ಏಳು ವರ್ಷಗಳ ವಜೂಭಾಯಿ ವಾಲಾ ಅವರ ಅಧಿಕಾರಾವಧಿ ಅಂತ್ಯ
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ದಿನೇದಿನೆ ಕಗ್ಗಂಟಾಗುತ್ತಿರುವ ಬೆನ್ಹಲ್ಲೇ ರಾಜ್ಯಕ್ಕೆ ಹೊಸ ರಾಜ್ಯಪಾಲರ ನೇಮಕ ಆಗಿದೆ.
ರಾಜ್ಯದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಾಗಿದ್ದ ಥಾವರಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದಾರೆ.
ಖುರ್ಷಿದ್ ಆಲಂ ಖಾನ್ ಅವರ ನಂತರ ರಾಜ್ಯಕ್ಕೆ ದಾಖಲೆ ಏಳು ವರ್ಷ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಎರಡು ಅವಧಿಗಳು ಮುಗಿದ ಹಿನ್ನೆಲೆಯಲ್ಲಿ ಹೊಸ ರಾಜ್ಯಪಾಲರ ನೇಮಕವಾಗಿದೆ.
ಎಂಟು ರಾಜ್ಯಗಳಲ್ಲಿ ನೂತನ ರಾಜ್ಯಪಾಲರ, ಕೆಲವರ ವರ್ಗಾವಣೆ ನೇಮಕವಾಗಿದ್ದು, ಅದರಲ್ಲಿ ಕರ್ನಾಟಕವೂ ಸೇರಿದೆ. ಕೇಂದ್ರದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಥಾವರಚಂದ್ ಗೆಹಲೋತ್ ಅವರು ಎರಡು-ಮೂರು ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಅವರು ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.
ನೂತನ ರಾಜ್ಯಪಾಲರ ಪರಿಚಯ
ಥಾವರಚಂದ್ ಗೆಹಲೋತ್ ಅವರು ಮೂಲತಃ ಮಧ್ಯಪ್ರದೇಶದವರು. 1948 ಮೇ 18ರಂದು ನಾಗಡ ಎಂಬ ಪ್ರದೇಶದ ರುಪೇಥಾ ಎಂಬ ಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿದವರು. ಸಮೀಪದಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿರುವ ಅವರು ಉಜ್ಜಯನಿಯ ವಿಕ್ರಂ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದರು.
ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಾಗಿ ಬೆಳೆದ ಅವರು, ಮೂರು ಬಾರಿ ಕೇಂದ್ರ ಸಚಿವರಾಗಿದ್ದರು. ಈವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದ ಗೆಹಲೋತ್ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸಮಾಜ ವಿಜ್ಞಾನಗಳ ವಿವಿಯಿಂದ ಗೌರವ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರು?
ಮಿಜೋರಂ ರಾಜ್ಯಪಾಲರಾಗಿದ್ದ ಪಿ.ಎಸ್.ಶ್ರೀಧರನ್ ಅವರನ್ನು ಗೋವಾ ರಾಜ್ಯಪಾಲರನ್ನಾಗಿ, ಹರಿಯಾಣ ರಾಜ್ಯಪಾಲರಾಗಿದ್ದ ಸತ್ಯದೇವ್ ನಾರಾಯಣ ಆರ್ಯಾ ಅವರನ್ನು ತ್ರಿಪುರ ರಾಜ್ಯಪಾಲರನ್ನಾಗಿ, ತ್ರಿಪುರ ರಾಜ್ಯಪಾಲರಾಗಿದ್ದ ರಮೇಶ್ ಬಿಯಾಸ್ ಅವರನ್ನು ಜಾರ್ಖಂಡ್ ರಾಜ್ಯಪಾರನ್ನಾಗಿ, ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇಯ ಅವರನ್ನು ಹರಿಯಾಣ ರಾಜ್ಯಪಾಲರನ್ನಾಗಿ ರಾಷ್ಟ್ರಪತಿಗಳು ವರ್ಗಾವಣೆ ಮಾಡಿದ್ದಾರೆ.
ಜತೆಗೆ, ಡಾ.ಹರಿಬಾಬು ಕಂಬಂಪತಿ ಅವರನ್ನು ಹರಿಯಾಣ ರಾಜ್ಯಪಾಲರನ್ನಾಗಿ, ಮಂಗೂಭಾಯ್ ಛಗನ್‌ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶ ರಾಜ್ಯಪಾಲರನ್ನಾಗಿ, ರಾಜೇಂದ್ರ ವಿಶ್ವನಾಥ್ ಅರ್‌ಲೇಕರ್ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲ ಆದೇಶಗಳು ತತ್‌ಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.