೆಡಿಎಸ್ ಜಮೀರ್ ಸಂಬಂಧ ಹಳಸಿದೆ. ಇನ್ನು ಅವರ ಪರ ಇರುವ ಕೆಲ ʼಶಕ್ತಿʼಗಳು ಹೈಕಮಾಂಡ್ ನಂಬಿಕೆ ಉಳಿಸಿಕೊಂಡಿಲ್ಲ. ಪಕ್ಷಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಅವರೆಲ್ಲ ಪಲಾಯನ ಮಾಡಿದ್ದವರು, ಇದೆಲ್ಲ ಹೈಕಮಾಂಡ್‌ಗೆ ಗೊತ್ತಿರುವ ವಿಚಾರವೇ ಆಗಿದೆ ಎಂದು ಡಿಕೆಶಿ ಆಪ್ತರೊಬ್ಬರು ತಿಳಿಸಿದರು.