ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ; ಸಂದರ್ಶನ ಇಲ್ಲ ಎಂದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರವು ಇನ್ನು ಆರು ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಕಟಿಸಿದರು.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದರ್ಶನ ಇಲ್ಲದೆಯೇ ಲಿಖಿತ ಪರೀಕ್ಷೆ ಮೂಲಕವೇ ಇಷ್ಟೂ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದರು.
ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆರು ತಿಂಗಳ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಲ್ಲದೆ, ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಅರ್ಹತೆ ಆಧಾರದ ಮೇಲೆಯೇ ಇಡೀ ನೇಮಕಾತಿ ಆಗಲಿದೆ ಎಂದು ಡಿಸಿಎಂ ಹೇಳಿದರು.
2009ರ ನಂತರ ಪ್ರಾಂಶುಪಾಲರನ್ನು ನೇಮಕಾತಿ ಮಾಡಿರಲಿಲ್ಲ. ಇದಕ್ಕೆ 55 ವರ್ಷ ವಯೋಮಿತಿ ಇದೆ. ಅದೇ 2017ರ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕವೂ ಆಗಿರಲಿಲ್ಲ ಎಂದ ಅವರು, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ 500 ಅಂಕಕ್ಕೆ ನಡೆಯುತ್ತದೆ. (ಕನ್ನಡ 100, ಇಂಗ್ಲಿಷ್ 100, ಜಿಕೆ 50 ಆಯ್ಕೆ ವಿಷಯಗಳಿಗೆ 250 ಅಂಕ ಇರುತ್ತದೆ.) ಪ್ರಾಂಶುಪಾಲರ ಆಯ್ಕೆ ಪರೀಕ್ಷೆ 100 ಅಂಕ ಇರುತ್ತದೆ. ಎಲ್ಲ ಪ್ರಶ್ನೆಗಳು ಬಹುಆಯ್ಕೆ ಮಾದರಿಯಲ್ಲಿ ಇರುತ್ತವೆ. ಪ್ರಾಥಮಿಕ ಅರ್ಹತೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಅರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ಮಾನದಂಡವೂ ಈ ನೇಮಕಾತಿಯಲ್ಲಿ ಇರುವುದಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.