by Ra Na Gopala Reddy Bagepalli
ಬಾಗೇಪಲ್ಲಿ: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈ ಅಂಗನವಾಡಿ ಕೇಂದ್ರದ ಕಟ್ಟದ ಯಾವಾಗಾದರೂ ಕುಸಿದು ಬೀಳಬಹುದು. ಆದರೆ, ಆ ಕಟ್ಟಡದಲ್ಲಿಯೇ ಮಕ್ಕಳಿಗೆ ಕಲಿಸಲಾಗುತ್ತಿದೆ.
ಹೌದು. ಎಂ.ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲಿಪಿಗಾರಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರವು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡದ ಮೇಲೆ ಅರಲಿ ಮರ ಬೆಳೆದಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡ ಮಳೆ ಬಂದರೆ ಸೋರುತ್ತದೆ. ಗೋಡೆಗಳಿಗೆ ಬಣ್ಣಬಳಿದು ದಶಕಗಳೇ ಆಗಿದೆ.
ಇಂಥ ಅಂಗನವಾಡಿ ಕೇಂದ್ರದಲ್ಲಿ ಲಾಲನೆ, ಪಾಲನೆ, ಅಭ್ಯಾಸ ಮಾಡುತ್ತಿರುವ 30 ಮಕ್ಕಳು ಮತ್ತು ಅವರ ಪೋಷಕರು ಪ್ರತಿನಿತ್ಯ ಆತಂಕದಿಂದಲೇ ದಿನದೂಡುತ್ತಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತಾದರೂ ಪ್ರಯೋಜವಾಗಿಲ್ಲ ಎಂದು ಜಲಿಪಿಗಾರಪಲ್ಲಿ ನಿವಾಸಿ ನರಸಿಂಹಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ಮಂಜೂರಾಗಿದ್ದು, ಕಟ್ಟಡ ನಿರ್ಮಿಸುವಂತೆ ತಿಳಿಸಲಾಗಿದೆ. ಆದರೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಗುರ್ತಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯಿತಿ ಗಮನಕ್ಕೂ ತಂದು ಮನವಿ ಸಲ್ಲಿಸಲಾಗಿದೆ. ಇದುವರೆಗೂ ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಏನಾದರೂ ಅನಾಹುತಗಳಾದರೆ ನಮ್ಮ ಮಕ್ಕಳ ಗಿತಿ ಏನು? ಎಂದು ಗ್ರಾಮಸ್ಥರು ನೋವು ತೋಡಿಕೊಂಡರು.
ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿರುವ ಸುಮಾರು 30 ಮಕ್ಕಳೂ ಬಡವರ ಮಕ್ಕಳು. ಬಡವರಿಗೆ ಸೌಲಭ್ಯಗಳನ್ನು ಒದಗಿಸಲು ಈ ವ್ಯವಸ್ಥೆ ಕುರುಡು ಮತ್ತು ಕಿವುಡತನ ಪ್ರದರ್ಶಿಸುತ್ತಿದೆ ಆಡಳಿತ ವ್ಯವಸ್ಥೆ. ಗ್ರಾಮದಲ್ಲಿ ನಿವೇಶನಗಳ ಲಭ್ಯತೆ ಇದ್ದು, ಬೇಗ ಗುರುತಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನರಸಿಂಹಪ್ಪ ಒತ್ತಾಯಿಸಿದರು.
ಡಿಎಸ್ಎಸ್ ನ ತಾಲೂಕು ಸಂಚಾಲಕ ಎಂ.ವಿ.ಲಕ್ಷ್ಮೀನರಸಿಂಹಪ್ಪ, ತಾಲೂಕು ಸಂಘಟನಾ ಸಂಚಾಲಕ ಜಲಿಪಿಗಾರಪಲ್ಲಿ ನರಸಿಂಹಪ್ಪ, ಜಯಂತ್, ಹೊಸಹುಡ್ಯ ಗೋಪಿ, ಕೋಟಪ್ಪ, ಎಲ್ ಎನ್.ನರಸಿಂಹಯ್ಯ, ಡಿ.ಕೆ.ರಮೇಶ್, ಹೋಬಳಿ ಪದಾಧಿಕಾರಿಗಳಾದ ಬತ್ತಲವಾರಪಲ್ಲಿ ನರಸಿಂಹಪ್ಪ, ಗೊಲ್ಲಪಲ್ಲಿ ಮಂಜುನಾಥ, ಡಿ.ವಿ.ವೆಂಕಟೇಶ್, ರವೀಂದ್ರ ರಾಜು, ಲಕ್ಷ್ಮಣ್ ನಾಯುಡು ಮತ್ತು ಡಿ.ವಿ.ರಮೇಶ್ ಕುಮಾರ್ ಮತ್ತಿತರರು ಅಂಗನವಾಡಿ ಕೇಂದ್ರದ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.