ಈ ಬೇಡಿಕೆಗೆ ರಜತ ಮಹೋತ್ಸವ ಸಂದರ್ಭ ಬಂದರೂ ಗುಡಿಬಂಡೆಯತ್ತ ಗಮನ ಕೊಡದ ರಾಜ್ಯ ಸರಕಾರ
by GS Bharath Gudibande
ಗುಡಿಬಂಡೆ: ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಬೇಕು ಎಂಬ ಗುಡಿಬಂಡೆ ಕೂಗಿಗೆ ಕಾಲು ಶತಮಾನ ಕಳೆದರೂ ಆ ಕನಸು ಇನ್ನೂ ನನಸಾಗಿಲ್ಲ. ಮತ್ತೆ ಆ ಬೇಡಿಕೆಗೆ ಜೀವ ಬಂದಿದೆ.
ಸುಮಾರು 25 ವರ್ಷಕ್ಕೂ ಹೆಚ್ಚು ಕಾಲದ ಈ ಹೋರಾಟವು ಫಲ ಕೊಟ್ಟಿಲ್ಲವಾದರೂ ಅದರ ಕಾವು ಮಾತ್ರ ಹಾಗೆಯೇ ಇದೆ. ಜನಸಂಖ್ಯೆಯ ಕಾರಣವೋ, ಸರಕಾರದ ನಿರ್ಲಕ್ಷ್ಯವೋ, ಸ್ಥಳೀಯ ನಾಯಕತ್ವದ ಕೊರತೆಯೋ ಇಂದಿಗೂ ಗುಡಿಬಂಡೆ ತಾಲೂಕು ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ ಹೊರಹೊಮ್ಮಿಲ್ಲ. ಬದಲಿಗೆ ಬಾಗೇಪಲ್ಲಿ ಕ್ಷೇತ್ರದ ಒಂದು ಭಾಗವಾಗಿ ಉಳಿದುಕೊಂಡುಬಿಟ್ಟಿದೆ.
ಕರ್ನಾಟಕದ ಕಟ್ಟಕಡೆಯ ಹಾಗೂ ಗಡಿ ತಾಲೂಕು ಆಗಿರುವ ಗುಡಿಬಂಡೆ ಅತ್ಯಂತ ಹಿಂದುಳಿದ ಪ್ರದೇಶವೂ ಹೌದು. ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕವಾದರೂ ಬಡತನ ತಾಂಡವಾಡುತ್ತಿದೆ. ಅನೇಕ ಕಡೆ ಕಡುಬಡತನವಿದೆ. ಬೇಸಾಯಕ್ಕೆ ಮತ್ತು ಜನರಿಗೆ ಶುದ್ಧ ನೀರಿಲ್ಲದ ದುಃಸ್ಥಿತಿಯಲ್ಲಿದೆ ಈ ಪ್ರದೇಶ. ಹೀಗೆ ಅನೇಕ ಸಮಸ್ಯೆಗಳ ನಡುವೆಯೂ ತಾಲೂಕಿನ ಜನರು ಪ್ರತ್ಯೇಕ ವಿಧಾನಸಭೆ ಕ್ಷೇತ್ರಕ್ಕಾಗಿ, ವಿಧಾನಸಭೆಯಲ್ಲಿ ತಮ್ಮ ಪಾಲಿಗೆ ದನಿಯೆತ್ತುವ ಪ್ರತ್ಯೇಕ ಶಾಸಕರಿಗಾಗಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ.
25 ವರ್ಷಗಳ ಹೋರಾಟಕ್ಕೆ ಸಿಗುವುದೇ ಫಲ?
