ಫೇಸ್‌ಬುಕ್ ಗೋಡೆ ಮೇಲೆ ಬೇಸರ ತೋಡಿಕೊಂಡ ಶಿಕ್ಷಣ ಮಂತ್ರಿ
ಬೆಂಗಳೂರು: ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಫೀಸ್ ಸಮರಕ್ಕೆ ಅಂತ್ಯ ಕಾಣುವ ಸೂಚನೆ ಕಾಣುತ್ತಿಲ್ಲ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಗೋಡೆ ಮೇಲೆ ಸಚಿವರು ದೀರ್ಘವಾಗಿ ಬರೆದಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.
- ಶಾಲೆಗಳು, ಪೋಷಕರ ಮೇಲೆ ಕೊರೊನಾ ಒತ್ತಡ ಹೇರಿದೆ. ಕಳೆದ ವರ್ಷ ಶಾಲೆಗಳಿಗೆ ಮಕ್ಕಳನ್ನ ಕಾಣುವ ಅದೃಷ್ಟವಿರಲಿಲ್ಲ. ಮಕ್ಕಳಿಲ್ಲದೆ ಶಾಲೆಗಳು ಭಣಗುಡುತ್ತಿದ್ದವು. ಶಿಕ್ಷಕಿಯರು ಮಕ್ಕಳಿಂದ ಮಿಸ್ ಎಂದು ಕರೆಸಿಕೊಳ್ಳುವ, ಮಕ್ಕಳನ್ನು ಅಪ್ಪಿಕೊಳ್ಳುವ, ಮಾತನಾಡುವ ಅವಕಾಶ ಇರಲಿಲ್ಲ. ಇದರ ನಡುವೆ ಖಾಸಗಿ ಶಾಲಾ ಶುಲ್ಕ ವಿವಾದ ಶುರುವಾಯಿತು.
- ಕೊರೊನಾದಿಂದ ಸಮಾಜ ಆರ್ಥಿಕವಾಗಿ ಜರ್ಜರಿತವಾದಂತೆ, ಪೋಷಕರು ಶುಲ್ಕ ಪಾವತಿಸಲು ಆಗದೆ ಅಸಮರ್ಥರಾದರು. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಅರ್ಧ ವೇತನ ನೀಡಲಾಯಿತು. ಕೆಲ ಶಾಲೆಗಳಲ್ಲಿ ವೇತನ ಸಿಗದ ಪರಿಸ್ಥಿತಿ ನಿರ್ಮಾಣವಾಯಿತು. ರಾಜ್ಯದ ಹಲವೆಡೆ ಶಾಲಾ ವ್ಯವಸ್ಥಾಪಕ ಮಂಡಳಿ, ಪೋಷಕರ ಮಧ್ಯೆ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು.
- ಶಿಕ್ಷಣ ಇಲಾಖೆಗೆ ಈ ಕುರಿತು ಅನೇಕ ದೂರುಗಳು ಬಂದವು. ಒಟ್ಟಾಗಿ ಕುಳಿತು ಸಂಧಾನ ಮಾಡಿಕೊಳ್ಳುವಂತೆ ಹೇಳಿದೆವು. ಖಾಸಗಿ ಶಾಲೆಗಳು, ಪೋಷಕರು ಪರಿಸ್ಥಿತಿಯನ್ನ ಅರಿಯಬೇಕು. ಕೆಲವು ಶಾಲೆಗಳು ಸ್ವಯಂಪ್ರೇರಿತರಾಗಿ ಕಳೆದ ವರ್ಷ ಶುಲ್ಕದಲ್ಲಿ ರಿಯಾಯಿತಿ ಕೊಡುವ ಉತ್ತಮ ನಿರ್ಧಾರ ಪ್ರಕಟಿಸಿದವು. ಆದರೆ ಒಮ್ಮತದ ನಿರ್ಧಾರಕ್ಕೆ ಬರಲು ಆಗಿಲ್ಲ.
- ಖಾಸಗಿ ಶಾಲೆಗಳು ತಮ್ಮ ಶಾಲೆಗಳ ನಿರ್ವಹಣೆಗೆ ಪೋಷಕರು ಶುಲ್ಕ ಕಟ್ಟುವುದು ಅಗತ್ಯ. ಕಳೆದ ವರ್ಷ ನಾವು ಶುಲ್ಕ ಏರಿಕೆ ಮಾಡಿಲ್ಲ. ಈ ವರ್ಷವೂ ಮಾಡದಿದ್ದರೆ ನಿರ್ವಹಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಪೂರ್ಣ ಶುಲ್ಕ ಕಟ್ಟದಿದ್ದರೆ ಆನ್ಲೈನ್ ಶಿಕ್ಷಣ ಲಭ್ಯವಿಲ್ಲ ಅಂತ ಕೆಲವು ಶಾಲೆಗಳ ಘೋಷಣೆ ಪೋಷಕರನ್ನು ಕಂಗಾಲು ಮಾಡಿದೆ. ಪೋಷಕರು ಕೊರೊನಾ ಎರಡನೇ ಅಲೆಯ ಕಾರಣ ನಮ್ಮ ಆರ್ಥಿಕ ಸ್ಥಿತಿ ಮತ್ತೊಮ್ಮೆ ಜರ್ಜರಿತವಾಗಿದೆ. ಹೀಗಿರುವಾಗ ನಾವು ಪೂರ್ಣ ಶುಲ್ಕ ಕಟ್ಟುವುದು ಹೇಗೆ ಎಂಬ ವಾದ ಮುಂದಿಡುತ್ತಿದ್ದಾರೆ.
