ಚಿಕ್ಕಬಳ್ಳಾಪುರ ಬಳಿಯ ಮರಸನಹಳ್ಳಿ ಸರಕಾರಿ ಶಾಲಾ ಮಕ್ಕಳಿಗೆ ಇಸ್ಕಾನ್-ಅಕ್ಷಯ ಪಾತ್ರೆಯಿಂದ ಹ್ಯಾಪಿನೇಸ್ ಕಿಟ್ ವಿತರಣೆ
ಚಿಕ್ಕಬಳ್ಳಾಪುರ: ಈಗಾಗಲೇ ರಾಜ್ಯದಲ್ಲಿ ಅನ್ನ ದಾಸೋಹದಲ್ಲಿ ಹೆಸರು ಮಾಡಿರುವ ಇಸ್ಕಾನ್ ಸಂಸ್ಥೆ ಅಕ್ಷಯ ಪಾತ್ರೆ ವತಿಯಿಂದ ತಾಲೂಕಿನ ಮರಸನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹ್ಯಾಪಿನೇಸ್ ಕಿಟ್ʼಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಅಕ್ಷಯ ಪಾತ್ರೆ ಸಂಸ್ಥೆ ಮುಖ್ಯಸ್ಥ ಗುಣಾಕರ ರಾಮದಾಸ್ ಮತ್ತಿತರರು ಮಕ್ಕಳಿಗೆ ಹ್ಯಾಪಿನೇಸ್ ಕಿಟ್ʼಗಳನ್ನು ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಲತಾ ಅವರು, “ಕೋವಿಡ್ ಸಂಕಷ್ಟದ ಅವಧಿಯಲ್ಲಿ ಸರಕಾರೇತರ ಸಂಸ್ಥೆಗಳು ಬಡ ಮಕ್ಕಳಿಗೆ ನಾನಾ ರೀತಿಯ ಶಿಕ್ಷಣ ಪರಿಕರಗಳನ್ನು, ಆಹಾರ ಧಾನ್ಯಗಳುಳ್ಳ ಕಿಟ್‌ಗಳನ್ನು ನೀಡುತ್ತಿವೆ. ಇಸ್ಕಾನ್ ಸಂಸ್ಥೆಯ ಈ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು.
ಸೋಂಕಿನ ಸಂದರ್ಭದಲ್ಲಿ ಮಕ್ಕಳ ಪೋಷಕರು ಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ವೇಳೆಯಲ್ಲಿ ಖಾಸಗಿ ಸಂಸ್ಥೆಗಳು ಸಹಾಯಹಸ್ತ ಚಾಚುತ್ತಿವೆ. ಇದರಿಂದ ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಹೆಚ್ಚುತ್ತಿದ್ದು, ಪೋಷಕರಲ್ಲಿ ಧನ್ಯತಾ ಭಾವ ಮೂಡಿದೆ ಎಂದು ಲತಾ ಅವರು ಹೇಳಿದರು.
ಖಾಸಗಿ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಒಳತಿಗೆ ಹೆಚ್ಚು ಗಮನ ಹರಿಸಬೇಕು. ಆ ಮೂಲಕ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದ ಅವರು, ಪತ್ರಕರ್ತ ಮರಸನಹಳ್ಳಿ ರವಿಕುಮಾರ್ ಕಾಳಜಿಯಿಂದಾಗಿ ಇಂದು 100ಕ್ಕೂ ಹೆಚ್ಚು ಮಕ್ಕಳಿಗೆ ಈ ಕಿಟ್ ಸಿಕ್ಕಂತಾಗಿದೆ ಎಂದರು ಜಿಲ್ಲಾಧಿಕಾರಿಗಳು.
