ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆಯಲ್ಲಿ ಕೋವಿಡ್ ವಿರುದ್ಧ ಗೆಲುವು
by G S Bharath Gudibande
ಗುಡಿಬಂಡೆ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2ಕ್ಕೆ ಇಳಿದಿದ್ದು ಇನ್ನು ಕೆಲ ದಿನಗಳಲ್ಲಿ ಇಡೀ ರಾಜ್ಯದಲ್ಲಿಯೇ ಮೊದಲ ಕೊರೋನಾ ಮುಕ್ತ ತಾಲೂಕು ಆಗುವತ್ತ ಗುಡಿಬಂಡೆ ಹೆಜ್ಜೆ ಹಾಕುತ್ತಿದೆ.
ಈ ಮೂಲಕ ರಾಜ್ಯದ ಅತಿ ಪುಟ್ಟ ತಾಲೂಕು ದೊಡ್ಡ ಮಟ್ಟದ ಸಾಧನೆ ಮಾಡುವಲ್ಲಿ ಗುಡಿಬಂಡೆ ದಾಪುಗಾಲು ಇಡುತ್ತಿದ್ದು, ಅತಿ ಶೀಘ್ರದಲ್ಲಿಯೇ ಸೋಂಕಿನ ಶೂನ್ಯ ಸಂಖ್ಯೆಯನ್ನು ಕಾಣಬಹುದಾಗಿದೆ.
ತಾಲೂಕಿನಲ್ಲಿ ಮೊದಲನೇ ಅಲೆಗಿಂತ 2ನೇ ಅಲೆಯಲ್ಲಿ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿತ್ತು. ಆದರೆ ಈ ಸಂಖ್ಯೆ ಮೂರ್ನಾಲ್ಕು ದಿನಗಳಿಗೆ ಒಂದೆರಡು ಪ್ರಕರಣಗಳು ಕಂಡು ಬರುತ್ತಿವೆ. ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂಬುದು ಅಂಕಿ-ಅಂಶಗಳಿಂದ ತಿಳಿಯುತ್ತಿದೆ.
ಪಾಸಿಟಿವ್ ಬಂದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು ಮಾತ್ರವಲ್ಲದೆ, ಆರೋಗ್ಯ ಸೇವೆ ನೀಡಲು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಕಂದಾಯ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಅಧಿಕಾರಿಗಳಿಗೆ ಜನ ಪ್ರತಿನಿಧಿಗಳು ಸಾಥ್ ನೀಡಿರುವುದು ತಾಲೂಕು ಆಡಳಿತ ಯಂತ್ರಕ್ಕೆ ಆನೆ ಬಲ ನೀಡಿದೆ.
16 ದಿನಗಳ ಅಭಿಯಾನ
ತಾಲೂಕಿನಲ್ಲಿ ಸೋಂಕಿಯರನ್ನು ಪತ್ತೆ ಹಚ್ಚಿ ಸ್ಥಳದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಸರ್ಕಾರದ ಮಹತ್ವ ಯೋಜನೆಯಾದ ʼಡಾಕ್ಟರ್ಸ್ ನಡೆ ಹಳ್ಳಿಯ ಕಡೆʼ ಎಂಬ ಅಭಿಯಾನ ಆರಂಭ ಮಾಡಿ, ತಾಲೂಕಿನ 2 ಪಂಚಾಯಿತಿಗಳಿಗೆ 1 ತಂಡದಂತೆ ಒಟ್ಟು 4 ತಂಡ ಕೆಲಸ ಮಾಡಿ ಸ್ಥಳದಲ್ಲೇ ಪರೀಕ್ಷೆ ಹಾಗೂ ಸೋಂಕಿತರ ಆರೋಗ್ಯ ಪರಿಶೀಲಿಸಿ ಐಸೋಲೇಷನ್ ಅಥವಾ ಕ್ವಾರೆಂಟೈನ್ ಸೆಂಟರ್ ಗೆ ಕಳುಹಿಸುತ್ತಿದ್ದರು, ಇದರ ಫಲಿತಾಂಶವೇ ಇಂದು ಕೊರೋನಾ ಮುಕ್ತ ತಾಲೂಕಾಗುವತ್ತ ಗುಡಿಬಂಡೆ ದಾಪುಗಾಲು ಇಟ್ಟಿದೆ ಎಂದು ಟಿಹೆಚ್ಒ ಡಾ.ನರಸಿಂಹಮೂರ್ತಿ ತಿಳಿಸಿದ್ದಾರೆ.
