ಎರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 35 ಬಾರಿ ಏರಿಕೆ!!
Lead photo by Skitterphoto from Pexels
ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ತೈಲ ಬೆಲೆ ಏರಿಕೆ ನಿಂತಿಲ್ಲ. ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ರೂ.103.26ಕ್ಕೆ ತಲುಪಿದ್ದು, ಜನರು ಬೆಳ ಬೆಳಗ್ಗೆ ಹೌಹಾರಿದ್ದಾರೆ.
ವೀಕೆಂಡ್ ಮುಗಿಸಿಕೊಂಡು ಸೋಮವಾರ ಬೆಳಗ್ಗೆ ಬಂಕ್‌ಗಳ ಕಡೆ ಬಂದ ಜನರಿಗೆ ದರ ಏರಿಕೆ ಬಿಸಿ ತಟ್ಟಿತಲ್ಲದೆ, ಪೆಟ್ರೋಲ್ ದರವನ್ನು 36 ಪೈಸೆ ಏರಿಕೆ ಮಾಡಲಾಗಿದೆ. ನೂರು ರೂಪಾಯಿ ದಾಟಿದ ಪೆಟ್ರೋಲ್ ಬೆಲೆಯ ಓಟ ನಿಲ್ಲುವ ಹಾಗೆ ಕಾಣುತ್ತಿಲ್ಲ. ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 35 ಬಾರಿ ಏರಿಕೆಯಾಗಿದೆ. ಪುಣ್ಯಕ್ಕೆ ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿಲ್ಲ.
ಒಂದೆಡೆ ದೇಶಾದ್ಯಂತ ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಬೆಲೆ ೧೦೦ ನಾಟೌಟ್ ಎಂಬ ಅಭಿಯಾನದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದೆ. ಇನ್ನೊಂದೆಡೆ ತೈಲ ಕಂಪನಿಗಳು ಹತೋಟಿ ಇಲ್ಲದೆ ಬೆಲೆಯನ್ನು ಹಿಗ್ಗಾಮುಗ್ಗಾ ಏರಿಸುತ್ತಿವೆ.
ಸೋಮವಾರದ ದರ ಏರಿಕೆಯೊಂದಿಗೆ ಬೆಂಗಳೂರು ಮಹಾನಗರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.26 ರೂ. ತಲುಪಿದೆ. ಅದೇ ರೀತಿ ದೇಶ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.92 ರೂ. ಮುಟ್ಟಿದೆ. ಇನ್ನು, ನಮ್ಮ ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಈ ದರ 105.97ಕ್ಕೇರಿದೆ. ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ 99.9 ರೂ. ಆಗಿದ್ದು, ಸದ್ಯಕ್ಕೆ ಅಲ್ಲಿ ಇನ್ನೂ ಸೆಂಚರಿ ಭಾರಿಸಿಲ್ಲ. ಆದರೆ, ನೆರೆಯ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಸೆಂಚುರಿ ದಾಟಿ 100.8 ರೂ. ಆಗಿದೆ.
ಪೆಟ್ರೋಲ್-ಡೀಸೆಲ್ ಬೆಲೆ ಗಗನಮುಖಿ ಆಗುತ್ತಿದ್ದರೂ ಕೇಂದ್ರ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂಪನ್ಮೂಲ ಸಂಗ್ರಹಕ್ಕೆ ಇದೊಂದೇ ದಾರಿ ಎನ್ನುವಂತೆ ವರ್ತಿಸುತ್ತಿದೆ. ಅಲ್ಲದೆ, ರಾಜ್ಯಗಳೇ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಪಲಾಯನ ಮಾಡುತ್ತಿದೆ.
ಸೋಮವಾರ ಬೆಳಗ್ಗೆ ಮಾಡಿದ ದರ ಏರಿಕೆ ಹಿನ್ನೆಲೆಯಲ್ಲಿ ಕರ್ನಾಟವೂ ಸೇರಿದಂತೆ ಪಕ್ಕದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು & ಕಾಶ್ಮೀರ, ಒಡಿಶಾ, ಬಿಹಾರ, ಪಂಜಾಬ್ ರಾಜ್ಯಗಳಲ್ಲಿ ಪೆಟ್ರೋಲ್ ರೇಟು ಸೆಂಚುರಿ ದಾಟಿ ಮುಂದೆ ಹೋಗಿದೆ.