1859ರ ಜೂನ್ 29ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುದ್ಮಲ್ ಎಂಬ ಹಳ್ಳಿಯ ಗೌಡ ಸಾರಸ್ವತ ಬ್ರಾಹ್ಮಣ ದಂಪತಿ ದೇವಪ್ಪಯ್ಯ ಮತ್ತು ಗೌರಿ ಅವರ ಮಗನಾಗಿ ಜನಿಸಿದವರು ರಂಗರಾವ್. ಸಾಮಾನ್ಯ ಕುಟುಂಬದ ಅವರ ತಂದೆ ದೇವಪ್ಪಯ್ಯನವರು ಸ್ಥಳೀಯ ಮುಸ್ಲಿಂ ಭೂ ಮಾಲೀಕರೊಬ್ಬರ ಬಳಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ರಂಗರಾವ್ ಅವರಿಗೆ ಸುಮಾರು 16 ವರ್ಷವಿದ್ದಾಗ ಅವರ ತಂದೆ ದೇವಪ್ಪಯ್ಯನವರು ಅಸುನೀಗಿದರು. ತಾಯಿ ತವರು ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಉದ್ಯೋಗ ಹುಡುಕಿಕೊಂಡು ಮಂಗಳೂರಿಗೆ ಬಂದು ಅಲ್ಲಿಯ ಶಾಲೆಯೊಂದರಲ್ಲಿ ಮಾಸಿಕ 8 ರೂಪಾಯಿಗಳ ಸಂಬಳದ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು ಸಂಸಾರದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಯಿತು. ಮುಂದೆ ಓದುವ ಆಸೆಯಿದ್ದರೂ ಶಿಕ್ಷಕ ವೃತ್ತಿಯನ್ನು ತತ್ಸಾರದಿಂದ ನೋಡದೆ, ಮಕ್ಕಳನ್ನು ಪ್ರೀತಿಯಿಂದ ನೋಡುತ್ತಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅಲ್ಲದೆ ಬಡತನದಲ್ಲಿದ್ದ ಕುಟುಂಬಗಳಿಗೆ ಸಹಾಯ ಮಾಡಿ ‘ಗುರು’ ಎಂಬ ಹೆಸರಿನಿಂದ ಚಿರಪರಿಚಿತರಾದರು.
ಎಷ್ಟೇ ಹಣದ ತೊಂದರೆಗಳಿದ್ದರೂ ಪರಿಶ್ರಮದಿಂದ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆ ಪೂರ್ಣಗೊಳಿಸಿದ ನಂತರ ಪ್ಲೀಡರ್ಶಿಪ್ ಪರೀಕ್ಷೆಯನ್ನೂ ಮುಗಿಸಿದರು. ಸಮಾಜದಲ್ಲಿನ ಅಸಮಾನತೆಯನ್ನು ಕಂಡು ಸಮಾಜದ ಸುಧಾರಣೆಗಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು ಮಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಬಡವರು, ಅಸಹಾಯಕರ, ನೊಂದವರಿಗಾಗಿ ವಕಾಲತ್ತು ವಹಿಸತೊಡಗಿದರು. “ಸತ್ಯ ನ್ಯಾಯ ಎಂದರೆ ಕುದ್ಮಲ್ ರಂಗರಾವ್” ಎಂದು ಹೆಸರುವಾಸಿಯಾದರು.
ಬಡವರ ವಕೀಲ
ಒಮ್ಮೆ ಸವರ್ಣೀಯನೊಬ್ಬನು ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆ ಗರ್ಭಿಣಿಯಾಗುವಂತೆ ಮಾಡಿದ. ರಂಗರಾವ್ ಅವರು ಆಕೆಯ ಪರವಾಗಿ ದಾವೆ ಹೂಡಿ ಯುವತಿಗೆ ಜೀವನಾಂಶವನ್ನು ಕೊಡಿಸಿ, ಅತ್ಯಾಚಾರಿಗೆ ಜೈಲುಶಿಕ್ಷೆಯನ್ನು ಆಗುವಂತೆ ಮಾಡಿದರು. ಹೀಗೆ ಸವರ್ಣೀಯರ ವಿರುದ್ಧ ವಕಾಲತ್ತು ಮಾಡಿ ಅವರ ಕೋಪಕ್ಕೆ ಗುರಿಯಾಗುತ್ತಿದ್ದರು ರಂಗರಾವ್.
