ವೃತ್ತಿ ಮೀನು ಸಾಕಣೆ, ಪ್ರವೃತ್ತಿ ಉರಗ ರಕ್ಷಣೆ
by Siddique Bagepalli
ಬಾಗೇಪಲ್ಲಿ: ಒಂದೇ ದಿನ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ ಪರಿಸರ ಪ್ರೇಮಿ ಸ್ನೇಕ್ ಗಣೇಶ್.
ಗುರುವಾರ ಪಟ್ಟಣದ 19ನೇ ವಾರ್ಡ್ನ ಮನೆಯೊಂದರ ಬಳಿ ಬಂದಿದ್ದ ನಾಗರಹಾವು, ಮುಖ್ಯ ರಸ್ತೆಯ ವೆಲ್ಡಿಂಗ್ ಷಾಪ್ಗೆ ಬಂದಿದ್ದ ಇನ್ನೊಂದು ನಾಗರಹಾವು ಮತ್ತು ಮುಖ್ಯರಸ್ತೆಯ ನರ್ಸರಿ ಬಳಿ ಬಂದಿದ್ದ ಇಲಿ ಹಾವನ್ನು ಅವರು ರಕ್ಷಿಸಿದ್ದಾರೆ. ಬೆಳಗ್ಗೆ ಒಂದು ನಾಗರ ಹಾವು ಹಾಗೂ ಒಂದು ಇಲಿ ಹಾವು (ಜೇರುಪೋತ) ಹಿಡಿದ್ದರೆ, ರಾತ್ರಿ ಮತ್ತೊಂದು ನಾಗರಹಾವನ್ನು ಅವರ ಹಿಡಿದಿದ್ದಾರೆ.
ಹಾವು ಕಂಡರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ. ಸಣ್ಣ ಹಾವಿನ ಮರಿಯಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಕಾಳಿಂಗದಂಥ ಸರ್ಪಗಳು ದೂರದಲ್ಲಿ ಎಲ್ಲೇ ಕಂಡರೂ ಅತ್ತ ಸುಳಿಯದೇ ಇರುವ ಮಂದಿಯೇ ಹೆಚ್ಚು. ಇನ್ನು ಮನೆ ಬಳಿ ಹಾವು ಬಾರದಿರುವಂತೆ ಬೆಳ್ಳುಳ್ಳಿಯ ನೀರು, ಸಾಸಿವೆ, ಹಿಂಗುವಿನ ನೀರು ಸೇರಿದಂತೆ ಇನ್ನಿತರೆ ನಾಟಿ ವಿಧಾನಗಳನ್ನು ಪ್ರಯೋಗಿಸಿ ಹಾವುಗಳು ಮನೆಯ ಅಕ್ಕಪಕ್ಕದಲ್ಲೂ ಸುಳಿಯದ ಹಾಗೆ ಮಾಡುತ್ತಾರೆ ಜನರು. ಆದರೆ, ಪಟ್ಟಣದ ಉರಗ ಸಂರಕ್ಷಕ ಸ್ನೇಕ್ ಗನೇಶ್ ಮಾತ್ರ ಜನನಿಬಿಡ ಪ್ರದೇಶಗಳತ್ತ ಬರುವ ಬಗೆಬಗೆಯ ಹಾವುಗಳನ್ನು ಹಿಡಿದು, ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದಾರೆ.
ಬಾಗೇಪಲ್ಲಿ ಪಟ್ಟಣದ 20ನೇ ವಾರ್ಡಿನ ನಿವಾಸಿ ಸ್ನೇಕ್ ಗಣೇಶ್ ವೃತ್ತಿಯಿಂದ ಮೂಲತಃ ಮೀನು ಸಾಕಣೆಗಾರ. ಕೆರೆಗಳನ್ನು ಗುತ್ತಿಗೆ ಪಡೆದು ಮೀನು ಸಾಕಿ ಮಾರಾಟ ಮಾಡುವುದು ಅವರ ವೃತ್ತಿ. ಪ್ರವೃತ್ತಿಯಾಗಿ ಉರಗ ಸಂರಕ್ಷಣೆ ಮಾಡುತ್ತಿದ್ದಾರೆ. ಹಾವು ಕಂಡವರು ಯಾರೇ ಕರೆ ಮಾಡಿದರೂ ತಕ್ಷಣ ಧಾವಿಸಿ ಅವುಗಳನ್ನು ಹಿಡಿದು ಸಂರಕ್ಷಣೆ ಮಾಡುತ್ತಾರೆ.
ಉರಗ ರಕ್ಷಕನಾಗಿದ್ದು ಆಕಸ್ಮಿಕ!
