ಚಿಕ್ಕಬಳ್ಳಾಪುರ-ಕೋಲಾರಕ್ಕೆ ಅನ್ಯಾಯ: ವೇದಾವತಿ ವ್ಯಾಲಿಯಲ್ಲಿ ಯೋಜನೆ ಸಮಾಧಿಗೆ ಹುನ್ನಾರ, DPR ನಲ್ಲೇ ಇಲ್ಲದ ವೇದಾವತಿ ವ್ಯಾಲಿಗೆ ನೀರು ಹರಿಸುವಂತೆ ಸೂಚಿಸಿದ ಮುಖ್ಯಮಂತ್ರಿ! ಪ್ರಾಜೆಕ್ಟ್ ಸುತ್ತ ಅನುಮಾನಗಳ ಹುತ್ತ
ಬೆಂಗಳೂರು: ಎರಡೇ ವರ್ಷಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸುತ್ತೇವೆ ಎಂದು ಆರಂಭಿಸಲಾದ ಎತ್ತಿನಹೊಳೆ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಯ ವೇದಾವತಿ ನದಿಯಲ್ಲಿ ಸಮಾಧಿ ಮಾಡುವ ಎಲ್ಲ ಹುನ್ನಾರಗಳು ಈಗ ಶುರುವಾಗಿವೆ!
ಈವರೆಗೆ 9003.86 ಕೋಟಿ ರೂ. ವೆಚ್ಚ ಮಾಡಲಾಗಿರುವ ಎತ್ತಿನಹೊಳೆ ಯೋಜನೆಯ ನೀರು ಲಭ್ಯತೆಯ ಬಗ್ಗೆಯೇ ದೊಡ್ಡ ಪ್ರಶ್ನೆ ಎದುರಾಗಿರುವ ಬೃಹತ್ ಸವಾಲಿನಿಂದ ಪಾರಾಗಲು ಸರಕಾರವು ಅತ್ಯಂತ ʼಕಿಲಾಡಿ ಹೆಜ್ಜೆʼ ಇರಿಸಿದ್ದು, ಯೋಜನೆಯಲ್ಲೇ ಇಲ್ಲದ ವೇದಾವತಿ ವ್ಯಾಲಿಗೆ ನೀರು ಹರಿಸಲು ಮುಖ್ಯಮಂತ್ರಿ ಅವರು ಮಂಗಳವಾರ ಅಧಿಕಾರಿಗಳಿಗೆ ಸೂಚನೆ ಕೊಟ್ಟು, ಅದಕ್ಕೆ ಮುಂದಿನ ಜುಲೈ ತಿಂಗಳ ಡೆಡ್‌ಲೈನ್ ವಿಧಿಸಿದ್ದಾರೆ!
ಎತ್ತಿನಹೊಳೆ ಯೋಜನೆಯ ಸಮಗ್ರ ಯೋಜನಾ ವರದಿ (DPR )ಯಲ್ಲಿ ಹಂಚಿಕೆ ಮಾಡದೆಯೇ ಹಾಗೂ ಯೋಜನೆಗೆ ಎಳ್ಳಷ್ಟೂ ಸಂಬಂಧವೇ ಇಲ್ಲದ ವೇದಾವತಿ ವ್ಯಾಲಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಳೆದ ಹತ್ತು ವರ್ಷಗಳಿಂದ ಹೇಳಿದ್ದನ್ನೇ ಹೇಳುತ್ತಾ, ಈಗಲೂ ಎತ್ತಿನಹೊಳೆ ಯೋಜನೆಯಿಂದ 7 ಜಿಲ್ಲೆಗಳ 29 ತಾಲೂಕುಗಳ 6,557 ಗ್ರಾಮಗಳ 68 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳುತ್ತಿರುವ ಅಧಿಕಾರಿಗಳು-ಗುತ್ತಿಗೆದಾರರ ಸುಳ್ಳು ಲೆಕ್ಕವೆಲ್ಲ ವೇದಾವತಿ ಕಣಿವೆಯಲ್ಲಿ ಕೊಚ್ಚಿ ಹೋಗುವ ದಿನಗಳು ಹತ್ತಿರದಲ್ಲೇ ಇವೆ.
