by GS Bharath Gudibande
ಗುಡಿಬಂಡೆ: ಅಪ್ರಾಪ್ತ ಬಾಲಕಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ, ಚಿತ್ರಗಳನ್ನು ಕಳಿಸಿದ ಆರೋಪದ ಕಾರಣಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಸ್ನೇಹಿತನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕಮ್ಮಗುಟ್ಟಹಳ್ಳಿಯ ಗ್ರಾ.ಪಂ ಸದಸ್ಯ ಹಾಗೂ ರಾಮಪಟ್ನ ಗ್ರಾಮದ ನಿವಾಸಿ ಶ್ರೀನಿವಾಸ ಹಾಗೂ ಈತನ ಗೆಳೆಯನಾದ ರಾಮಪಟ್ನದ ನಿವಾಸಿ ಕೇಶವ ಎಂಬಿಬ್ಬರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಇತ್ತ ಕೇಸ್ ಆಗುತ್ತಿದ್ದಂತೆ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಇವರಿಬ್ಬರೂ ಬಾಲಕಿಯ ಮೊಬೈಲ್‌ಗೆ ಅಶ್ಲೀಲ ಸಂದೇಶ, ಫೋಟೋ ಮತ್ತು ವಾಯ್ಸ್ ಮೆಸೇಜ್ʼಗಳನ್ನು ಕಳುಹಿಸಿದ್ದರು ಎಂದು ಆರೋಪ ಮಾಡಲಾಗಿದೆ.
ಬಾಲಕಿಯ ತಾಯಿಯು ಮಗಳಿಗೆ ಆನ್‌ಲೈನ್ ತರಗತಿಗೆ ಉಪಯೋಗಿಸಲು ಮೊಬೈಲ್ ನೀಡಿದ್ದರು. ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಬಾಲಕಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಈ ಮೊಬೈಲ್‌ಗೆ ಗ್ರಾಪಂ ಸದಸ್ಯ ಶ್ರೀನಿವಾಸ್ ಅಶ್ಲೀಲ ಸಂದೇಶ, ಫೋಟೋಗಳು ಹಾಗು ವಾಯ್ಸ್ ಮೆಸೇಜುಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ಆರೋಪಿ ಶ್ರೀನಿವಾಸ್
ಬಾಲಕಿ ಮೊಬೈಲ್ ಸಂಖ್ಯೆ ಆರೋಪಿಗಳಿಗೆ ಸಿಕ್ಕಿದ್ದು ಹೇಗೆ?
ಗ್ರಾಪಂ ಸದಸ್ಯ ಶ್ರೀನಿವಾಸ್ ಕೆನರಾಬ್ಯಾಂಕ್‌ನ ʼಬ್ಯಾಂಕ್ ಮಿತ್ರʼ ಕೆಲಸ ಸಹ ಮಾಡುತ್ತಿದ್ದ. ಅಪ್ರಾಪ್ತ ಬಾಲಕಿಯ ಖಾತೆಗೆ ಪ್ರೋತ್ಸಾಹ ಧನ ವರ್ಗಾವಣೆ ಆಗಿತ್ತು. ಆ ಹಣವನ್ನು ಡ್ರಾ ಮಾಡಲು ಬಾಲಕಿಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ.
ಇದಾದ ಮೇಲೆ ಅಪ್ರಾಪ್ತೆಗೆ ಕರೆ ಮಾಡಿ ಶ್ರೀನಿವಾಸ ಅಶ್ಲೀಲವಾಗಿ ಮಾತನಾಡುತ್ತಿದ್ದ. ಮದ್ಯಪಾನ ಮಾಡಿ ಹಲ್ಲೆ ಮಾಡಲು ಪ್ರಯತ್ನಪಟ್ಟಿದ್ದ. ಇದರಿಂದ ಆ ಬಾಲಕಿಯ ಆನ್‌ಲೈನ್ ತರಗತಿಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಈತನಿಗೆ ಸಹಕಾರಿಯಾಗಿ ರಾಮಪಟ್ಟಣ ಗ್ರಾಮದ ಕೇಶವ ಎಂಬಾತ ಜುಲೈ 8ರಂದು ಸಂಜೆ 7ರಿಂದ 9 ಗಂಟೆ ಸಮಯದಲ್ಲಿ ಬಾಲಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ ಆರೋಪಿಸಲಾಗಿದೆ.
ಗ್ರಾಪಂ ಸದಸ್ಯ ಶ್ರೀನಿವಾಸ್ ಜುಲೈ 8ರ ರಾತ್ರಿ 10 ಗಂಟೆಗೆ ಪದೇಪದೆ ಬಾಲಕಿಯ ಮೊಬೈಲ್‌ಗೆ ಕರೆ ಮಾಡಿದ್ದಲ್ಲದೆ, ಆ ಮೊಬೈಲ್ ವಾಟ್ಸಾಪ್‌ಗೆ ಅಶ್ಲೀಲ ಮಾತುಗಳ ವಾಯ್ಸ್ ಮೆಸೇಜ್ ಹಾಗೂ ಫೊಟೋಗಳನ್ನು ಸೆಂಡ್ ಮಾಡಿರುತ್ತಾನೆ. ಜತೆಗೆ, ಜುಲೈ 9ರಂದು ಬೆಳಗ್ಗೆ 7 ಗಂಟೆ ಹೊತ್ತಿನಲ್ಲಿಯೂ ಅಶ್ಲೀಲವಾಗಿ ಮೆಸೇಜ್ ಮಾಡಿರುತ್ತಾನೆ ಎಂದು ಗೊತ್ತಾಗಿದೆ.
ಇದೀಗ ಪ್ರಕರಣ ಭಾನುವಾರದಂದು ಗುಡಿಬಂಡೆ ಠಾಣೆ ಮೆಟ್ಟಿಲೇರಿದ್ದು, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮತ್ತು ಆತನ ಸ್ನೇಹಿತ ಕೇಶವ ವಿರುದ್ಧ ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುವ ಮುನ್ನವೇ ಆರೋಪಿಗಳ ಪರಾರಿಯಾಗಿದ್ದು, ಅವರ ಬಂಧನಕ್ಕೆ ಗುಡಿಬಂಡೆ ಪೊಲೀಸರು ಬಲೆ ಬೀಸಿದ್ದಾರೆ.