1996ರಲ್ಲಿ ತಾಲೂಕಿನ ಕೆಲವು ವ್ಯಕ್ತಿಗಳು ಸೇರಿ ʼಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿʼ ರಚಿಸಿಕೊಂಡು ಅಂದಿನ ಜನತಾದಳ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಅಲ್ಲದೆ, ಕಾನೂನುಬದ್ಧ ಹೋರಾಟ ನಡೆಸಿ ಸರಕಾರದ ಗಮನ ಸೆಳೆದು ಇಂದಿಗೆ (ಜೂನ್ ೯) 25 ವರ್ಷವಾಗಿದೆ. ಇನ್ನಾದರೂ ಗುಡಿಬಂಡೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗುತ್ತಾ? ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ತಾಲೂಕಿನಲ್ಲಿ ನಾಯಕತ್ವದ ಕೊರತೆ
ಎರಡೂವರೆ ದಶಕದಿಂದ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ ಮಾಡಿದರೂ ಅದಕ್ಕೆ ಫಲ ಸಿಗದಿರುವುದಕ್ಕೆ ನಾಯಕತ್ವದ ಕೊರತೆ ಕಾರಣವಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡ ಹೋರಾಟ ನಡೆಸಲು ಸೂಕ್ತ, ಸಮರ್ಥ ನಾಯಕ ಯಾರು? ಎಂದು ಜನರು ಆಸೆ ಕಂಗಳಿಂದ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಪ್ರತ್ಯೇಕ ಕ್ಷೇತ್ರವಾಗದೇ ಗುಡಿಬಂಡೆ ಸಮಗ್ರ ಅಭಿವೃದ್ಧಿ ಆಗುವುದಿಲ್ಲ ಎಂಬ ಭಾವನೆ ಜನರಲ್ಲಿ ಈಗೀಗ ಗಟ್ಟಿಯಾಗಿ ಬೇರೂರುತ್ತಿದೆ.
ವರ್ಷಗಳ ಹಿಂದೆ ಬಾಗೇಪಲ್ಲಿ ತಾಲೂಕು ಗುಡಿಬಂಡೆ ತಾಲೂಕಿಗೇ ಸೇರಿಕೊಂಡಿತ್ತು. ಅಂಥ ಇತಿಹಾಸವಿರುವ ಗುಡಿಬಂಡೆ ತಾಲೂಕು ಇಂದು ಬಾಗೇಪಲ್ಲಿ ಕ್ಷೇತ್ರದ ಭಾಗವಾಗಿ ಅಲ್ಲ ರಂಗಳಲ್ಲೂ ಹಿಂದೆ ಬಿದ್ದಿದೆ. ಉದ್ಯೋಗಕ್ಕಾಗಿ, ಜೀವನಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಆಯೋಗಗಳು ಗುಡಿಬಂಡೆಯನ್ನು ವಿಧಾನಸಭೆ ಕ್ಷೇತ್ರವನ್ನಾಗಿ ರೂಪಿಸುವತ್ತ ಯೋಚನೆ ಮಾಡಬೇಕಿದೆ.
ಗುಡಿಬಂಡೆ ವಿಧಾನಸಭೆ ಕ್ಷೇತ್ರದ ಸ್ವರೂಪ
ಗುಡಿಬಂಡೆ ಕೇಂದ್ರ ಸ್ಥಾನವಾಗಿ ವಿಧಾನಸಭೆ ರಚನೆಗೆ ಭೌಗೋಳಿಕ ನೀಲನಕ್ಷೆ ಸಿದ್ಧವಾಗಿದೆ. ತಾಲೂಕಿನ ಎಲ್ಲ ಹೋಬಳಿಗಳು ಹಾಗೂ ನೆರೆಯ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಂಡಿಕಲ್ಲು, ಗೌರಿಬಿದನೂರು ವಿಧಾನಸಭೆ ಕ್ಷೇತ್ರದ ನಗರಗೆರೆ ಹೋಬಳಿಗಳನ್ನು ಗುಡಿಬಂಡೆ ತಾಲೂಕಿಗೆ ಸೇರಿಸಿದರೆ ಜನಸಂಖ್ಯೆ ಆಧಾರಿತವಾಗಿ ಪ್ರತ್ಯೇಕವಾಗಿ ವಿಧಾನಸಭೆ ಕ್ಷೇತ್ರವನ್ನು ರಚನೆ ಮಾಡಬೇಕು ಎನ್ನುತ್ತಾರೆ ಜಿ.ಎನ್.ರಾಜಶೇಖರ್ ನಾಯ್ಡು. ಇವರು 1996ರಲ್ಲಿ ರಚನೆಯಾಗಿದ್ದ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಮುಖಂಡರು ಹೌದು.
ರಾಜಕೀಯ ಇಚ್ಛಾಶಕ್ತಿ ಹಾಗೂ ಗುಡಿಬಂಡೆಯೂ ಇತರೆ ತಾಲೂಕುಗಳಂತೆ ಸಮಾನಾಂತರವಾಗಗಿ ಅಭಿವೃದ್ಧಿಯಾಗಲಿ ಎಂಬ ಸದುದ್ದೇಶವಿದ್ದರೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರ ಬರುವುದು ಕಷ್ಟವೇನೂ ಅಲ್ಲ ಎನ್ನುತ್ತಾರೆ ಅವರು.