ಹೆಸರಿಗಷ್ಟೇ ವಕೀಲ. ಅದರೆ ಅದರಿಂದ ಅವರಿಗೆ ಚಿಕ್ಕಾಸು ಹುಟ್ಟುತ್ತಿರಲಿಲ್ಲ. ಕಾರಣ ಅವರ ಹತ್ತಿರ ಬರುತ್ತಿದ್ದವರೆಲ್ಲರೂ ಅರ್ಥಿಕವಾಗಿ ಕಡು ಬಡವರೇ ಆಗಿದ್ದರು. ಹಾಗಾಗಿ ಅವರನ್ನು ʼಬಡವರ ವಕೀಲʼ ಎಂದೇ ಎಲ್ಲರೂ ಕರೆಯುತ್ತಿದ್ದರು. ವಕೀಲಿತನ ಅವರ ವೃತ್ತಿಯಾಗಿದ್ದರೂ ಮಕ್ಕಳಿಗೆ ಪಾಠ ಹೇಳಿಕೊಡುವುದು ಅವರ ಪ್ರವೃತ್ತಿಯಾಗಿತ್ತು. ಶಿಕ್ಷಣವೇ ಪ್ರಗತಿಯ ಮೂಲ ಎಂಬುದು ಅವರ ಸಿದ್ಧಾಂತವಾಗಿತ್ತು. ಆಂಗ್ಲ ಸರಕಾರ ಅಸ್ಪೃಶ್ಯರಿಗಾಗಿ ಶಾಲೆಯೊಂದನ್ನು ತೆರೆಯಿತು. ಆದರೆ ಅವರಿಗೆ ಪಾಠ ಕಲಿಸಲು ಯಾವ ಸವರ್ಣೀಯ ಶಿಕ್ಷಕರೂ ಮುಂದೆ ಬರಲಿಲ್ಲ ಮತ್ತೂ ಕಲಿಯದಂತೆ ಅವರಿಗೆ ಹಲವಾರು ತೊಂದರೆಗಳನ್ನು ಕೊಡುತ್ತಿದ್ದರು. ಇವೆಲ್ಲದರ ನಡುವೆಯೂ ಬೆಂದೂರು ಬಾಬು ಎಂಬುವವರು ನಾಲ್ಕನೇ ತರಗತಿಯವರೆಗೆ ಓದಿ ನ್ಯಾಯಾಲಯದಲ್ಲಿ ಪೇದೆ ಕೆಲಸಕ್ಕೆ ಆಯ್ಕೆಯಾದರು. ಆದರೆ ಸವರ್ಣೀಯರ ವಿರೋಧದಿಂದ ಬಾಬು ನೌಕರಿ ಮಾಡಲಾಗಲಿಲ್ಲ. ಈ ಘಟನೆಯಿಂದ ನೊಂದ ರಂಗರಾವ್ ಅವರು ತಮ್ಮ ವಕೀಲ ವೃತ್ತಿಯನ್ನು ಬಿಟ್ಟು “ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವೆ” ಎಂಬ ಗಟ್ಟಿ ನಿರ್ಧಾರ ಮಾಡಿದರು. ದಲಿತರಿಗೆ ಯಾವುದೇ ಶಾಲಾ, ಸಂಸ್ಥೆಗಳಲ್ಲಿ ಮುಕ್ತ ಪ್ರವೇಶವಿರಲಿಲ್ಲದ ಕಾರಣ, ಅದೆಷ್ಟೋ ದೀನದಲಿತ ಮಕ್ಕಳು ಶಾಲೆಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿರುವುದನ್ನು ಮನಗಂಡು ದೀನ ದಲಿತರಿಗಾಗಿ ವಕೀಲ ವೃತ್ತಿಗೆ ರಾಜಿನಾಮೆ ನೀಡಿದರು.
