ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk
by GS Bharath Gudibande
ಗುಡಿಬಂಡೆ: ಮಲೆನಾಡು, ನಾಗರಹೊಳೆ ಮತ್ತು ಬಂಡೀಪುರದಂಥ ಅರಣ್ಯಗಳಲ್ಲಿಯೇ ದಟ್ಟವಾಗಿ ಕಾಣಿಸಿಕೊಳ್ಳುವ ನವಿಲುಗಳು ಈಗ ಬಯಲುಸೀಮೆ ಬೆಡಗನ್ನೂ ಹೆಚ್ಚಿಸಿವೆ. ಅಲ್ಲದೆ, ಬರಪೀಡಿತ ಗುಡಿಬಂಡೆ ತಾಲೂಕಿನಲ್ಲಿ ನಿತ್ಯ ಜನಜೀವನದ ಭಾಗಿ ಎಲ್ಲರನ್ನೂ ಮುದಗೊಳಿಸುತ್ತಿವೆ.
ಸಾಮಾನ್ಯವಾಗಿ ನವಿಲು ಗರಿಬಿಚ್ಚಿ ನರ್ತಿಸುವುದನ್ನು ನೋಡಲು ಎಲ್ಲರೂ ಕಾತರರಾಗಿರುತ್ತಾರೆ. ಆ ಕ್ಷಣ ಕಂಡರೆ ಮನಸ್ಸು ಪುಳಕಿತವಾಗುತ್ತದೆ. ಕೆಲವೊಮ್ಮೆ ಅಂಥ ಸುಂದರ ಸನ್ನಿವೇಶ ಮಿಸ್ ಆದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಆದರಿಲ್ಲಿ ಅಂಥ ಬೇಸರಕ್ಕೆ, ನಿರಾಸೆಗೆ ಅವಕಾಶವೇ ಇಲ್ಲ. ಏಕೆಂದರೆ, ಗುಡಿಬಂಡೆ ಆಸುಪಾಸಿನಲ್ಲಿ ನವಿಲುಗಳ ನರ್ತನದ ನಿತ್ಯೋತ್ಸವವೇ ನಡೆಯುತ್ತಿದೆ.
ಸುಸದ್ಮಪದ್ಮಗಿರಿ, ಅಮಾನಿಭೈರ ಸಾಗರ, ಆದಿನಾರಾಯಣ ಬೆಟ್ಟ ಹಾಗೂ ಸುಂದರ ನಿತ್ಯ ಹಸಿರಿನ ಅರಣ್ಯ ಪ್ರದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಗುಡಿಬಂಡೆ, ಇದೀಗ ನವಿಲುಗಳ ಕಾರಣಕ್ಕೆ ವನ್ಯಜೀವಿ ಪ್ರಾಣಿಪ್ರಿಯರ ಹಾಟ್ ಫೇವರಿಟ್ ತಾಣವಾಗಿ ಬದಲಾಗಿದೆ.
ಗುಡಿಬಂಡೆ ತಾಲೂಕಿನ ವಲಯ ಅರಣ್ಯ ಪ್ರದೇಶದಲ್ಲಿ ಅಪಾರ ನವಿಲುಗಳ ದಂಡೇ ಇದೆ. ರಾಷ್ಟ್ರಪಕ್ಷಿ ವೈಭವವನ್ನು ಕಣ್ತುಂಬಿಕೊಳ್ಳಬೇಕಾದರೆ ಇಲ್ಲಿಗೊಮ್ಮೆ ಬರಬೇಕು. ಅವುಗಳ ಸಂಭ್ರಮವನ್ನು ನೋಡಲು ಎರಡು ಕಂಗಳು ಸಾಲವು. ಕೆಲ ದಿನಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಕಾಡಿನಿಂದ ನಾಡಿಗೆ, ಅದರಲ್ಲೂ ಪ್ರಕೃತಿಯ ಮಡಿಲಲ್ಲಿರುವ ಹಳ್ಳಿಗಳ ಮನೆಯಂಗಳದಲ್ಲೇ ಇವು ಪ್ರತ್ಯಕ್ಷವಾಗುತ್ತಿವೆ. ಹಿಂಡು ಹಿಂಡಾಗಿ ಬಂದು ತಮ್ಮ ಮನೆಗಳ ಮುಂದೆ ಗರಿಬಿಚ್ಚಿ ಕುಣಿಯುವ ನವಿಲುಗಳನ್ನು ಕಂಡು ಜನರೂ ರೋಮಾಂಚನಗೊಂಡಿದ್ದಾರೆ.
ಎಲ್ಲೆಲ್ಲೂ ನವಿಲು, ಜನರಿಗೆ ಪುಳಕ
ಮನೆ ಅಂಗಳದಲ್ಲಿ ಮಾತ್ರವಲ್ಲದೆ, ಹೊಲ-ಗದ್ದೆಗಳ ಬಳಿ ಈಗ ಸಾಮಾನ್ಯವಾಗಿ ನವಿಲುಗಳು ಹೆಚ್ಚಾಗಿ ಕಂಡು ಬರುತ್ತಿವೆ. ತೋಟಗಳಲ್ಲಿ ರೈತರು ಕೆಲಸ ಮಾಡುವಾಗ ನವಿಲುಗಳು ಅವರ ಆಯಾಸವನ್ನು ಕಡಿಮೆ ಮಾಡುತ್ತಿವೆ. ಮರಗಳ ಪೊದೆಗಳಲ್ಲಿ, ಹೊಲಗಳಲ್ಲಿ, ತೋಟಗಳ ನಡುವೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಜನರು ಕೂಡ ರಾಷ್ಟ್ರಪಕ್ಷಿಗಳಿಗೆ ಹಾನಿ ಮಾಡದೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ.
