ರಾಜ್ಯವನ್ನು ಹಾಡಿ ಹೊಗಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬೆಂಗಳೂರು: ಜೈವಿಕ ನಾವೀನ್ಯತೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಬಹು ಮುಖ್ಯ ಪಾತ್ರವಹಿಸಿದೆ ಮತ್ತು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಭಾರತದ ಏಕೈಕ ರಾಜ್ಯವಾಗಿದ್ದು, ಕರ್ನಾಟಕ ಭಾರತದ ಬಯೋಟೆಕ್ನಾಲಜಿಯ ರಾಜಧಾನಿಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಶುಕ್ರವಾರ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬೆಂಗಳೂರು ಹೆಲಿಕ್ಸ್ ಬಯೋಟೆಕ್ನಾಲಜಿ ಪಾರ್ಕ್‍ನ್ನು ವೀಕ್ಷಿಸಿದ ನಂತರ ಕರ್ನಾಟಕದ ಬಯೋಟೆಕ್ನಾಲಜಿ ಕ್ಷೇತ್ರದ ಉದ್ಯಮಿಗಳು ಹಾಗೂ ನವೋದ್ಯಮಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲಿ ಸ್ಥಾಪಿಸಲಾಗಿರುವ ಬಯೋಟೆಕ್ನಾಲಜಿ ಉದ್ಯಮಗಳು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹೆಸರನ್ನು ತಂದುಕೊಟ್ಟಿವೆ ಎಂದು ಕೊಂಡಾಡಿದರು.
ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಬಯೋಟೆಕ್ನಾಲಜಿ ಕ್ಷೇತ್ರ ಭವಿಷ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂಬ ನಂಬಿಕೆ ನನಗಿದೆ. ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡಲು ಉತ್ಸುಕವಾಗಿದೆ ಎಂದು ತಿಳಿಸಿದರು.
ನವೋದ್ಯಮದ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ರೀತಿಯ ಸೌಲಭ್ಯಗಳನ್ನು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಡಗೊಳಿಸಬಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ.
ಇಂತಹ ಬೇಟಿಗಳು ಹಾಗೂ ಸಂವಾದಗಳು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತವೆ. ಇಂದಿನ ಸಂವಾದದಲ್ಲಿ ಚರ್ಚಿಸಲಾದ ವಿಷಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಅವುಗಳೆಲ್ಲವನ್ನು ತಾವೇ ಖುದ್ದಾಗಿ ಪರಿಶೀಲಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಅಗತ್ಯ ಬಿದ್ದಲ್ಲಿ ಉದ್ಯಮಿಗಳನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಬಯೋಟೆಕ್ನಾಲಜಿ ಆರ್ಥಿಕತೆಯಲ್ಲಿ ಕರ್ನಾಟಕ ಒಂದು ಪ್ರಮುಖ ರಾಜ್ಯವಾಗಿದ್ದು, 2025ರ ವೇಳೆಗೆ ಶೇಕಡ 19ರ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಯೋಜನೆಗೆ ಕರ್ನಾಟಕ ಸರ್ಕಾರ ಸ್ಥಳೀಯ ಉದ್ಯಮಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಇಲ್ಲಿನ ಅನೇಕ ಖಾಸಗಿ ಸಂಸ್ಥೆಗಳು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮನ್ನಣೆಗಳಿಸಿವೆ. ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಕರ್ನಾಟಕ – 2030 ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅನೇಕ ಗುರಿಗಳನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕೇಂದ್ರ ವಿತ್ತ ಸಚಿವಾಲಯದ ಸರ್ಕಾರದ ಕಾರ್ಯದರ್ಶಿ ತರುಣ್ ಬಜಾಜ್ ಅವರು ಮಾತನಾಡಿ, ಇಂದಿನ ಸಂವಾದದಲ್ಲಿ ನಡೆದ ವಿಷಯಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಂತಹ ಬೇಟಿ ಹಾಗೂ ಸಂವಾದಗಳು ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತವೆ. ಉದ್ಯಮಿಗಳು ತಮ್ಮ ಯಾವುದೇ ಸಲಹೆ ಸೂಚನೆ ಹಾಗೂ ಪ್ರಶ್ನೆಗಳಿಗೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಅವರು ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಬಯೋಟೆಕ್ನಾಲಜಿ ಪಾರ್ಕ್ ಸ್ಥಾಪಿಸುವಲ್ಲಿ ಹಾಗೂ ರಾಜ್ಯದ ಇತರೆ ನಗರಗಳಿಗೆ ಸಹ ಅದನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿರುವ ಖ್ಯಾತ ಮಹಿಳಾ ಉದ್ಯಮಿ ಡಾ. ಕಿರಣ್ ಮಜುಂದಾರ್ ಶಾ ಅವರು ಸೇರಿದಂತೆ ಅನೇಕ ಉದ್ಯಮಿಗಳು ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಭವಿಷ್ಯದ ಕುರಿತು ಸಂವಾದದಲ್ಲಿ ಕೇಂದ್ರ ಸಚಿವರ ಗಮನ ಸೆಳೆದರು.
ರಾಜ್ಯ ಐಟಿ-ಬಿಟಿಯ ವ್ಯವಸ್ಥಾಪಕ ನಿರ್ದೇಶಕರಾದ ಮೀನಾ ನಾಗರಾಜ್ ಅವರು ಸ್ವಾಗತ ಕೋರಿದರು. ಸಂವಾದ ಆರಂಭವಾಗುವ ಮುನ್ನಾ ಕೇಂದ್ರ ಸಚಿವೆ ಹಾಗೂ ಅಧಿಕಾರಿಗಳ ತಂಡ ರಾಜ್ಯ ಸರ್ಕಾರದ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ ಸೇರಿದಂತೆ ಹಲವು ಸಂಸ್ಥೆಗಳಿಗೆ ಬೇಟಿ ನೀಡಿ ವೀಕ್ಷಿಸಿದರು.