ಮುಖ್ಯಮಂತ್ರಿ & ಅವರ ಕುಟುಂಬ ಮೇಲೆ ಮತ್ತೆ ವಾಗ್ದಾಳಿ ನಡೆಸಿದ ವಿಜಯಪುರ ಶಾಸಕ
ಮೈಸೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜಿ ಸಂಧಾನ ಮಾಡಿ ಸ್ವಲ್ಪ ಸೈಲಂಟಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುನಾ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಆದರೆ ಈ ಬಾರಿ ಅವರು ಮಾಡಿರುವ ಆರೋಪಗಳು ಮೊದಲಿಗಿಂತ ತೀಕ್ಷ್ಣವಾಗಿವೆ ಅಲ್ಲದೆ, ಮುಖ್ಯಮಂತ್ರಿ ಅಧಿಕೃತ ನಿವಾಸ ʼಕಾವೇರಿʼಯತ್ತಲೇ ಯತ್ನಾಳ್ ಬೊಟ್ಟು ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಅಮ್ಮನವರ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
ವಿಜಯೇಂದ್ರ ನಡೆಸುವ ಎಲ್ಲ ವ್ಯವಹಾರ ಮತ್ತು ಡೀಲುಗಳು ಮುಖ್ಯಮಂತ್ರಿಗಳ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ಗೌಸ್ʼನಲ್ಲಿ ನಡೆಸಲಾಗುತ್ತಿದೆ. ಆ ಗೆಸ್ಟ್‌ಹೌಸ್ ಮೇಲೆ ಪೊಲೀಸರು ಯಾಕೆ ದಾಳಿ ಮಾಡುತ್ತಿಲ್ಲ? ಸಿಸಿಬಿ ಪೊಲೀಸರು ಅಲ್ಲೂ ರೇಡ್ ಮಾಡಬೇಕು ಎಂದು ಯತ್ನಾಳ್ ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ? ವಿಜಯೇಂದ್ರ ಹೇಗೆಲ್ಲಾ ಡೀಲ್ ಕುದುರಿಸುತ್ತಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಾಗಿದೆ. ದಿನಕ್ಕೆ ನೂರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ ಎಂದು ಬಸನಗೌಡ ಯತ್ನಾಳ್ ನೇರ ಆರೋಪ ಮಾಡಿದರು.
ದುಷ್ಟರ ಸಂಹಾರ ಆಗಲೇಬೇಕು
ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ, ಭ್ರಷ್ಟರ ಸಂಹಾರ ಆಗಲೇಬೇಕು. ದುಷ್ಟರ ಸಂಹಾರ ಮಾಡು ತಾಯಿ ಎಂದು ಚಾಮುಂಡೇಶ್ವರಿ ಅಮ್ಮನವರಲ್ಲಿ ಬೇಡಿಕೊಂಡಿದ್ದೇನೆ. ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ಯಾರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಯಾರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು, ಭ್ರಷ್ಟರು. ಅವರೆಲ್ಲರ ಸಂಹಾರ ಆಗಲೇಬೇಕು ಎಂದು ತಾಯಿಯನ್ನು ಬೇಡಿಕೊಂಡಿದ್ದೇನೆ. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸ ನನಗೆ ಇದೆ ಎಂದು ಯತ್ನಾಳ್ ಹೇಳಿದರು.
ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತಹ ಒಳ್ಳೆಯವರೂ ಇದ್ದರು. ಒಮ್ಮೊಮ್ಮೆ ಹೀಗೆಲ್ಲ ಆಗುತ್ತೆ. ಆದರೆ ದುಷ್ಟ ಸಂಹಾರ ಆಗಲೇಬೇಕಲ್ವ ? ಕೆಟ್ಟವರಿಗೆ ಕೊನೆಗಾಲ ಅಂತ ಇದ್ದೇ ಇರುತ್ತೆ. ಅಲ್ಲಿವರೆಗೂ ಕಾಯೋಣ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಅಗಸ್ಟ್ 15ರಂದು ರಾಜ್ಯದ ನೂತನ ಮುಖ್ಯಮಂತ್ರಿ ಧ್ವಜಾರೋಹಣ ಮಾಡಬೇಕು. ಅಷ್ಟರೊಳಗೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು. ಅಲ್ಲಿವರೆಗೂ ಯಾಕೆ ಇವರನ್ನು ಮುಂದುವರೆಸಬೇಕು? ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.