ರಂಗರಾವ್ ರವರು 1892ರಲ್ಲಿ ಮಂಗಳೂರಿನ ಉರ್ವಚಿಲಂಬಿಯಲ್ಲಿ ಪ್ರಥಮ ಬಾರಿಗೆ ದಲಿತ ಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಆದರೆ ಸವರ್ಣೀಯರ ಕಿರುಕುಳದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ಆದರೂ ಎದೆಗುಂದದೆ ರಂಗರಾವ್ “The Depressed Classes Mission (D.C.M) kodialbail, Mangalore ಎಂಬ ಸಂಸ್ಥೆಯನ್ನು ಸ್ಥಾಪಿಸಿ “ಪಂಚಮಶಾಲೆ” ಎಂಬ ಹೆಸರಿನಿಂದ ಮಂಗಳೂರಿನ
ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡು ಇಲ್ಲಿ ದಲಿತರಿಗೆ ಉಚಿತ ಶಾಲೆಗಳನ್ನು ತೆರೆದರು. ಈ ಶಾಲೆಗಳಿಗೆ ಪರಿಶಿಷ್ಟ ಜಾತಿಯ ಶಿಕ್ಷಕರನ್ನು ನೇಮಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ದೀಪವಾದರು. ಮಕ್ಕಳು ಶಾಲೆಗಳಿಗೆ ತಪ್ಪದೇ ಹಾಜರಾಗುವಂತೆ ಮನವೊಲಿಸಲು ತಮ್ಮ ಶಾಲಾ ಮಕ್ಕಳಿಗೆ ಅವರೇ ಸ್ನಾನ ಮಾಡಿಸಿ ಅವರನ್ನು ಸ್ವಚ್ಚವಾಗಿ ಇರುವಂತೆ ನೋಡಿಕೊಂಡರು.
“ಹೆಣ್ಣುಮಕ್ಕಳು ಅಕ್ಷರ ಕಲಿತರೆ ಇಡೀ ಕುಟುಂಬ ಪ್ರಗತಿಯನ್ನು ಸಾಧಿಸುತ್ತದೆ” ಎಂದು ನಂಬಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1899ರಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿದರು.
ಇಂದು ಸರಕಾರಿ ಶಾಲೆಗಳಲ್ಲಿ ಇರುವ ಬಿಸಿಯೂಟ ಪದ್ಧತಿಯನ್ನು ರಂಗರಾವ್ ಅವರು ಸುಮಾರು 100 ವರ್ಷದ ಹಿಂದೆಯೇ ಪ್ರಾರಂಭಿಸಿದ್ದರು.
ಆವರ ಪೋಷಕರಿಗೆ ಕೇವಲ 2 ಪೈಸೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದಲ್ಲದೇ ಅವರೊಂದಿಗೇ ರಂಗರಾವ್ ಊಟವನ್ನು ಮಾಡುತ್ತಿದ್ದರು ಮತ್ತೂ ಗುಡಿಸಲುಗಳಲ್ಲಿಯೇ ಮಲಗುತ್ತಿದ್ದರು. ಅದರಲ್ಲೂ ಅನೇಕರು ಇನ್ನೂ ಜೀತ ಪದ್ದತಿಯ ದಾಸ್ಯ ಜೀವನವನ್ನು ನಡೆಸುತ್ತಿದ್ದದ್ದನ್ನು ಗಮನಿಸಿ ಆ ಅನಾಗರಿಕ ಯಜಮಾನರ ಹಿಡಿತದಿಂದ ಅವರನ್ನು ಬಿಡುಗಡೆಗೊಳಿಸಿದರು.
ಅವರ ಎಲ್ಲಾ ಕೆಲಸ ಕಾರ್ಯಗಳಿಗೂ ಪತ್ನಿ ರುಕ್ಮಿಣಿಯವರು ನೆರವಾಗುತ್ತಿದ್ದರು. ಇವರು ತಮ್ಮ ಮಕ್ಕಳನ್ನು ಎಲ್ಲರಂತೆ ಸಾಮಾನ್ಯ ಶಾಲೆಯಲ್ಲೇ ಸೇರಿಸಿದ್ದರು. ಅಸ್ಪೃಶ್ಯರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಅವರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಅವರ ಮಕ್ಕಳಿಗೆ ಸ್ವತಃ ಇವರೇ ಸ್ನಾನ ಮಾಡಿಸುತ್ತಿದ್ದರು. ಅವರಿಗೆ ಶಿಕ್ಷಣದ ಕೊರತೆಯಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದನ್ನು ತಿಳಿಸಿ, ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಹಗಲು ರಾತ್ರಿಯನ್ನದೆ ಶ್ರಮಿಸುತ್ತಿದ್ದರು.
