ತಮಿಳುನಾಡು ಕಿತಾಪತಿ; ರಾಜ್ಯದಲ್ಲಿ ಗರಿಗೆದರಿದ ರಾಜಕೀಯ
Mekedatu photo courtesy: Wikipedia
ಬೆಂಗಳೂರು: ಮೇಕೆದಾಟು ಯೋಜನೆ ಇತ್ತ ಕರ್ನಾಟಕದಲ್ಲಿ, ಅತ್ತ ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಂಪನಗಳನ್ನು ಉಂಟು ಮಾಡುತ್ತಿದೆ.
ನೆರೆ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿಯೇ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿ ನಡುವೆ ಮೇಲಾಟ ನಡೆಯುತ್ತಿದೆ.
ಇದರ ನಡುವೆ ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ತಪ್ಪು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಹೇಳಿಕೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಮೇಕೆದಾಟು ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ
ಸಿದ್ದರಾಮಯ್ಯ ಅವರು ಹೇಳಿದ್ದೇನು?
ನಾವು ಅಣೆಕಟ್ಟು ಕಟ್ಟಲು ಅವರ (ತಮಿಳುನಾಡು) ಅನುಮತಿ ಏಕೆ ಬೇಕು? ಕೋರ್ಟ್ ಆದೇಶ ಪ್ರಕಾರ ನಮ್ಮ ಕೆಲಸ ನಾವು ಮಾಡಬೇಕು. ಪತ್ರ ಬರೆದು ಅನುಮತಿ ಕೋರಿದರೆ ಯಾರೂ ಒಪ್ಪುವುದಿಲ್ಲ. ನಾವು ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ಕಾಂಗ್ರೆಸ್ ಸರಕಾರ ಇದ್ದಾಗ ಈ ರೀತಿ ಪತ್ರ ಬರೆದು ಒಪ್ಪಿಗೆ ಕೇಳಿರಲಿಲ್ಲ.
ನಾನು ಮುಖ್ಯಮಂತ್ರಿ ಆಗಿದಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲನಾ ಸೀತಾರಾಮನ್ ಅವರ ಕಚೇರಿ ಮುಂದೆ ಧರಣಿ ಕೂರುತ್ತಿದ್ದೆ. ಯಡಿಯೂರಪ್ಪ ಅವರು ಕೇಂದ್ರ ಸರಕಾರದ ಬಗ್ಗೆ ಮಾತನಾಡುವುದಿಲ್ಲ. 15ನೇ ಹಣಕಾಸು ಆಯೋಗದ ವರದಿಯಂತೆ ನಮಗೆ 5,495 ಕೋಟಿ ರೂ. ಹಣ ಬರಬೇಕು. ಆದರೆ, ಯಾರು ಸಹ ತುಟಿ ಬಿಚ್ಚಲ್ಲ.
ಬೊಮ್ಮಾಯಿ ಹೇಳಿದ್ದಿಷ್ಟು
ಕಾವೇರಿ ಕಣಿವೆಯಲ್ಲಿನ ಕರ್ನಾಟಕ ರಾಜ್ಯದ ರೈತರ ಹಕ್ಕಿನ ಸಲುವಾಗಿ ತಮಿಳುನಾಡು ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಹೋರಾಟದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ.
ಮೇಕೆದಾಟು ಯೋಜನೆ ಇಂದು-ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದೆ ಈ ಯೋಜನೆ ಸಿದ್ಧವಾಗಿದೆ. ಇದು ವಿದ್ಯುತ್, ಕುಡಿಯುವ ನೀರು ಮತ್ತು ಸಂಕಷ್ಟದ ವರ್ಷಗಳಲ್ಲಿ ಉಭಯ ರಾಜ್ಯಗಳ ನಡುವೆ ನೀರಿನ ಸಮರ್ಪಕ ನಿರ್ವಹಣೆ ಮಾಡಲು ಅನುಕೂಲವಾಗುವ ಯೋಜನೆಯಾಗಿದೆ. ಉಭಯ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಯನ್ನು ಜಾರಿ ಮಾಡಲು ನಾವು ಪ್ರಯತ್ನಿಸಿದ್ದರೆ, ತಮಿಳುನಾಡು ಸರ್ಕಾರ ತಕರಾರು ತೆಗೆಯುತ್ತಿದೆ.
ಕರ್ನಾಟಕ ರಾಜ್ಯದ ಕಾವೇರಿ ಕಣಿವೆಯ ರೈತರ ಹಕ್ಕಿನ ಸಲುವಾಗಿ ನಾವು ಕಾನೂನು ಹೋರಾಟವನ್ನು ಸದಾಕಾಲ ಮಾಡುತ್ತಲೇ ಬಂದಿದ್ದೇವೆ. ನಮ್ಮ ಹಕ್ಕಿನ ಸಲುವಾಗಿ ಈಗಲೂ ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂಬ ವಿಶ್ವಾಸವಿದೆ.
ಮೇಕೆದಾಟು ಯೋಚನೆ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ಕೇಂದ್ರ ಸರಕಾರದಿಂದ ಬೇಕಾಗುವ ಎಲ್ಲಾ ಕ್ಲಿಯರೆನ್ಸ್ ಗಳನ್ನು ಪಡೆಯುತ್ತೇವೆ.