ಮುಖ್ಯಮಂತ್ರಿ ನಡೆಸುತ್ತಿರುವ ಅಕ್ರಮಗಳಲ್ಲಿ ಪ್ರತಿಪಕ್ಷಗಳೂ ಶಾಮೀಲಾಗಿವೆ. ಸಿಎಂ ಕಡೆಯಿಂದ ವಿಪಕ್ಷ ನಾಯಕರಿಗೆ ಮಾಮೂಲಿ ಹೋಗ್ತಿದೆ ಎಂದು ಅವರು ದೂರಿದರು.
ಮಠಾಧೀಶರು ಖಾದಿ ತೊಡಲಿ!
ವೀರಶೈವ ಲಿಂಗಯಿತರ ಹೆಸರು ಹೇಳಿ ಎಷ್ಟು ದಿನ ಬ್ಲ್ಯಾಕ್‌ಮೇಲ್ ಮಾಡುತ್ತೀರಿ? ಲಿಂಗಾಯಿತರಲ್ಲಿ ಇಷ್ಟು ಭ್ರಷ್ಟ ಸಿಎಂ ಯಾರು ಇರಲಿಲ್ಲ. ಇವರ ಕರ್ಮಕಾಂಡ ನೋಡಲು ಆಗುತ್ತಿಲ್ಲ. ಲಿಂಗಾಯತರು ತಲೆತಗ್ಗಿಸುವಂತಹ ಆಡಳಿತ ನೀಡುತ್ತಿದ್ದೀರಿ ಎಂದು ಸಿಎಂ ವಿರುದ್ಧ ಯತ್ನಾಳ್ ಗುಡುಗಿದರು.
ಯಡಿಯೂರಪ್ಪನವರನ್ನು ತೆಗೆದರೆ ಸರ್ವನಾಶ ಆಗುತ್ತದೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಠಗಳು ಹೇಳುತ್ತವೆ. ನಾಲ್ಕು ಮಠಗಳು ಬೆಂಬಲ ನೀಡಿದ ತಕ್ಷಣ ಎಲ್ಲರೂ ಅವರ ಹಿಂದೆ ಇದ್ದಾರೆ ಎಂತ ಅಲ್ಲ. ಮಠಗಳು ಬೀದಿಗಿಳಿಯಬೇಕಾಗಿರುವುದು ಧರ್ಮದ ಸಲುವಾಗಿ. ರಾಜಕಾರಣದ ಸಲುವಾಗಿ ಅಲ್ಲ. ಸಾರ್ವಜನಿಕರಿಗೆ ಅನುಕೂಲವಾಗುವ ಧಾರ್ಮಿಕ ಕಾರ್ಯಕ್ರಮ, ಗೋ ಶಾಲೆ ಮೊದಲಾದ ಧರ್ಮ ಕಾರ್ಯಗಳನ್ನು ಮಠಗಳು ನಡೆಸಬೇಕು ಎಂದು ಯತ್ನಾಳ್ ಸಲಹೆ ನೀಡಿದರು.
ಎಲ್ಲರೂ ಸುತ್ತೂರು ಶ್ರೀಗಳ ಬಳಿ ಹೋಗಿ ಅದು ರಾಜಕೀಯ ಪಡಸಾಲೆ ಆಗಿದೆ. ನನ್ನ ಭೇಟಿಯಿಂದ ಈ ಹೊಲಸು ರಾಜಕೀಯದ ತಪ್ಪು ಸಂದೇಶ ಹೋಗಬಾರದು. ಶ್ರೀಗಳ ಪೂರ್ವಾಶ್ರಮದ ತಾಯಿ ತೀರಿಕೊಂಡಿದ್ದರೂ ಹೋಗುತ್ತಿಲ್ಲ. ಎಂದೂ ನಾನು ಮಠವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಆದ್ದರಿಂದ ಶ್ರೀಗಳಿಗೆ ರಾಜಕೀಯ ದುಷ್ಟರಿಗೆ ಬೆಂಬಲಕೊಡದೆ ಒಳ್ಳೆಯವರಿಗೆ ಬೆಂಬಲ ಕೊಡಿ ಎಂದು ಮನವಿ ಮಾಡುತ್ತೇನೆ ಎಂದರು ಯತ್ನಾಳ್.