ಬಾಗೇಪಲ್ಲಿ: ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಅಡುಗೆ ಸಹಾಯಕ ನೌಕರರ ಬದುಕು ಶೋಚನೀಯವಾಗಿದ್ದು, ಅಂಥವರ ಬದುಕಿಗೆ ಸ್ಥಿತಿವಂತರು ಆಸರೆಯಾಗಿ ನಿಲ್ಲಬೇಕು ಎಂದು ಬಾಗೇಪಲ್ಲಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ಸಲಹೆ ಮನವಿ ಮಾಡಿದರು.
ಗುರುವಾರ ಬಾಗೇಪಲ್ಲಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಡುಗೆ ಸಹಾಯಕರಿಗೆ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಈಗಾಗಲೇ ಮಕ್ಕಳಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು ಬಾಗೇಪಲ್ಲಿ ಪಟ್ಟಣ ಹಾಗೂ ಕಸಬಾ, ದೇವರಗುಡಿಪಲ್ಲಿ ವ್ಯಾಪ್ತಿಯಲ್ಲಿ ಸುಮಾರು 400 ದಿನಸಿ ಕಿಟ್ ವಿತರಣೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಬಗ್ಗೆ ಜಾಗೃತಿ ಇರಲಿ. ತಪ್ಪದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಈ ಬಗ್ಗೆ ಯಾವುದೇ ಮೂಢನಂಬಿಕೆ ಬೇಡ ಎಂದು ಅವರು ಕಿವಿಮಾತು ಹೇಳಿದರು.
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುಖ್ಯಸ್ಥ ಕಿರಣ್ ಮಾತನಾಡಿ, ಜಗತ್ತಿನಾದ್ಯಂತ ಕೊರೊನಾ ಎಲ್ಲರ ಬದುಕನ್ನು ಕಸಿದುಕೊಂಡಿದೆ. ಇಂಥ ಸಂಕಷ್ಟದ ಸಮಯದಲ್ಲಿ ಹಲವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹ ನೆರವಿನ ಹಸ್ತ ಚಾಚಿದೆ ಎಂದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತ ರೆಡ್ಡಿ, ಪ್ರಾಥಮಿಕ ಶಾಲೆ ನೌಕರರ ಸಂಘದ ಅಧ್ಯಕ್ಷ ಪಿ.ವೆಂಕಟರಮಣ, ಪ್ರದಾನ ಕಾರ್ಯದರ್ಶಿ ಸಿ.ವೆಂಕಟರಾಯಪ್ಪ, ಸಂಘಟನಾ ಕಾರ್ಯದರ್ಶಿ ಕದಿರಪ್ಪ, ಬಾಗೇಪಲ್ಲಿ ಪಟ್ಟಣದ ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಬಿಳ್ಳೂರು ನಾಗರಾಜು, ಶಿವಶಂಕರ ಚಾರಿಟಿಯು ಮುಖಂಡ ಮುಸ್ತಫಾ ಸೇರಿ ಮುಂತಾದವರು ಪಾಲ್ಗೊಂಡಿದ್ದರು.