ವಂಚನೆಯ ಪ್ರಕರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್
ಮೈಸೂರು: 25 ಕೋಟಿ ರೂ. ವಂಚನೆ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಯಾರೇ ಇದ್ದರೂ ಅವರನ್ನು ಬಿಡುವುದಿಲ್ಲ ಎಂದು ಖ್ಯಾತ ನಟ ದರ್ಶನ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 25 ಕೋಟಿ ರೂ. ವಂಚನೆ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಈವರೆಗೂ ಗೊತ್ತಾಗಿಲ್ಲ. ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ. ಇದರ ಹಿಂದೆ ಯಾರೇ ಇದ್ದರೂ ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು ದರ್ಶನ್.
ಸುದ್ದಿಗೋಷ್ಠಿಯಲ್ಲಿ ವಂಚನೆ ಪ್ರಕರಣದ ಕಥೆಯನ್ನು ದರ್ಶನ್ ಎಳೆಎಳೆಯಾಗಿ ಬಿಚ್ಚಿಟ್ಟರು. ಅವರು ಹೇಳಿದ್ದು ಇಷ್ಟು;
ನಾನು ಸುದ್ದಿಗೋಷ್ಠಿ ನಡೆಸಬಾರದು ಎಂದಿದ್ದೆ. ಆದರೆ ಮಾಧ್ಯಮಗಳಲ್ಲಿ ತಪ್ಪು ಸಂದೇಶ ಪ್ರಕಟವಾಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ.
ಕಳೆದ 2 ತಿಂಗಳಿಂದ ಲಾಕ್ಡೌನ್ ವೇಳೆ ನಾನು ಮೈಸೂರಿನಲ್ಲಿದ್ದೇನೆ. ಜೂ.6ರಂದು ಚಿತ್ರ ನಿರ್ಮಾಪಕ ಉಮಾಪತಿ ಕರೆ ಮಾಡಿ 25 ಕೋಟಿ ರೂ.ಗೆ ನೀವು ಶ್ಯೂರಿಟಿ ಹಾಕಿದ್ದೀರಾ? ಎಂದು ಕೇಳಿದರು. ನಾನು ಇಲ್ಲ ಎಂದು ಹೇಳಿದೆ.
ನಂತರ ಜೂ.16ರಂದು ಉಮಾಪತಿ ಅವರು ಅರುಣಾ ಕುಮಾರಿ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆ ಮಹಿಳೆ ನನ್ನ ಸ್ನೇಹಿತ ಹರ್ಷ ಅವರ ಹೆಸರನ್ನು ಹೇಳಿ ಸಾಲ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ನನ್ನ ಎಲ್ಲ ಸ್ನೇಹಿತರು ಮತ್ತು ಅವರ ಪತ್ನಿಯರ ಬಗ್ಗೆ ನಿಖರವಾಗಿ ಹೇಳಿದ್ದರಿಂದ ನಾನು ಆ ಮಹಿಳೆಯನ್ನು ನಂಬಿದೆ.
ಅರುಣಾ ಕುಮಾರಿ ಅವರು ತೋರಿಸಿದ ದಾಖಲೆಯಲ್ಲಿ ನನ್ನ ಹೆಸರು, ಪೊನ್ನಂಪೇಟೆ ವಿಳಾಸ ಮತ್ತು ಆಧಾರ್ ಕಾರ್ಡ್ ನಂಬರ್ ಇತ್ತು. ಬಳಿಕ ಅವರು ಜಾಗ ನೋಡಬೇಕು ಎಂದು ಹೇಳಿದರು. ಹೀಗಾಗಿ ಆ ಮಹಿಳೆ ಜೊತೆ ನಂದೀಶ್, ಮಧುಕೇಶ್ ಎಂಬುವವರು ಬಂದು ತೋಟ ನೋಡಿದರು.
