ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 70,000 ಆಹಾರ ಕಿಟ್: ಸಿದ್ದರಾಮಯ್ಯ & ಡಿ.ಕೆ.ಶಿವಕುಮಾರ್ ಅವರಿಂದ ಚಾಲನೆ
by GS Bharath Gudibande
ಗುಡಿಬಂಡೆ: ಮಹಾಮಾರಿ ಕೊರೋನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಾಗೂ ಉದ್ಯೋಗ ಕಳೆದುಕೊಂಡು ಒತ್ತಡಕ್ಕೆ ಸಿಲುಕಿರುವ ಬಾಗೇಪಲ್ಲಿ ಕ್ಷೇತ್ರದ ಜನರ ನೆರವಿಗೆ ದೊಡ್ಡ ಪ್ರಮಾಣದಲ್ಲಿ ಧಾವಿಸಿದ್ದಾರೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ.
ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿರುವ ಶಾಸಕರು, ಇದೀಗ ಕ್ಷೇತ್ರದ ಪ್ರತಿ ಕುಟುಂಬಕ್ಕೂ ಆಹಾರ ಕಿಟ್ ವಿತರಿಸಲು ಯೋಜನೆ ರೂಪಿಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷದ ಅನೇಕ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ. ಮುಂದಿನ ವಾರದೊಳಗೆ ಕಾರ್ಯಕ್ರಮ ನಡೆಯಲಿದೆ.
ಕೋವಿಡ್ 2ನೇ ಅಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಸೇರಿ ಅನೇಕರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲದಷ್ಟು ಸಂಕಷ್ಟದಲ್ಲಿದೆ. ಎಲ್ಲರ ಕಣ್ಣೊರೆಸಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಣತೊಟ್ಟು ಕ್ಷೇತ್ರದ ಜನರಿಗೆ ಸ್ಪಂದಿಸಲು ಮುಂದಾಗಿದ್ದಾರೆ.
ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳೆರಡರಲ್ಲೂ 70,000 ಜನರಿಗೆ (ಇವರಲ್ಲಿ ಬಿಪಿಎಲ್ ಕಾರ್ಡ್ ಉಳ್ಳ ಅಥವಾ ಇಲ್ಲದಿರುವವರು ಸೇರಿದ್ದಾರೆ) ಆಹಾರ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಸಕರು. ಗುಡಿಬಂಡೆ ತಾಲೂಕಿನ ಪ್ರತಿ ಕುಟುಂಬದ ಮನೆ ಬಾಗಿಲಿಗೆ ಕೆಲ ದಿನಗಳಲ್ಲೇ ಆಹಾರ ಕಿಟ್ ವಿತರಿಸಲಾಗುವುದು ಎಂದು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಕ್ಷೇತ್ರದ ಜನರ ಮೇಲೆ ಶಾಸಕರ ಪ್ರೀತಿ
ಕೋವಿಡ್ ಮೊದಲ ಅಲೆ ಕಾಣಿಸಿಕೊಂಡಾಗಿನಿಂದಲೂ ಶಾಸಕರು ಕ್ಷೇತ್ರದ ಜನರ ಜತೆಯಲ್ಲೇ ಇದ್ದಾರೆ. ಚಿಕಿತ್ಸೆ, ಆಹಾರ ಇತ್ಯಾದಿಗಳ ಬಗ್ಗೆ ಜನರಿಗೆ ಅಕ್ಕರೆಯಿಂದ ನೆರವಾಗುತ್ತಿದ್ದಾರೆ. ಸ್ವತಃ ತಾವೇ ಸೋಂಕಿಗೆ ಒಳಗಾಗಿದ್ದ ಸಮಯದಲ್ಲೂ ಕ್ಷೇತ್ರದ ಜನರ ಕಷ್ಟಕ್ಕೆ ಮಿಡಿಯುತ್ತಿದ್ದರಲ್ಲದೆ, ಆಪ್ತ ಸಹಾಯಕರು ಹಾಗೂ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದು ಸಕಾಲಕ್ಕೆ ನೆರವಿಗೆ ಧಾವಿಸುತ್ತಿದ್ದರು.