ನೀರಿನ ಲೆಕ್ಕ ಮುಚ್ಚಿಡುವ ಹುನ್ನಾರ
ಬಯಲುಸೀಮೆಗೆ ನೀರು ಹರಿದಾಗ ಎಲ್ಲಿಗೆ ಎಷ್ಟು ನೀರು ಬಂತು ಎಂಬ ಕರಾರುವಕ್ಕಾದ ಲೆಕ್ಕ ಸಿಕ್ಕಿಬಿಡುತ್ತದೆ. ಆದರೆ, ನೀರನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಹರಿಸುವುದಿರಲಿ, ಇಡೀ ಯೋಜನೆಯನ್ನೇ ವೇದಾವತಿ ವ್ಯಾಲಿಗೆ ತಿರುಗಿಸಿಬಿಟ್ಟು ಅವಳಿ ಜಿಲ್ಲೆಗಳಿಗೆ ಕೈಎತ್ತಿ ಬಿಡುವ ಹುನ್ನಾರ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಎತ್ತಿನಹೊಳೆಯಲ್ಲಿ ಗುತ್ತಿಗೆದಾರರು ಹಾಗೂ ರಾಜಕಾರಣಿಗಳು 24 ಟಿಎಂಸಿ ನೀರು ಸಿಗುತ್ತದೆ ಎನ್ನುತ್ತಿದ್ದಾರೆ! ಆದರೆ ಜಲ ವಿಜ್ಞಾನದ (ಹೈಡ್ರಾಲಜಿ) ಪ್ರಕಾರ 7-8 ಟಿಎಂಸಿ ಸಿಕ್ಕಿದರೆ ಹೆಚ್ಚು. ಅಲ್ಲಿಂದ ಎತ್ತರಕ್ಕೆ ಲಿಫ್ಟ್ ಮಾಡಲು ಸಾಧ್ಯವಾಗುವುದು ಕೇವಲ 4-5 ಟಿಎಂಸಿ ನೀರನ್ನು ಮಾತ್ರ. ಈ ಬಗ್ಗೆ ಮೊದಲೇ ಸತ್ಯ ಅರಿತಿದ್ದ ಕೇಂದ್ರಿಯ ಜಲ ಆಯೋಗ (CWC) ಹಾಗೂ ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ (NIH-Roorki) 2010ರಲ್ಲೇ ಆಕ್ಷೇಪ ಎತ್ತಿದ್ದವು. ದೇಶದ ಅತ್ಯುನ್ನತ ಜಲ ಸಂಸ್ಥೆಗಳೆರಡೂ ʼಇದೊಂದು ವಿನಾಶಕಾರಿ ಯೋಜನೆ. ಮುಂದೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದವು. ಆದರೆ, ರಾಜ್ಯದ ಎಲ್ಲ ಸರಕಾರಗಳು ಈ ಎಚ್ಚರಿಕೆಯನ್ನು ಉದ್ದೇಶಪೂರ್ವಕವಾಗಿಯೇ ಅಲಕ್ಷಿಸಿ ಕಾಮಗಾರಿಗಳನ್ನು ನಡೆಸುತ್ತಿವೆ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ.
ಹೈಡ್ರಾಲಜಿ ಮರು ಅಧ್ಯಯನ ಮಾಡಿಸಲಿ
ಹತ್ತು ವರ್ಷಗಳಿಂದ ಗುತ್ತಿಗೆದಾರರು, ರಾಜಕಾರಣಿಗಳ ಕಣ್ಣಳತೆಯಲ್ಲಿ ತೆವಳುತ್ತಾ ನರಳಿ-ನರಳಿ ಸಾಗುತ್ತಿರುವ ಎತ್ತಿನಹೊಳೆ ಯೋಜನೆ ನಿರೀಕ್ಷಿತ ಪ್ರತಿಫಲ ನೀಡದು ಎಂಬ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಆದರೆ, ಮುಖ್ಯಮಂತ್ರಿಗಳಿಗೆ ನಿಜಕ್ಕೂ ಪ್ರಾಮಾಣಿಕತೆ ಹಾಗೂ ಬಯಲಿಸೀಮೆ ಬಗ್ಗೆ ಬದ್ಧತೆ ಇದ್ದರೆ ಇಡೀ ಯೋಜನೆಯ ಜಲವಿಜ್ಞಾನದ (ಹೈಡ್ರಾಲಜಿ) ಮರು ಅಧ್ಯಯನ ಮಾಡಿಸಲಿ. ಕೇಂದ್ರ ಸರಕಾರದ ಅಧೀನದಲ್ಲಿರುವ ಕೇಂದ್ರಿಯ ಜಲ ಆಯೋಗ (CWC) ಹಾಗೂ ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ (NIH-Roorki) ವತಿಯಿಂದ ಈ ಕೆಲಸ ಮಾಡಿಸಲಿ. ಎತ್ತಿನಹೊಳೆಯಲ್ಲಿ ಹೈಡ್ರಾಲಜಿ ಎನ್ನುವುದು ಜೀವಂತ ಇದೆಯೇ ಇಲ್ಲವೇ ಎಂಬುದನ್ನು ರಾಜ್ಯಕ್ಕೆ ತಿಳಿಸಲಿ ಎಂದು ಆಂಜನೇಯ ರೆಡ್ಡಿ ಒತ್ತಾಯ ಮಾಡಿದ್ದಾರೆ.