ಕೋವಿಡ್-19 ಸಹಾಯವಾಣಿ
ತಾಲೂಕು ಕಚೇರಿಯಲ್ಲಿ ಕೊರೋನಾ ಸೋಂಕಿತರಿಗೆ ಮಾಹಿತಿ ನೀಡಲು ಹಾಗೂ ಅವರ ಆರೋಗ್ಯ ವಿಚಾರಿಸಲು ತಾಲೂಕು ಸಹಾಯವಾಣಿಯನ್ನು ಆರಂಭಿಸಲಾಗಿತ್ತು, ಇದು 24/7 ಕೆಲಸ ನಿರ್ವಹಿಸಿ ಕರೆ ಮಾಡಿದವರಿಗೆ ಸಲಹೆ ಸೂಚನೆಗಳನ್ನು ನೀಡಿ ವೈದ್ಯರ ಸಂಪರ್ಕ ಕಲ್ಪಿಸಿ ಕೊಟ್ಟು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದರಿಂದಲೇ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ತಹಶೀಲ್ದಾರ್ ಸಿಬ್ಗತ್ವುಲ್ಲಾ ಹೇಳಿದ್ದಾರೆ.
ಗ್ರಾಮಗಳಲ್ಲಿ ಟಾಸ್ಕ್ ಫೂರ್ಸ್
ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಟಾಸ್ಕ್ ಫೋರ್ಸ್ʼಗಳನ್ನು ರಚನೆ ಮಾಡಿಕೊಂಡು ಹಳ್ಳಿಗಳಲ್ಲಿ ಪಾಸಿಟಿವ್ ಬಂದ ಸೋಂಕಿತರನ್ನು ಪತ್ತೆ ಹಚ್ಚಿ ಅವರ ಆರೋಗ್ಯ ವಿಚಾರಿಸುವುದು ಹಾಗೂ ತಾಲೂಕಿನ ಕೋವಿಡ್ ಕೇರ್ ಸೆಂಟರ್ʼಗೆ ಸ್ಥಳಾಂತರಿಸುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ.
2ನೇ ಹಂತದ ಆರ್ಟಿಪಿಸಿಆರ್ ಪರೀಕ್ಷೆ
ತಾಲೂಕಿನಲ್ಲಿ ಮೊದಲ ಹಂತದ ಆರ್ಟಿಪಿಸಿಆರ್ ಪರೀಕ್ಷೆ 99% ಎಷ್ಟು ಮುಗಿಸಿ 2ನೇ ಹಂತದ ಪರೀಕ್ಷೆಗೆ ಕಾಲಿಟ್ಟಿರುವುದು ದೊಡ್ಡ ಸಾಧನೆ. ಹಾಗಾಗಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಡಾ.ನರಸಿಂಹಮೂರ್ತಿ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಲಸಿಕಾ ಅಭಿಯಾನವು ಒಂದು ಮಹತ್ವದ ಕ್ರಮ. ಸಾರ್ವಜನಿಕರಿಗೆ ಕೊರೋನಾ ಸೋಂಕಿನ ಬಗ್ಗೆ ಅರಿವು ಬಂದಿದ್ದು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಂಡು ಕೊರೋನಾ ಮುಕ್ತ ತಾಲೂಕು ಮಾಡಲು ಸಹಕರಿಸುತ್ತಿದ್ದಾರೆ.