ತೋಟ ನೋಡುವ ಸಂದರ್ಭದಲ್ಲಿ ಹರ್ಷ ಅವರೂ ಅಲ್ಲಿದ್ದರು. ಹರ್ಷ ಅವರನ್ನು ನೋಡಿದ ಕೂಡಲೇ ಅರುಣಾ ಕುಮಾರಿ ಶಾಕ್ ಆದರು. ನಾನು ಯಾವುದೇ ಸಾಲ ತೆಗೆದುಕೊಂಡಿಲ್ಲ ಎಂದು ಹೇಳಿ ಆಕೆಯ ಬ್ಯಾಂಕ್ ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಗ ಅವರು ಮನೆಯಲ್ಲಿದೆ ಎಂದು ಹೇಳಿದರು.
ಆಗ ನಮಗೆ ಇದು ಈಕೆ ಬ್ಯಾಂಕ್ ಉದ್ಯೋಗಿ ಅಲ್ಲ ಎನ್ನುವುದು ದೃಢವಾಯಿತು. ಕಾರಣ, ಲಾಕ್ಡೌನ್ ಸಮಯದಲ್ಲಿ ಬ್ಯಾಂಕ್ ಕಾರ್ಡ್ ಇಲ್ಲದೆ ಇಲ್ಲಿವರೆಗೆ ಬರಲು ಹೇಗೆ ಸಾಧ್ಯ ಎಂಬ ಅನುಮಾನ ನಮಲ್ಲಿ ಮೂಡಿತು.
ಈ ಎಲ್ಲ ವಿಚಾರ ಗೊತ್ತಾದಾಗ ಈ ಅರುಣಾ ಕುಮಾರಿ ಯಾರು? ಎನ್ನುವುದನ್ನು ನಾವು ಪತ್ತೆ ಮಾಡಿದೆವು. ಅರಣಾ ಕುಮಾರಿ, ಕುಮಾರ್ ಎಂಬುವರ ಪತ್ನಿ ಎನ್ನುವುದು ತಿಳಿಯಿತು. ಈಕೆ ಪತಿಯನ್ನು ಸಂಪರ್ಕಿಸಿದಾಗ ಅವರು ನಾನು ಆಕೆ ಕಳೆದ 4-5 ವರ್ಷದಿಂದ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.
ನಾವು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಬರುವಂತೆ ತಿಳಿಸಿದಾಗ ಜೂ. 16ಕ್ಕೆ ಆಕೆ ಮನೆಗೆ ಬಂದಾಗ ನಾವು ಯಾರು ಲೋನ್ ತೆಗೆದುಕೊಂಡಿಲ್ಲ. ಎಲ್ಲವೂ ನಕಲಿ ಎನ್ನುವುದು ಗೊತ್ತಾಗಿದೆ ಎಂದೆವು. ಆಗ ಆಕೆ, ನಾನು ಉಮಾಪತಿ ಕಡೆಯಿಂದ ಬಂದಿದ್ದೇನೆ. ಸತ್ಯ ಹೇಳಿದರೆ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು ಎಂದರು.
ಉಮಾಪತಿ ಅವರನ್ನು ಸಂಪರ್ಕಿಸಿದಾಗ ನನಗೆ ಆಕೆ ಫೇಸ್ಬುಕ್ ಪರಿಚಯ ಎಂದು ಹೇಳಿದ್ದರು. ಎಲ್ಲವೂ ಗೊಂದಲ ಇರುವುದರಿಂದ ನಾನು ಉಮಾಪತಿ ಅವರಿಗೇ ಪೊಲೀಸರಿಗೆ ದೂರು ನೀಡಲು ಹೇಳಿದ್ದೇನೆ.
ಈ ಕುರಿತು ಉಮಾಪತಿ ಅವರು ನನಗೆ ಎರಡು ದಿನಗಳ ಕಾಲ ಕಾಲಾವಕಾಶ ನೀಡಿ. ನಾನು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಹಾಗಾಗಿ ಇನ್ನೆರಡು ದಿನಗಳ ನಂತರ ಯಾರು ತಪ್ಪಿತಸ್ಥರು, ಅರುಣಾ ಕುಮಾರಿ ಹಿಂದೆ ಯಾರಿದ್ದಾರೆ? ಆಕೆ ಏಕೆ ಹೀಗೆ ಮಾಡಿದರು? ಎಂಬೆಲ್ಲ ವಿಷಯ ಹೊರ ಬರಲಿದೆ. ಆ ನಂತರ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ.