ದೇವರಗುಡಿಪಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ
by Ra Na Gopala Reddy Bagepalli
ಬಾಗೇಪಲ್ಲಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಏಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ ಎಂದು ಬಾಗೇಪಲ್ಲಿ ತಾಲೂಕು ಪಂಚಾಯತಿ ಉಪಾಧ್ಯಕ್ಷೆ ಸರಸ್ವತಮ್ಮ ಹೇಳಿದರು.
ಗುರುವಾರ ಅವರು ದೇವರಗುಡಿಪಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಶಾಲಾ ವತಿಯಿಂದ ನಡೆದ ಪರಿಸರ ಸಂರಕ್ಷಣ ಮಾಹಿತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ’ ಎಂದರು ಸರಸ್ವತಮ್ಮ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕೃಷಿ ಅಧಿಕಾರಿ ಧನಂಜಯ ಮೂರ್ತಿ ಮಾತನಾಡಿ, ಇಂದು ಕೊರೋನ ಮಹಾಮಾರಿಯಿಂದ ಇಡಿ ಜಗತ್ತೇ ತಲ್ಲಣಗೊಂಡಿದ್ದು ಜೀವನ ಸ್ತಬ್ಧವಾಗಿದೆ. ಅತಿ ಹೆಚ್ಚು ಕೋವಿಡ್ ಸೋಂಕಿತರು ಆಮ್ಲಜನಕ ಕೊರತೆಯಿಂದ ಮರಣ ಹೊಂದಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಗಿಡ ಮರಗಳನ್ನು ಬೆಳಸಲು ಯೋಚನೆ ಮಾಡಿದಿದ್ದಲ್ಲಿ ಭವಿಷ್ಯದಲ್ಲಿ ಮನುಷ್ಯ ಪಶ್ಚಾತ್ತಾಪ ಪಡುತ್ತಾನೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುದ್ದಮ್ಮ. ಧರ್ಮಸ್ಥಳ ಒಕ್ಕೂಟ ಅಧ್ಯಕ್ಷರಾದ ಪ್ರಭಾವತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಕವಿತಾ, ಅಂಗನವಾಡಿ ಕಾರ್ಯಕರ್ತರಾದ ಗಂಗರತ್ನಮ್ಮ ಚಂದ್ರಿಕಾ, ಮೇಲ್ವಿಚಾರಕರಾದ ವಿಠಲ್ ಸೇವಾ ಪ್ರತಿನಿಧಿ ಗಂಗುಲಪ್ಪ. ಮಂಜುಳಾ ಹಾಗೂ ದೇವರಗುಡಿಪಲ್ಲಿ ಗ್ರಾಮಸ್ಥರು ಹಾಜರಿದ್ದರು.