ಶೇಡಿಗುಡ್ಡೆಯಲ್ಲಿ ದಲಿತರಿಗೆಂದೇ ಕೈಗಾರಿಕಾ ತರಬೇತಿ ಶಾಲೆ ತೆರೆದು ವೃತ್ತಿಪರ ಶಿಕ್ಷಣಗಳಾದ ಬಡಗಿ, ನೇಯ್ಗೆ, ರೇಷ್ಮೆ, ತೋಟಗಾರಿಕೆ, ಕಸೂತಿಗಳ ತರಬೇತಿ ನೀಡಿದರು. ದೂರದ ಊರಿನಿಂದ ಬರುವ ಹೆಣ್ಣು ಮಕ್ಕಳಿಗೆಂದೇ ವಿದ್ಯಾರ್ಥಿನಿಲಯವನ್ನು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿ ಅವರ ವಿದ್ಯಾಭ್ಯಾಸಕ್ಕೆ, ಸ್ಫೂರ್ತಿ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಿದರು. ಕೊರಗ ಜನಾಂಗದವರಿಗೆ ಕೋರ್ಟಗುಡ್ಡೆ ಬಳಿ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಲ್ಲದೇ, ವಿಧವೆಯರು ಮತ್ತು ದೇವದಾಸಿಯರಿಗೆ ಆಶ್ರಮಗಳನ್ನು ನಿರ್ಮಿಸಿದರಲ್ಲದೆ, ಅವರಿಗೆ ಮರು ವಿವಾಹಗಳನ್ನು ಮಾಡಿಸಿದರು.
ಸರಳತೆ ಮತ್ತು ಸುಸಂಸ್ಕೃತರಾದ ಇವರು ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. “ಸರಳತೆ, ಪರಿಶುದ್ಧತೆ, ಪ್ರಾಮಾಣಿಕತೆ, ತ್ಯಾಗ, ಅಸಹಾಯಕರ, ಅಸ್ಪೃಶ್ಯರ ಕಣ್ಣೀರು ಒರೆಸುವುದು ಅವರ ಸುಧಾರಣೆಗಾಗಿ ಕೆಲಸ ಮಾಡುವುದೇ ನಿಜವಾದ ದೇವರ ಕೆಲಸ” ಎಂದು ನಂಬಿದ್ದ ಇವರು ಜಾತಿಪದ್ಧತಿಯನ್ನು ವಿರೋಧಿಸುತ್ತಿದ್ದರು.
ಗಾಂಧೀಜಿಯವರನ್ನೂ ಪ್ರಭಾವಿಸಿದ್ದರು!
ಸ್ವತಃ ತಮ್ಮ ವಿಧವೆ ಮಗಳಾದ ರಾಧಾಬಾಯಿಯನ್ನು ಮದ್ರಾಸಿನ ಜಮೀನ್ದಾರ್ ಡಾ.ಪಿ.ಸುಬ್ಬರಾಯನ್ ಅವರಿಗೆ ವಿವಾಹ ಮಾಡಿಕೊಡುವ ಮೂಲಕ ಅಂತರ್ಜಾತಿ ವಿವಾಹ ಮತ್ತು ವಿಧವಾ ಮರು-ವಿವಾಹಕ್ಕೆ ಸ್ವಯಂ ಪ್ರೇರಣಾದಾಯಕರಾದರು ರಂಗರಾವ್. ಈ ಕಾರ್ಯದಿಂದ ಸ್ಫೂರ್ತಿಗೊಂಡ ಮಹಾತ್ಮಾಗಾಂಧಿಯವರೂ ಸಹಾ ತಮ್ಮ ಮಗನಿಗೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಮಗಳೊಂದಿಗೆ ಅಂತರ್ಜಾತಿ ವಿವಾಹ ಮಾಡಿದ್ದಲ್ಲದೇ, ನಾನು ಶ್ರೀ ರಂಗರಾವ್ ಅವರಿಂದ ಸಾಮಾಜಿಕ ನಿಷ್ಠೆಯನ್ನು ಗ್ರಹಿಸಿದ್ದೇನೆ. ಅವರು ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ. ಅಸ್ಪೃಶ್ಯರ ಉನ್ನತಿಗೆ ಬಂದಾಗ ಅವರೇ ನನ್ನ ಶಿಕ್ಷಕರು ಎಂದು ಮುಕ್ತ ಕಂಠದಿಂದ ಹೊಗಳಿದ್ದರು.