ಹಾಗಾದರೆ, ವೇದಾವತಿ ಕಣಿವೆ ಯೋಜನೆ ಹೇಗಿದೆ ಅಂತೀರಾ? ಅದು ಕೂಡ ಹೈಡ್ರಾಲಜಿಯ ಸೊಲ್ಲೆ ಇಲ್ಲದ ಯೋಜನೆ. ಅದಕ್ಕೆ ಅಡ್ಡಲಾಗಿ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲಾಗಿದೆ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಈ ಯೋಜನೆ ಬಗ್ಗೆಯೂ ಹೈಡ್ರಾಲಜಿ ಅಧ್ಯಯನ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಎತ್ತಿನಹೊಳೆಯ ಹೈಡ್ರಾಲಜಿ ಸತ್ಯಗಳು ನಾಡಿನ ಜನತೆಗೆ ಗೊತ್ತಾಗುವ ಮುನ್ನವೇ ಯೋಜನೆಯಲ್ಲೇ ಇಲ್ಲದ ವೇದಾವತಿ ವ್ಯಾಲಿಯನ್ನೂ ʼತೂರಿಸಿʼ ಇಡೀ ಎತ್ತಿನಹೊಳೆಯನ್ನು ಹಳ್ಳ ಹಿಡಿಸುವ ಕೆಲಸ ಶುರುವಾಗಿದೆ ಎಂದು ಅವರು ಹೇಳುತ್ತಾರೆ.
ಹೆಸರು ಕೋಲಾರ-ಚಿಕ್ಕಬಳ್ಳಾಪುರದ್ದು, ಉಳಿದದ್ದು??
ಎತ್ತಿನಹೊಳೆ ಯೋಜನೆಯು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ರೂಪಿಸಲಾದ ಯೋಜನೆ ಮಾತ್ರ. ಈ ಅಂಶವನ್ನು ಮೊತ್ತ ಮೊದಲು ಸಿದ್ಧಪಡಿಸಿದ ಡಿಪಿಆರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಈಗಲೂ ಯೋಜನೆಯ ಸಮಗ್ರ ವರದಿಯಲ್ಲಿ ಈ ಅಂಶವನ್ನು ಕಾಣಬಹುದು. ಕ್ರಮೇಣ ಅಧಿಕಾರಶಾಹಿ-ಗುತ್ತಿಗೆದಾರರು-ಎಲ್ಲ ಸರಕಾರಗಳ ರಾಜಕಾರಣಿಗಳ ಅಪವಿತ್ರ ಕೂಟದಿಂದ ಏಳೆಂಟು ಟಿಎಂಸಿ ನೀರೂ ಲಭ್ಯವಾಗದ ಯೋಜನೆಯನ್ನು ಏಳು ಜಿಲ್ಲೆಗಳಿಗೆ ಹರಿದು ಹಂಚಲಾಗಿದೆ.
ಇದರಿಂದ ಬಯಲುಸೀಮೆಗೆ ನೀರು ಹರಿಯುವುದಿರಲಿ, ಕೆಲವರ ಪಾಲಿಗೆ ಯೋಜನೆ ದುಡ್ಡಿನ ʼಅಕ್ಷಯ ಗಣಿʼಯಾಗಿ ಬದಲಾಗಿದೆ. ಈವರೆಗೆ 9003.86 ಕೋಟಿ ರೂ. ವೆಚ್ಚವಾಗಿದೆ ಎಂದು ಸ್ವತಃ ಮುಖ್ಯಮಂತ್ರಿಯೇ ಹೇಳಿದ್ದಾರೆ. ಹಾಗಾದರೆ, ಮುಂದಿನ ದಿನಗಳಲ್ಲಿ ಇನ್ನೆಷ್ಟು ಹಣ ನೀರುಪಾಲಾಗಲಿದೆ ಎಂದು ಜನರು ಕೇಳುತ್ತಿದ್ದಾರೆ.