ಅಂದಹಾಗೆ ಸ್ನೇಕ್ ಗಣೇಶ್ ಉರಗ ರಕ್ಷಕನಾಗಿದ್ದು ಆಕಸ್ಮಿಕ. 39 ವರ್ಷ ವಯಸ್ಸಿನ ಸ್ನೇಕ್ ಗಣೇಶ್, ತನ್ನ ಸ್ನೇಹಿತ ಬೆಂಗಳೂರಿನ ಸ್ನೇಕ್ ಮುಕುಂದ್ ಜೊತೆ ಸೇರಿ ಹಾವು ಹಿಡಿಯುವ ಕಲೆಯನ್ನು ಕಲಿತುಕೊಂಡಿದ್ದಾರೆ.. 15ನೇ ವರ್ಷಕ್ಕೆ ಹಾವುಗಳನ್ನು ಹಿಡಿಯಲು ಹೋಗುತ್ತಿದ್ದ ಇವರು, ಇವತ್ತಿನವರೆಗೂ ಸಾವಿರಾರು ಹಾವುಗಳನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಎರಡು ಸಲ ಹಾವುಗಳು ಇವರನ್ನು ಕಚ್ಚಿದ್ದಾಗ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಜೀವದ ಹಂಗು ತೊರೆದು ಹಾವುಗಳಿಂದ ಜನರನ್ನು ರಕ್ಷಿಸುವುದರ ಜತೆಗೆ ಪ್ರಕೃತಿ ಸಮತೋಲನಕ್ಕಾಗಿ ಉರಗಗಳನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಪ್ರವೃತ್ತಿ ಬಗ್ಗೆ ಗಣೇಶ್ ಅವರು ಹೇಳಿದ್ದಿಷ್ಟು;
ಮೇ ಮತ್ತು ಜೂನ್ ತಿಂಗಳು ಹಾವುಗಳು ಮೊಟ್ಟೆ ಇಡುವ ಕಾಲ. ಮೊಟ್ಟೆ ಇಡುವುದಕ್ಕಾಗಿ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇಲಿ ಹೆಗ್ಗಣಗಳು ಇಲ್ಲದ ಜಾಗವನ್ನು ಹುಡುಕಿಕೊಳ್ಳುತ್ತವೆ. ಮೃದುವಾದ ಮಣ್ಣಿನ, ತಂಪಾದ ನೆರಳಿನ ಜಾಗದಲ್ಲಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡುತ್ತವೆ. ಇತರೆ ಪ್ರಾಣಿಗಳಿಂದ ಮೊಟ್ಟೆಗೆ ತೊಂದರೆಯಾಗದಂತೆ ರಕ್ಷಿಸುತ್ತವೆ.
ಎಲ್ಲಾ ಹಾವುಗಳು ವಿಷಕಾರಿ ಅಲ್ಲ. ನಮ್ಮ ದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ಹಾವುಗಳಿವೆ. ಅವುಗಳಲ್ಲಿ 63ರಿಂದ 65 ಜಾತಿಯ ಹಾವುಗಳು ಮಾತ್ರ ವಿಷಕಾರಿ. ನಮ್ಮಲ್ಲಿ ನಾಗರ, ಕೊಳಕುಮಂಡಲ, ಕಟ್ಟು ಹಾವು, ರತ್ನಮಂಡಲದಂಥ ವಿಷಕಾರಿ ಸರ್ಪಗಳಿವೆ. ಇವನ್ನು ಹೊರತುಪಡಿಸಿದರೆ ಉಳಿದ ಹಾವುಗಳಿಂದ ಮನುಷ್ಯನ ಪ್ರಾಣಕ್ಕೆ ಅಪಾಯವಿಲ್ಲ. ಪರಿಸರ ಸ್ನೇಹಿ ಹಾವುಗಳು ಕೂಡ ಇದ್ದು, ಇವು ಹೊಲ ಗದ್ದೆಗಳಲ್ಲಿ ಇರುವ ಇಲಿಗಳನ್ನು ತಿಂದು ರೈತರ ಬೆಳೆಗಳನ್ನು ರಕ್ಷಿಸುತ್ತವೆ.
ಹಾವು ಕಂಡರೆ ಇವರಿಗೆ ಕರೆ ಮಾಡಿ
ಬಾಗೇಪಲ್ಲಿ ಪಟ್ಟಣದಲ್ಲಿ ಎಲ್ಲೇ ಹಾವು ಕಂಡರೂ ಜನರು ತಕ್ಷಣ ಇವರಿಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾರೆ. ಈ ತನಕ ಉಚಿತವಾಗಿ ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಲ್ಲಿ ಬಿಟ್ಟಿರುವ ಗಣೇಶ್ ಬಗ್ಗೆ ಸಾರ್ವಜನಿಕರಿಗೆ ಬಹಳ ಮೆಚ್ಚುಗೆ ಇದೆ. ಪಟ್ಟಣದಲ್ಲಿ ಅಥವಾ ಸುತ್ತಮುತ್ತ ಎಲ್ಲಿಯೇ ಹಾವುಗಳು ಕಾಣಿಸಿಕೋಂಡರೆ ಸ್ನೇಕ್ ಗಣೇಶ್ ಅವರ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. 6360031505, 9480114442