ದಲಿತರು ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು. ಆತ್ಮ ಗಾಂಭೀರ್ಯ ಬೆಳೆಸಿಕೊಳ್ಳುವುದರ ಜತೆಗೆ ಧಾರ್ಮಿಕ ಆಚರಣೆಯನ್ನು ಮೈಗೂಡಿಸಿಕೊಂಡು, ಏಕಾಗ್ರತೆ, ಸಂಘಟನೆಯ ವೃದ್ಧಿಗೆಂದೇ ಪ್ರತಿಯೊಂದು ಕಾಲನಿಯಲ್ಲಿ ಭಜನಾ ಮಂದಿರವನ್ನು ಸ್ಥಾಪಿಸಿದ್ದರು. ಬದುಕುವ ಹಕ್ಕು, ವಾಸಿಸುವ ಹಕ್ಕು, ಶಿಕ್ಷಣ ಹಾಗೂ ಉದ್ಯೋಗದ ಹಕ್ಕುಗಳಿಗೆ ದಲಿತರು ಹೇಗೆ ಮೈಗೂಡಿಸಬೇಕು ಎನ್ನುವುದನ್ನು ತನ್ನ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಪಾದಿಸುತ್ತಾ ಅದನ್ನು ಕಾರ್ಯರೂಪಕ್ಕೆ ತಂದಿದ್ದರು ರಂಗರಾವ್ ಅವರು.
ದಲಿತರ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡ ಇವರು ಅವರಿಗೆ ಮನೆಗಳಿಗಾಗಿ ನಿವೇಶನಗಳನ್ನು ಹಂಚಿದರು. ಜೀತಮುಕ್ತರನ್ನಾಗಿಸಲು ಸ್ವಂತ ಜಮೀನನ್ನು “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಜಮೀನನ್ನು ಸವರ್ಣೀಯರು ಯಾವ ಕಾರಣಕ್ಕೂ ಕೊಳ್ಳಬಾರದು, ಕೊಂಡುಕೊಂಡರೂ ಅದು ಸಿಂಧುವಾಗುವುದಿಲ್ಲ” ಎಂಬ ಷರತ್ತಿನೊಂದಿಗೆ ಹಂಚಿದರು. ಜತೆಗೆ ಅವರಿಗೆ ಯಾವ ರೀತಿ ವ್ಯವಸಾಯ ಮಾಡಬೇಕೆಂಬುದನ್ನು ಸಹ ತಿಳಿಸಿಕೊಡುತ್ತಿದ್ದರು.
ಇದರ ಜತೆಗೆ ಆರ್ಥಿಕ ಸುಧಾರಣೆಗಾಗಿ ದಲಿತ ಜನಾಂಗದವರ ಕುಲ ಕಸುಬು ಮತ್ತು ಕೈಕಸುಬುಗಳಿಗೆ ಪ್ರೋತ್ಸಾಹ ನೀಡಿದರು. ಅದಕ್ಕಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದರು ಮತ್ತು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಿದರು. ಅವರ ಆರ್ಥಿಕ ಭದ್ರತೆಗಾಗಿ “ಆದಿದ್ರಾವಿಡ ಸಹಕಾರ ಸಂಘ”ವನ್ನು ಸ್ಥಾಪಿಸಿದರು. ದಲಿತರನ್ನು ರಾಜಕೀಯವಾಗಿಯೂ ಮುಂದೆ ಬರುವಂತೆ ಬಹಳ ಶ್ರಮಿಸಿದರು.
ದಲಿತರ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದ ಇವರಿಗೆ ಹಲವರು ಧನಸಹಾಯವನ್ನು ಮಾಡಿದರು. ಅನೇಕರು ಇವರ ಶಾಲೆಗಳಿಗೆ ಪುಸ್ತಕಗಳನ್ನು ನೀಡಿದರು. ದೇಶೀಯರಲ್ಲದೆ ವಿದೇಶಿಯರು ಸಹ ಸಹಾಯಹಸ್ತವನ್ನು ಚಾಚಿದರು. ಇವರ ಈ ಸಾಮಾಜಿಕ ಕಳಕಳಿಯನ್ನು ಕಂಡ ಆಗಿನ ಸರಕಾರ “ರಾವ್ ಸಾಹೇಬ್” ಎಂಬ ಬಿರುದು, ಪ್ರಮಾಣಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿತ್ತು.