ನವಿಲುಗಳು ಆಹಾರ ಕೊರತೆಯಿಂದ ಕಾಡುಬಿಟ್ಟು ನಾಡಿಗೆ ಲಗ್ಗೆ ಇಟ್ಟಿವೆ. ತಮ್ಮ ಬೆಳೆಗಳನ್ನು ಅವು ತಿಂದರೂ ರೈತರಿಗೆ ಬೇಸರವಿಲ್ಲ. ಬದಲಿಗೆ ಹತ್ತಾರು ಕಷ್ಟಗಳಲ್ಲಿ ಸಿಲುಕಿರುವ ಅವರ ಮನಸ್ಸಿಗೆ ಇವು ಒಳ್ಳೆಯ ರಿಲೀಫ್ ನೀಡುತ್ತಿವೆ. ಮಕ್ಕಳಂತೂ ನವಿಲುಗಳ ನರ್ತನಕ್ಕೆ ಮಾರುಹೋಗುತ್ತಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ಮೇಲೆ ಬರುತ್ತಿರುವ ಪ್ರವಾಸಿಗರಿಗೂ ಮೋಡಿ ಮಾಡುತ್ತಿವೆ.
- ನವಿಲು ನರ್ತನೆಯ ಝಲಕ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ನವಿಲುಗಳೊಂದಿಗೆ ವಾಯುವಿಹಾರ!
ಬೆಳಗ್ಗೆ-ಸಂಜೆ ಸಮಯದಲ್ಲಿ ತಾಲೂಕಿನ ವಾಬಸಂದ್ರ, ಉಕ್ಕುಡಂ, ಎಲ್ಲೋಡು, ಯರ್ರಹಳ್ಳಿ, ಗರುಡಾಚಾರ್ಲಹಳ್ಳಿ, ಗೌರಿಬಿದನೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ನವಿಲುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಕಾರಣಕ್ಕೆ ಆ ಭಾಗಗಳಿಗೆ ಪಟ್ಟಣದ ಜನರು ಹೆಚ್ಚಾಗಿ ಸಂಜೆ ವೇಳೆ ವಾಯುವಿಹಾರಕ್ಕೆ ಹೋಗುತ್ತಾರೆ. ತಮ್ಮ ನಡಿಗೆಯ ನಡುವೆ ಕಣ್ಮುಂದೆ ಹಾದು ಹೋಗುವ, ಒಮ್ಮೊಮ್ಮೆ ಹಾರುವ ನವಿಲುಗಳನ್ನು ಕಂಡು ಸಂತೋಷಗೊಳ್ಳುತ್ತಿದ್ದಾರೆ.
ಅನೇಕ ಬಗೆಯ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವ ಸಂಕುಲಕ್ಕೆ ಗುಡಿಬಂಡೆ ಅರಣ್ಯ ಪ್ರದೇಶವು ಆಶ್ರಯ ತಾಣವಾಗಿದೆ. ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 10 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅವುಗಳನ್ನು ಸಂರಕ್ಷಿಸಲಾಗಿದೆ.
ಹುಲುಗಪ್ಪ / ವಲಯ ಅರಣ್ಯ ಸಂರಕ್ಷಣಾಧಿಕಾರಿ, ಗುಡಿಬಂಡೆ
ನಮ್ಮ ಜಮೀನು ಮತ್ತು ಹಳ್ಳಿಯ ಸುತ್ತಮುತ್ತ ನವಿಲುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ನೋಡಿ ಮಕ್ಕಳು ಆನಂದಿಸುತ್ತಾರೆ. ಅವುಗಳನ್ನು ಕೊಲ್ಲುವುದಾಗಲಿ, ಹಿಂಸೆ ಮಾಡುವುದಾಗಲಿ ಯಾರೂ ಮಾಡುವುದಿಲ್ಲ. ಜನ ಕಾಣಿಸಿದ ಕೂಡಲೇ ಚಂಗನೆ ಹಾರಿ ಮರಗಿಡಗಳ ನಡುವೆ ಮರೆಯಾಗುತ್ತವೆ.
ಜಿ.ಎ.ಅಮರೇಶ್ / ರೈತ, ಗರುಡಾಚಾರ್ಲಹಳ್ಳಿ
ನನ್ನ ಮನಸ್ಸಿಗೆ ನವಿಲುಗಳ ದಂಡು ನೋಡಿ ಖುಷಿ ಎನಿಸಿತು. ನವಿಲುಗಳು ಸಂಜೆ ಸಮಯದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಅವು ಗರಿಬಿಚ್ಚಿದ ಸಂದರ್ಭದಲ್ಲಿ ಗೊಡೆಯ ಹಿಂದೆ ಕಾಣಿಸದಂತೆ ಫೋಟೊ ಮತ್ತು ವೀಡಿಯೋ ಮಾಡಲಾಯಿತು. ನಮ್ಮ ಭಾಗದ ಜನರಿಗೆ ಮತ್ತು ಮಕ್ಕಳಿಗೆ ನವಿಲು ಅಂದರೆ ಹೆಚ್ಚು ಪ್ರೀತಿ. ರೈತರು ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನವಿಲುಗಳು ಹಿಂಡು ಹಿಂಡಾಗಿ ಸಂಚರಿಸುವುದನ್ನು ನೋಡುವುದೇ ಸಂತೋಷ. ಸರಕಾರ ನವಿಲುಗಳ ರಕ್ಷಣೆಗೆ ಪ್ರತ್ಯೇಕವಾಗಿ ಈ ಭಾಗದಲ್ಲಿ ʼನವಿಲುಧಾಮʼ ನಿರ್ಮಿಸಬೇಕು.
ಗೋವಿಂದರೆಡ್ಡಿ / ರೈತ, ಕಡೇಹಳ್ಳಿ