ಡಾ.ವೈ.ಎ.ಎನ್ ಮತ್ತು ಚಿದಾನಂದ ಎಂ.ಗೌಡ ಬಳಗದ ವತಿಯಿಂದ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ
by Ra Na Gopala Reddy Bagepalli
ಬಾಗೇಪಲ್ಲಿ: ರಾಜ್ಯದ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ತಿಳಿಸಿದರು.
ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಚಿದಾನಂದಗೌಡ ಮತ್ತು ವೈಎಎನ್ ಅಭಿಮಾನಿ ಬಳಗದ ವತಿಯಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ 32 ಸಾವಿರ ಖಾಸಗಿ ಅನುದಾನ ರಹಿತ ಶಾಲೆಗಳಿದ್ದು, ಶಿಕ್ಷಣ ಸಂಸ್ಥೆಗಳು ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭಗಳಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೂ ಆಹಾರದ ಕಿಟ್ ವಿತರಣೆ ಮಾಡುವ ಬಗ್ಗೆ ಆಲೋಚಿಸಿ ನನ್ನ ಮತಕ್ಷೇತ್ರದ ವ್ಯಾಪ್ತಿಯ 5 ಜಿಲ್ಲೆಯ 32 ತಾಲೂಕುಗಳಲ್ಲಿ ಇರುವ ಶಿಕ್ಷಕರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ನೀಡಲಾಗಿದೆ. ಖಾಸಗಿ ಅಥವಾ ಯಾವುದೇ ಶಾಲೆಗಳಿಗೆ ಶಿಕ್ಷಕರು ಹಾಗೂ ಪೋಷಕರೇ ಆಧಾರ ಸ್ಥಂಭಗಳು ಎಂದರು.
ಬೇರೆ ರಾಜ್ಯಗಳಲ್ಲಿ ಸಂಬಳವೇ ನೀಡದ ಪರಿಸ್ಥಿತಿಯಿದ್ದು, ನಮ್ಮ ರಾಜ್ಯದ ಶಿಕ್ಷಕರ ಕಷ್ಟ ಅರಿತು ಖಾಸಗಿ ಶಾಲೆಯ ಶಿಕ್ಷಕರಿಗೂ 5 ಸಾವಿರ ರೂ. ಪ್ಯಾಕೇಜ್ ಘೋಷಿಸಿದ ಏಕೈಕ ಸರಕಾರ ಕರ್ನಾಟಕ ಬಿಜೆಪಿ ಸರಕಾರ ಎಂದರು ಎಂದರು.
ಕೊರೊನಾ ಬಗ್ಗೆ ಎಚ್ಚರ ವಹಿಸಿ, ಮಾರ್ಗಸೂಚಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯಬೇಕು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು ಇಡೀ ಶಿಕ್ಷಕ ಸಮುದಾಯ ಬಡವಾಗಿದೆ. ಗ್ರಾಮೀಣ ಭಾಗದ ಖಾಸಗಿ ಶಾಲೆಯ ಶಿಕ್ಷಕರಿಗೆ ಘೋಷಿಸಿರುವ ಪರಿಹಾರದ ಪ್ಯಾಕೇಜ್ ಹಣವನ್ನು ರಾಜ್ಯ ಸರಕಾರ ಘೋಷಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕಿನ ಶಿಕ್ಷಕರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಬಿಇಒ ಎಸ್.ಸಿದ್ದಪ್ಪ ಅವರಿಗೆ ಸೂಚನೆ ನೀಡಿದರು.
ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಶಿಕ್ಷಕರಿಗೂ ಪ್ಯಾಕೇಜ್ ನೀಡುವ ಚಿಂತನೆ ನಡೆಯುತ್ತಿದ್ದು, ಯಾರೂ ಧೃತಿಗೆಡಬಾರದು ಎಂದು ಆತ್ಮಸ್ಥೈರ್ಯ ನಾರಾಯಣಸ್ವಾಮಿ ತುಂಬಿದರು.
ಕಾರ್ಯಕ್ರಮದಲ್ಲಿ ಬಿಇಒ ಎಸ್.ಸಿದ್ದಪ್ಪ, ಬೆಂಗಳೂರು ನಗರದ ವರ್ತುಲ ರಸ್ತೆ ಯೋಜನೆ ಪ್ರಾಧಿಕಾರ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ.ಮುನಿರಾಜು, ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್, ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ಬಯ್ಯಾರೆಡ್ಡಿ, ನ್ಯಾಷನಲ್ ಕಾಲೇಜ್ ಹಿರಿಯ ಉಪನ್ಯಾಸಕ ಕೆ.ಟಿ.ವೀರಾಂಜನೇಯ, ಸರಕಾರಿ ಪದವಿ ಕಾಲೇಜಿನ ಎನ್.ನಾಗರಾಜು, ಅಮೀರ್ ಜಾನ್, ನಾರಾಯಣಪ್ಪ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ಕೆ.ಬಿ.ಆಂಜನೇಯ ರೆಡ್ಡಿ, ರಾಜಾರೆಡ್ಡಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.