ದೇಶದಲ್ಲೇ ರಾಜಕೀಯ ಮೀಸಲಾತಿ ಹೋರಾಟ ಮಾಡಿದವರು ಇವರೇ ಮೊದಲಿಗರು. ಜಿಲ್ಲಾ ಮತ್ತು ಪುರಸಭೆ ಸಂಸ್ಥೆಗಳಿಗೆ ಅವರ ಮೀಸಲಾತಿ ಹೋರಾಟದ ಫಲವಾಗಿ ಅಂಗರ ಮಾಸ್ತರ್ ಮತ್ತು ಗೋವಿಂದ ಮಾಸ್ತರ್ ಎಂಬ ದಲಿತರಿಬ್ಬರು ಸ್ಥಳೀಯ ಸಂಸ್ಥೆಯ ಸದಸ್ಯರಾದರು. ಇವರ ದಲಿತರ ಸೇವೆ ಗುರುತಿಸಿ ಅಮೆರಿಕದ ಖ್ಯಾತ ಉದ್ಯಮಿ ಹೆನ್ರಿಫೋರ್ಡ್, ಡಾ. ಕಾರ್ನಾಟ್, ಜಸ್ಟಿಸ್ ವಿಲ್ಭರ್ಟ ಇವರಿಗೆ ಅಭಿನಂದನೆ ಸಲ್ಲಿಸಿದ್ದರು. ಇವರಿಗೆ ದೊರೆತ ರಾವ್ ಬಹದ್ದೂರ್ ಮತ್ತು ಇತರೆ ಪ್ರಶಸ್ತಿಗಳಿಂದ ತಮ್ಮ ತಲೆಗೇರಿ ತಮಗೆ ಅಹಂಕಾರ ಬರಬಾರದೆಂದು ಆ ಪ್ರಶಸ್ತಿಗಳನ್ನೇ ಬೆಂಕಿಗೆ ಹಾಕಿ ಸುಟ್ಟುಹಾಕಿದಂತಹ ಮಹನೀಯರು.
ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧ ಹೋರಾಡಿದ, ಸಮಾನತೆ ಸಾಧಿಸಿ ಹಾಗೂ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಂಡು ಬದುಕಬೇಕೆಂದು ಪ್ರತಿಪಾದಿಸಿ ಅದನ್ನು ತೋರಿಸಿ ಕೊಡುವ ಮೂಲಕ ದೀನ ದಲಿತರ ಉದ್ಧಾರಕರೆಂದು ಹೆಸರುವಾಸಿಯಾಗಿದ್ದ ಮತ್ತು ಅನೇಕ ದೀನ ದಲಿತರಿಗೆ ಮಾರ್ಗದರ್ಶಕರಾಗಿದ್ದ ಶ್ರೀ ರಂಗರಾವ್ ಅವರು ಜನವರಿ 30, 1928ರಂದು ನಮ್ಮನ್ನಗಲಿದರು.
ಪ್ರಸ್ತುತ ದಿನಮಾನಗಳಲ್ಲಿ ಸಮಾಜ ಯಾವ ದಿಕ್ಕಿನಲ್ಲಿ ಸಾಗುತಿದೆ, ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಕರಾಗುವಂತವರು ಜಾತಿ, ಧರ್ಮದ ನಡುವೆ ದ್ವೇಷ ಬಿತ್ತುವಂತಹ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಅವರು ಜೀವನ ನಮ್ಮಲ್ಲರಿಗೆ ಮಾದರಿ. ಅವರ ಸೇವಾ ಮನೋಭಾವವನ್ನು ಅಳವಡಿಸಿಕೊಂಡಾಗ ಮಾತ್ರ ದೀನ ದಲಿತರ ಅಭಿವೃದ್ಧಿ, ದೇಶದ ಉನ್ನತಿ ಸಾಧ್ಯ.
ಆ ದಿವ್ಯ ಚೇತನಕ್ಕೆ ಪ್ರಣಾಮಗಳು
photos courtesy: livehistoryindia.com
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.