ಜುಲೈ 15ರೊಳಗೆ ಕಾರ್ಯಯೋಜನೆ ವರದಿ ಸಲ್ಲಿಕೆಗೆ ಸೂಚನೆ: ಕೌಶಲ್ಯ ಮತ್ತು ಉದ್ಯಮಶೀಲತೆ” ಕಾರ್ಯಪಡೆ ಸಭೆ ನಡೆಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: 2025ರ ಹೊತ್ತಿಗೆ ಕೌಶಲ್ಯ ಮತ್ತು ಉದ್ಯಮಶೀಲತೆ ವಲಯದಲ್ಲಿ 10 ದಶಲಕ್ಷ ಆರ್ಥಿಕ ಅವಕಾಶಗಳನ್ನು ಸೃಷ್ಟಿ ಮಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅತಿದೊಡ್ಡ ಹೆಜ್ಜೆ ಇರಿಸಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಮಂತ್ರಿಗಳೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ “ಕೌಶಲ್ಯ ಮತ್ತು ಉದ್ಯಮಶೀಲತೆ” ಕಾರ್ಯಪಡೆಯ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿ ಮಾಡುವ ನಿಟ್ಟಿನಲ್ಲಿ ಜುಲೈ 15ರೊಳಗೆ ಕಾರ್ಯಯೋಜನೆಯ ವರದಿ ಸಲ್ಲಿಸುವಂತೆ ಕಾರ್ಯಪಡೆಗೆ ಸೂಚಿಸಲಾಗಿದೆ ಎಂದರು.
ಕೋವಿಡ್ ಸಂಕಷ್ಟದಿಂದ ರಾಜ್ಯದಲ್ಲಿ ಆರ್ಥಿಕ ಅವಕಾಶಗಳು, ಉದ್ಯೋಗ ಸರಪಳಿಯ ಮೇಲೆ ಮಾರಕ ಪರಿಣಾಮ ಬೀರಿದ್ದು, ಇದಕ್ಕೆ ಬಹುದೊಡ್ಡ ಚೇತರಿಕೆ ನೀಡುವ ನಿಟ್ಟಿನಲ್ಲಿ “ಮಿಷನ್ ಯುವ ಸಮೃದ್ಧಿ” ಹೆಸರಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಈ ಬಗ್ಗೆ ಅವರು ವಿವರವಾಗಿ ಹೇಳಿದ್ದಿಷ್ಟು:
- ಮೈಸೂರು, ಮಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಯಚೂರು, ಕೊಪ್ಪಳ, ಧಾರವಾಡ ಸೇರಿ 8 ಜಿಲ್ಲೆಗಳಲ್ಲಿ ಮೊದಲ ಹಂದಲ್ಲಿ ಈ ಕಾರ್ಯಕ್ರಮವನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಅನುಷ್ಟಾನಕ್ಕೆ ತರಲಾಗುವುದು.
- ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜಾರಿಗೆ ಬರುತ್ತಿದ್ದು, ಮುಖ್ಯವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯುವಕರಲ್ಲಿ ಉದ್ಯಮಶೀಲತೆ ಹೆಚ್ಚಿಸುವುದು ಹಾಗೂ ಯುವಜನರ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
- ಪ್ರಾಥಮಿಕ ಹಂತದಿಂದಲೇ ಉದ್ಯಮಶೀಲತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಅಂಶವೂ ಯೋಜನೆಯಲ್ಲಿ ಅಡಕವಾಗಿದೆ.
- ಮುಖ್ಯವಾಗಿ 6 ಅಂಶಗಳ ಆಧಾರದ ಮೇಲೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಡಿಜಿಟಲ್ ಕುಶಲತೆ, ಉದ್ಯಮಶೀಲತೆ, ವೃತ್ತಿ ಮಾರ್ಗದರ್ಶನ, ಯುವ ಉದ್ಯಮಶೀಲತೆ, ಕೃಷಿ ತಂತ್ರಜ್ಞಾನ, ಆರ್ಥಿಕ ಅವಕಾಶಗಳು & ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದು.
- ಕೃಷಿ, ಕೃಷಿ ತಂತ್ರಜ್ಞಾನ, ತೋಟಗಾರಿಕೆ, ಪಶು ಸಂಗೋಪನೆ, ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಕೈಗಾರಿಕೆ, ಕಾರ್ಮಿಕ ಸೇರಿದಂತೆ ಹಲವಾರು ಇಲಾಖೆಗಳನ್ನು ಈ ಮಹತ್ವದ ಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಲಾಗಿದೆ.
- ಮುಖ್ಯವಾಗಿ ಉದ್ಯಮಶೀಲತೆಯಲ್ಲಿ ಮುಂದೆ ಬರುವ ಯುಜನ ಜನರಿಗೆ ವ್ಯವಸ್ಥಿತವಾಗಿ ಉದ್ಯೋಗ ಮಾಡುವ ಅಥವಾ ಉದ್ಯಮ ಸ್ಥಾಪನೆ ಮಾಡುವ, ಅದಕ್ಕಾಗಿ ಸಂಪನ್ಮೂಲ ಪಡೆಯುವುದು, ತದ ನಂತರ ಉತ್ತಮ ರೀತಿಯಲ್ಲಿ ಗಳಿಕೆ ಮಾಡುವ ಬಗ್ಗೆ ವೈಜ್ಞಾನಿಕವಾಗಿ ಜಾಗತಿಕ ಗುಣಮಟ್ಟದಂತೆ ತರಬೇತಿ.
- ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವುದು ಬಹುದೊಡ್ಡ ಗುರಿ.
- ಭಾರೀ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದು.
ಕಾರ್ಯಪಡೆಯ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಕೌಶಲ್ಯ-ಉದ್ಯಮಶೀಲತೆ ಕಾರ್ಯಪಡೆಯ ಸಹ ಸಂಚಾಲಕರಾದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಗೂ ಉದ್ಯಮಿ ಮದನ್ ಪದಕಿ (ಒನ್ ಬ್ರಿದ್ಜ್ ಕಂಪನಿ ಸಿಇಒ), ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ವಿಷನ್ ಗ್ರೂಪ್ ಚೇರ್ಮನ್ ಪ್ರಶಾಂತ್ ಪ್ರಕಾಶ್ ಸೇರಿದಂತೆ ಕಾರ್ಯಪಡೆ ಎಲ್ಲ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಕೆಲವರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.