ಅದೇ ಅಧಿಕಾರಿಗಳು!! ಯಾಕೆ?
10 ವರ್ಷಗಳಿಂದ ಎತ್ತಿನಹೊಳೆ, ಇಪ್ಪತ್ತು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಕರ್ತವ್ಯ ಲೋಪ ಮಾಡುತ್ತಿರುವ ಅಧಿಕಾರಿಗಳನ್ನೇ ಎದುರು ಕೂರಿಸಿಕೊಂಡು, ನೀರಾವರಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದಂತೆ ಅನುಷ್ಠಾನಗೊಳಿಸಬೇಕು. ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ ನಿಜ. ಆದರೆ, ಮುಖ್ಯಮಂತ್ರಿ ತಕ್ಷಣಕ್ಕೆ ಮಾಡಬೇಕಿರುವುದು ವಾರ್ನಿಂಗ್ ಅಲ್ಲ, ಎತ್ತಿನಹೊಳೆ ಯೋಜನೆ ಹೈಡ್ರಾಲಜಿಯ ಮರು ಅಧ್ಯಯನ ಎನ್ನುತ್ತಾರೆ ಆಂಜನೇಯ ರೆಡ್ಡಿ.
ಅನೇಕ ವರ್ಷಗಳಿಂದ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಬದಲಾದರೂ ಬದಲಾಗದೇ ಇರುವ ಅಧಿಕಾರಿಗಳೇ ನೀರಾವರಿ ಇಲಾಖೆಗಳಲ್ಲಿ ತುಂಬಿದ್ದಾರೆ. ನೀರಾವರಿ ನಿಗಮಗಳಲ್ಲಿ ಭದ್ರವಾಗಿ ಕೂತಿರುವುದು ಏಕೆ? ಅದಕ್ಷ ಅಧಿಕಾರಿಗಳಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎನ್ನುವ ಸತ್ಯ ಗೊತ್ತಿದ್ದರೂ ಸಿಎಂಗಳು ಬದಲಾದರೂ ಅಧಿಕಾರಿಗಳು ಸುಭದ್ರವಾಗಿದ್ದಾರೆ ಎಂದರೆ ಏನರ್ಥ ಎಂದು ಇದೇ ಇಲಾಖೆಗಳಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಯೊಬ್ಬರು ಎತ್ತುವ ಪ್ರಶ್ನೆ.
ಆರ್. ಆಂಜನೇಯ ರೆಡ್ಡಿ
ಬಯಲುಸೀಮೆಗೆ ಅನ್ಯಾಯವಾಗುತ್ತಿದೆ
ಎತ್ತಿನಹೊಳೆ ಯೋಜನೆಯೇ ಅವೈಜ್ಞಾನಿಕ. ಸುಳ್ಳುಲೆಕ್ಕ, ಸುಳ್ಳು ಅಂಶಗಳಿಂದ ಕೂಡಿರುವ ಕಪೋಲಕಲ್ಪಿತ ಯೋಜನೆ. ಹಣ ಖರ್ಚಾಗುತ್ತದೆ ವಿನಾ ನೀರು ಬರುವುದಿಲ್ಲ. ಈ ಸರಕಾರ ಮಾತ್ರವಲ್ಲ ಎಲ್ಲ ಸರಕಾರಗಳು ಬಯಲುಸೀಮೆಯನ್ನು ವಂಚಿಸಿವೆ. ಬರೀ ಸುಳ್ಳುಗಳ ಸೌಧವನ್ನೇ ಕಟ್ಟಲಾಗುತ್ತಿದೆ. ಆದರೂ ಯಾವುದೇ ನಾಚಿಕೆ ಇಲ್ಲದೆ, ಮಾನ ಮರ್ಯಾದೆ ಇಲ್ಲದೆ ಹತ್ತು ವರ್ಷದಿಂದ ಹೇಳಿದ್ದನ್ನೇ ಹೇಳುತ್ತಾ ಹೇಳುತ್ತಾ, ಇವತ್ತೂ ಸಹಾ ಎತ್ತಿನಹೊಳೆ ಯೋಜನೆಯು 7 ಜಿಲ್ಲೆಯ 29 ತಾಲ್ಲೂಕುಗಳ 6557 ಗ್ರಾಮಗಳ 68 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸಲಿದೆ ಎಂದು ಅಧಿಕಾರಿಗಳು ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Lead photo courtesy: Visvesvaraya jala nigam limited
Comments 3