- ಹಣಕಾಸು ಸಂಸ್ಥೆಗಳಿಂದ ಪೋಷಕರು ಸಾಲ ಪಡೆದು ಶಾಲಾ ಶುಲ್ಕ ಭರಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಪೋಷಕರ ವಾದದಲ್ಲಿಯೂ ಹುರುಳಿದೆ. ಖಾಸಗಿ ಶಾಲಾ ಶಿಕ್ಷಕರ ಜೀವನ ನಿರ್ವಹಣೆಗೆ ಸಂಬಳ ಕುರಿತಂತೆ ಯೋಚಿಸಿದಾಗ ಪೋಷಕರು ಸ್ವಲ್ಪವಾದರೂ ಕಟ್ಟುವುದು ಅನಿವಾರ್ಯ ಎಂಬ ಶಾಲೆಗಳ ವಾದದಲ್ಲಿಯೂ ಅರ್ಥವಿದೆ. ಪೋಷಕರು ಮತ್ತು ಖಾಸಗಿ ಶಿಕ್ಷಕರ ಹಿತವನ್ನು ಕಾಪಾಡುವ ಸೂತ್ರದ ಅಗತ್ಯ ಇಂದು ನಮ್ಮ ಮುಂದಿದೆ. ಈಗ ಆ ಪರಿಹಾರದ ಬಗ್ಗೆ ಸಮಾಜ ಯೋಚಿಸಬೇಕಿದೆ. ಖಾಸಗಿ ಶಾಲಾ ಸ್ಥಾಪಕ ಮಂಡಳಿ ಮತ್ತು ಪೋಷಕರ ನಡುವಿನ ಸಂಘರ್ಷದಲ್ಲಿ ಮಕ್ಕಳು ಬಡವಾಗ ಬಾರದು. ಅವರ ಮನಸ್ಸು ಖಿನ್ನತೆಗೆ ಒಳಗಾಗಬಾರದು.
- ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ಪೋಷಕರ ಸಂಘಟನೆ ಹಾಗೂ ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಗಳ ಜೊತೆ ಕುಳಿತು ಅವರ ಅಹವಾಲನ್ನು ಆಲಿಸಿ ಕೊನೆಗೆ ಶುಲ್ಕದಲ್ಲಿ ಶೇ.೩೦ರಷ್ಟು ಕಡಿತಗೊಳಿಸಿ ಶೇ.೭೦ರಷ್ಟು ಶುಲ್ಕ ಪಡೆಯಬೇಕೆಂದು ನಿರ್ಧಾರ ಪ್ರಕಟಿಸಿತು. ಈ ನಿರ್ಧಾರಕ್ಕೆ ಪೋಷಕರು ಬಹು ಮಟ್ಟಿಗೆ ಒಪ್ಪಿದ್ದರು. ಖಾಸಗಿ ಶಾಲೆಗಳ ವ್ಯವಸ್ಥಾಪಕ ಮಂಡಳಿ ಕೆಲಮಟ್ಟಿಗೆ ಒಪ್ಪಿಗೆ ಸೂಚಿಸಿದವು. ಆದರೆ ಕೆಲವರು ಹೈಕೋರ್ಟ್ಗೆ ಹೋಗಿ ಸರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ವಾದ-ಪ್ರತಿವಾದ, ಚರ್ಚೆ ಮುಂದುವರೆದಿದೆ. ಶಾಲೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು. ಎಂಬ ನಿರ್ದೇಶನವೂ ಸೇರಿದಂತೆ ಇತರ ಕೆಲವು ಅಂಶಗಳ ಮಧ್ಯಂತರ ಆದೇಶವೂ ಬಂದಿದೆ.
ಬೇಸರ ತಂದ ಸಂಗತಿ ಎಂದರೆ ಆರ್ಥಿಕವಾಗಿ ಸಬಲರಾಗಿದ್ದ ಪೋಷಕರು ಸಹ ತಮ್ಮ ಮಕ್ಕಳ ಶುಲ್ಕ ಪಾವತಿ ಮಾಡಲು ಮುಂದಾಗಲಿಲ್ಲ. ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದು, ಪ್ರತಿ ತಿಂಗಳು ತಪ್ಪದೇ ಸಂಬಳ ಪಡೆದ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಕರಿಗೆ ವೇತನ ದೊರೆಯಲು ತಾವು ಶುಲ್ಕ ಕಟ್ಟಬೇಕೆಂಬ ಕರ್ತವ್ಯ ನೆನಪಿಗೆ ಬರಲಿಲ್ಲ. ಇದು ನಿಜಕ್ಕೂ ಒಳ್ಳೆಯ ಸಂಗತಿಯಲ್ಲ ಎಂದು ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.