ಯಾರು ಏನಂತಾರೆ?
ಜನಸಂಖ್ಯೆ ಆಧಾರಿತ ಕ್ಷೇತ್ರ ಮಾಡಲು ಇದು ಸೂಕ್ತ ಸಮಯ, ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಂಡಿಕಲ್ಲು, ಗೌರಿಬಿದನೂರು ವಿಧಾನಸಭೆ ಕ್ಷೇತ್ರದ ನಗರಗೆರೆ ಹೋಬಳಿಗಳನ್ನು ಗುಡಿಬಂಡೆ ತಾಲೂಕಿಗೆ ಸೇರಿಸಿದರೆ ಜನಸಂಖ್ಯೆ ಆಧಾರಿತವಾಗಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಸರಕಾರ ಶಿಫಾರಸ್ಸು ಮಾಡುವ ಮೂಲಕ ಅಧಿಕೃತವಾಗಿ ಆದೇಶ ಹೊರಡಿಸಬಹುದು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಗುಡಿಬಂಡೆ ಸ್ವತಂತ್ರ ಕ್ಷೇತ್ರವಾಗಿ ರೂಪುಗೊಳ್ಳಲಿ ಎಂಬುದೇ ನಮ್ಮೆಲ್ಲರ ಆಶಯ.
ಜಿ.ಎನ್.ರಾಜಶೇಖರ್ ನಾಯ್ಡು / 1996ರಲ್ಲಿ ರಚನೆಯಾಗಿದ್ದ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಮುಖಂಡರು
ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಗುಡಿಬಂಡೆ ಆಗಲೇಬೇಕು ಹಾಗೂ ನಮ್ಮ ತಾಲೂಕು ಅಭಿವೃದ್ಧಿಯಾಗಬೇಕು. ರೈತರು ವ್ಯವಸಾಯ ಮಾಡಲು ನೀರಿನ ಸೌಕರ್ಯ, ಶಿಕ್ಷಣ, ಉದ್ಯೋಗಕ್ಕಾಗಿ ಕೈಗಾರಿಗಳು ಸೇರಿ ವಿವಿಧ ರಂಗಗಳಲ್ಲಿ ತಾಲೂಕು ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಅಗತ್ಯವಿದೆ.
ಕೆ.ಎನ್.ನವೀನ್ ಕುಮಾರ್ / ಕಾಂಗ್ರಸ್ ಮುಖಂಡ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು
ಗುಡಿಬಂಡೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾದಾಗ ತಾಲೂಕಿನ ಅಭಿವೃದ್ಧಿ ಸಾಧ್ಯ, ಅಭಿವೃದ್ದಿಗಾಗಿ ಸರಕಾರದಿಂದ ಹೆಚ್ಚು ಹಣ ಬಿಡುಗಡೆ ಆಗುತ್ತದೆ. ಕೆಎಸ್ಆರ್ಟಿಸಿ ಘಟಕ ಸೇರಿ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು.
ಜಿ.ವಿ.ಗಂಗಪ್ಪ / ಜಿಲ್ಲಾ ಸಂಘಟನಾ ಸಂಚಾಲಕರು, ದಲಿತ ಸಂಘರ್ಷ ಸಮಿತಿ, ಗುಡಿಬಂಡೆ
ಜನಸಂಖ್ಯೆ ಆಧಾರಿತ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾದಾಗ ತಾಲ್ಲೂಕು ಕೇಂದ್ರಕ್ಕೆ ವಿವಿಧ ಹಳ್ಳಿಗಳಿಂದ ಜನರು ವಿವಿಧ ಕೆಲಸಗಳಿಗೆ ಬಂದಾಗ ಅಭಿವೃದ್ಧಿಯಾಗುತ್ತದೆ, ತಾಲ್ಲೂಕಿಗೆ ಮಿನಿ ಕ್ರೀಡಾಂಗಣ ಸೇರಿದಂತೆ ಮುಂತಾದವುಗಳ ಅವಶ್ಯಕತೆ ಇದೆ.
ನವೀನ್ / ಸದಸ್ಯರು, ಪ್ರತ್ಯೇಕ ವಿಧಾನಸಭೆ ಕ್ಷೇತ್ರ ಹೋರಾಟ ಸಮಿತಿ, ಗುಡಿಬಂಡೆ