ಗ್ರಾಮೀಣ ಭಾಗದ ಮಕ್ಕಳಿಗೆ ಓದುವ ಹಂಬಲ ಹೆಚ್ಚಾಗಿರುತ್ತದೆ. ಆದರೆ, ಅವರಿಗೆ ಸೌಲಭ್ಯಗಳ ಕೊರತೆ ಇರುತ್ತದೆ. ಇಸ್ಕಾನ್‌ನಂಥ ಸಂಸ್ಥೆಗಳು ಮುಂದೆ ಬಂದು ಇಂಥ ಮಕ್ಕಳಿಗೆ ನೆರವಾಗುತ್ತಿರುವುದು ಸಂತೋಷದ ಸಂಗತಿ. ಇನ್ನಷ್ಟು ಜನ ಇಸ್ಕಾನ್‌ನಿಂದ ಪ್ರೇರಣೆ ಪಡೆದು ಹಳ್ಳಿಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು.
-ಆರ್.ಲತಾ / ಜಿಲ್ಲಾಧಿಕಾರಿ
ಅಕ್ಷಯ ಪಾತ್ರೆ ಮುಖ್ಯಸ್ಥ ಗುಣಾಕರ ರಾಮದಾಸ್ ಅವರು ಮಾತನಾಡಿ, “ಬಯಲು ಸೀಮೆಯ ಈ ಭಾಗದಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೀಡುತ್ತಿರುವ ಹ್ಯಾಪಿನೇಸ್ ಕಿಟ್ʼಗಳನ್ನು ಸದ್ಬಳಕೆಯಾಗಲಿ. ಯಾವುದೇ ಮಗು ಶಿಕ್ಷಣದಿಂದ ಹೊರಗುಳಿಯಬಾರದು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರೂ ಪೌಷ್ಠಿಕ ಆಹಾರ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ” ಎಂದರು.
ಕೋವಿಡ್‌ನಿಂದ ಎಲ್ಲ ಕಡೆ ಶಿಕ್ಷಣ ವ್ಯವಸ್ಥೆಗೆ ತೊಂದರೆ ಆಗಿದೆ. ಹೀಗಾಗಿ ಅಕ್ಷಯ ಪಾತ್ರೆ ವತಿಯಿಂದ ಹ್ಯಾಪಿನೆಸ್ ಕಿಟ್‌ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮಕ್ಕಳು ಈ ಕಿಟ್‌ನಲ್ಲಿರುವ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ವ್ಯಾಸಂಗ ಮಾಡಲಿ.
-ಗುಣಾಕರ ರಾಮದಾಸ್ / ಇಸ್ಕಾನ್‌ನ ಅಕ್ಷಯ ಪಾತ್ರೆ ಮುಖ್ಯಸ್ಥರು
ಇದೇ ವೇಳೆ ಪತ್ರಕರ್ತ ಮರಸನಹಳ್ಳಿ ವಿ.ರವಿಕುಮಾರ್ ಅವರು ಗುಣಾಕರ ರಾಮದಾಸ್ ಹಾಗೂ ಜಿಲ್ಲಾಧಿಕಾರಿ ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಇನ್ನಿತರೆ ಗಣ್ಯರನ್ನು ಗೌರವಿಸಿದರು.
ಮರಸನಹಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್, ಶಿಕ್ಷಣ ಇಸ್ಕಾನ್ ಸಂಸ್ಥೆಯ ಪ್ರೇಮ್ ಜಿತ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ವೆಂಕಟೇಶ್, ಸದಸ್ಯರಾದ ಬಾಬು, ವೆಂಕಟಾಚಲಪತಿ, ಸರಕಾರಿ ನೌಕರರ ಸಂಘದ ಸುನಿಲ್ ಪಿ.ಆರ್., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಟಿ.ವಿ.ಶ್ರೀನಿವಾಸ್, ಖಜಾಂಚಿ ವಿಷ್ಣುವರ್ಧನ, ಕಾರ್ಯಕಾರಿ ಸಮಿತಿ ಹಾಗೂ ಮಾಧ್ಯಮ ವಕ್ತಾರ ಅಮರ್, ಸಿ.ಆರ್.ಪಿ.ವೆಂಕಟೇಶ್ ಸೇರಿದಂತೆ ಗ್ರಾಮದ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.