ಮುಖ್ಯವಾಗಿ ಗುಡಿಬಂಡೆ ತಾಲೂಕನ್ನು ಕೊವಿಡ್ ಮುಕ್ತ ತಾಲೂಕಾಗಿ ಮಾಡಲು ಎಸ್.ಎನ್. ಸುಬ್ಬಾರೆಡ್ಡಿ ಸಾಕಷ್ಟು ಕೆಲಸ ಮಾಡಿದ್ದಾರೆ. ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಜತೆಯಲ್ಲಿ ನಿರಂತರ ಸಭೆಗಳನ್ನು ಮಾಡಿದ ಅವರು, ಸೋಂಕು ತಡೆಗೆ ಅನೇಕ ಯೋಜನೆಯನ್ನು ರೂಪಿಸಿದ್ದರು. ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬಿ ಹುರುಪಿನಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತಿದ್ದರು. ಇವೆಲ್ಲದರ ಪ್ರತಿಫಲವಾಗಿ ಕ್ಷೇತ್ರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.
ಅಲ್ಲದೆ, ಸಂಭಾವ್ಯ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಆಡಳಿತಕ್ಕೆ ಸ್ಪಷ್ಟ ಸೂಚನೆಗಳನ್ನು ಶಾಸಕರು ನೀಡಿದ್ದಾರೆ.
ಗುಡಿಬಂಡೆ ತಾಲೂಕಿಗೆ 30 ಸಾವಿರ ಕಿಟ್
ಬಾಗೇಪಲ್ಲಿ-ಗುಡಿಬಂಡೆ ಎಂಬ ಬೇಧವಿಲ್ಲದೆ ಪ್ರತಿ ಮನೆ-ಮನೆಗೂ ಆಹಾರ ಕಿಟ್‌ಗಳನ್ನು ವಿತರಿಸಲು ನಿರ್ಧಾರ ಮಾಡಿದ್ದಾರೆ ಶಾಸಕರು. ಅದರಂತೆ ಶೀಘ್ರದಲ್ಲಿಯೇ ಗುಡಿಬಂಡೆ ಪಟ್ಟಣ ಮತ್ತು ತಾಲೂಕಿನ ಪ್ರತಿ ಮನೆಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು. ತಾಲೂಕಿಗೆ 30,000 ಆಹಾರ ಕಿಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು ಎಸ್.ಎನ್.ಸುಬ್ಬಾರೆಡ್ಡಿ.
ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಸಾವಿರಾರು ಜನ ದಿನಗೂಲಿ ಮಾಡಿ ಜೀವನ ಸಾಗಿಸುವ ಜನ ಇದ್ದಾರೆ. ಆದರೆ ಕೊರೋನಾದಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಹಾರವಿಲ್ಲದೆ ಯಾರು ಪರದಾಡಬಾರದು, ಗುಡಿಬಂಡೆ ಹಾಗೂ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಶೀಘ್ರದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸುತ್ತೇವೆ.
ಎಸ್.ಎನ್.ಸುಬ್ಬಾರೆಡ್ಡಿ / ಶಾಸಕರು
ಕೊರೋನಾ ಸೋಂಕಿನಿಂದ ಶಾಸಕರ ಆರೋಗ್ಯ ಏರುಪೇರು ಆಗಿದ್ದರೂ ಕ್ಷೇತ್ರದ ಜನರ ಆರೋಗ್ಯ ವಿಚಾರಿಸುತ್ತಿದ್ದರು. ಉದ್ಯೋಗ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಅಧಿಕಾರಿಗಳ ಜತೆ ಸಭೆಗಳನ್ನು ಮಾಡಿ, ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ, ಕೋವಿಡ್ ಕೇರ್‌ನಲ್ಲಿರುವ ಸೋಂಕಿತರಿಗೆ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬುತ್ತಿದ್ದರು.
ಕೆ.ಟಿ.ಹರಿಪ್ರಸಾದ್ / ಕಾಂಗ್ರೆಸ್ ಮುಖಂಡ, ಗುಡಿಬಂಡೆ
Gudibande tq Ullodu village no coming food kit y sir MLA sir