ಬೆಂಗಳೂರು: ‘ನಮ್ಮ ಮನೆ ಹುಡುಗನಿಗೆ ನಾನು ಹೊಡೆದೆ. ತಪ್ಪು ಮಾಡಿದಾಗ ನಾವು ಬಯ್ಯುತ್ತೇವೆ. ಅದು ನಮ್ಮ ನಡುವಿನ ಪ್ರೀತಿಯ ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಆತ ನಮ್ಮ ಹುಡುಗ, ನಮ್ಮ ದೂರದ ಸಂಬಂಧಿ. ಹೆಗಲ ಮೇಲೆ ಕೈ ಹಾಕಿದಾಗ ಬೇರೆಯವರು ಏನು ತಿಳಿಯುತ್ತಾರೆ ಎಂದು ಬೈದೆ. ಜೋರಾಗಿ ಹೊಡೆದದ್ದೂ ನಿಜ. ತಪ್ಪು ಮಾಡಿದಾಗ ಬಯ್ಯುವುದು ಸಹಜ. ಅದು ನಮ್ಮ ಪ್ರೀತಿಯ ಸಂಬಂಧ. ನಾವು, ಅವರು ಎಲ್ಲ ತಪ್ಪು ಮಾಡುತ್ತೇವೆ. ನಿಮ್ಮ ಖುಷಿಗೆ ನೀವು ಅದನ್ನು ತೋರಿಸುತ್ತಿದ್ದೀರಿ. ನೀವು ಅವನನ್ನು ನಾಯಕನನ್ನಾಗಿ ಮಾಡಿ.
ಜಾತಿಗಣತಿ ವೆಚ್ಚ ಪೋಲಾಗಬಾರದು
ಜಾತಿಗಣತಿಗೆ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ವೆಚ್ಚ ಮಾಡಲಾಗಿದೆ. ಹೀಗಾಗಿ ಅದು ವ್ಯರ್ಥವಾಗಬಾರದು ಎಂದು ಹಿಂದುಳಿದ ವರ್ಗಗಳ ನಾಯಕರು ನಮ್ಮನ್ನು ಭೇಟಿ ಮಾಡಿ, ಹೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪಿಲ್ಲ.
ಆ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ನಾನು ಬೇರೆಯವರ ರೀತಿ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ನಾನು, ವಿರೋಧ ಪಕ್ಷದ ನಾಯಕರು ಎಲ್ಲರ ಜತೆ ಚರ್ಚಿಸುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ನಿಲುವು ಏನು?ಎಂಬುದನ್ನು ಮೊದಲು ನೋಡೋಣ. ಈ ಬಗ್ಗೆ ಪ್ರಶ್ನೆ ಕೇಳಿದಾಗ ನಮಗೆ ಗೊತ್ತೇ ಇಲ್ಲ, ವರದಿ ಸಲ್ಲಿಕೆಯಾಗಿಲ್ಲ ಎಂದಿದ್ದಾರೆ.
ಕೆಆರೆಸ್ ಬಿರುಕು ಬಗ್ಗೆ ನನ್ನ ಬಳಿ ಯಾರೂ ಪ್ರಸ್ತಾಪಿಸಿರಲಿಲ್ಲ
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಮಂತ್ರಿಯಾಗಿದ್ದೆ. ನೀರಾವರಿ ಸಚಿವನಾಗಿಯೂ ಕೆಲಸ ಮಾಡಿದ್ದೆ. ಆಗ ಯಾರೂ ಕೂಡ ಅಕ್ರಮ ಗಣಿಗಾರಿಕೆ ಬಗ್ಗೆ ನನ್ನ ಬಳಿ ಯಾವುದೇ ಪ್ರಸ್ತಾಪ ಮಾಡಿಲ್ಲ. 10-15 ಕಿ.ಮೀ ದೂರದಲ್ಲಿ ಜಲ್ಲಿಕಲ್ಲಿ ಉತ್ಪಾದಿಸುವುದರಿಂದ ಹೆಚ್ಚು ವ್ಯತ್ಯಾಸವೇನೂ ಆಗುವುದಿಲ್ಲ.
ಗಣಿ ಸಚಿವಾಲಯ ಇದೆ, ಇದಕ್ಕೆ ಕೆಲಸದ ವ್ಯಾಪ್ತಿ ಇದೆ. ಭೂ ವಿಜ್ಞಾನ ಇಲಾಖೆ ಇದೆ. ನೂರಾರು ಇಂಜಿನಿಯರ್ ಗಳೂ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನಾವು ಅನಗತ್ಯವಾಗಿ ಜನರಲ್ಲಿ ಆತಂಕ ಮೂಡಿಸೋದು ಬೇಡ. ಇಂತಹ ಚಿಲ್ಲರೆ ಪ್ರಚಾರ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಇದು ಸೂಕ್ಷ್ಮ ವಿಚಾರ. ಕೆಆರೆಎಸ್ ದೇಶದ ಆಸ್ತಿ. ಅದರ ಬಗ್ಗೆ ಗಾಬರಿ ಹುಟ್ಟಿಸಬಾರದು.
ಗಣಿಗಾರಿಕೆಯಿಂದ ಅಪಾಯವಿದೆ ಎಂಬ ವಿಚಾರವಾಗಿ ನಮ್ಮ ಬಳಿ ಯಾರೂ ಚರ್ಚೆ ಮಾಡಿಲ್ಲ.’