ಜನೌಷಧಿ ಕೇಂದ್ರವೆಂಬ ಜನಸಾಮಾನ್ಯರ ಸಂಜೀವಿನಿ
ಆರೋಗ್ಯವೇ ಭಾಗ್ಯ ಎನ್ನುವುದು ಅನಾದಿ ಕಾಲದಿಂದಲೂ ಬಂದಿರುವ ನಾಣ್ಣುಡಿಯಾದರೂ ಆರೋಗ್ಯ ಎಂಬುದು ಎಲ್ಲರ ಬದುಕಿನ ಭಾಗವೇ ಆಗಿದೆ. ಇಂದು ಆರೋಗ್ಯಕ್ಕಾಗಿ ನಾವೆಲ್ಲರೂ ಎಷ್ಟೇ ಖರ್ಚಾದರೂ ಸರಿಯೇ ಆರೋಗ್ಯ ಕಾಪಾಡಿಕೊಳ್ಳಲೇಬೇಕು ಎನ್ನುವ ಮನಸ್ಥಿತಿಗೆ ಬಂದು ತಲುಪಿದ್ದೇವೆ. ಉಳ್ಳವರು ಹಣ ವ್ಯಯ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ, ಅದರೆ ಅಂದಿನ ಬದುಕಿಗಾಗಿ ಅಂದೇ ದುಡಿದು ಬದುಕುವ ಸಾಮಾನ್ಯ ಜನರು ಹೇಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ? ಯಾವುದಾದರೂ ಸೋಂಕಿನಿಂದ, ಜೀವನ ಪರ್ಯಂತ ಕಾಯಿಲೆಯಿಂದ ನರಳಬೇಕಾಗುವ ಸಂದರ್ಭ ಬಂದು ಪ್ರತಿ ತಿಂಗಳೂ ಸಾಕಷ್ಟು ಹಣವನ್ನು ಔಷಧಕ್ಕಾಗಿ ಖರ್ಚು ಮಾಡಬೇಕಾದರೆ ಅವರೆಲ್ಲಾ ಏನು ಮಾಡಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನ 30% ಜನರಿಗೆ ಅವಶ್ಯಕ ಔಷಧಗಳು ಕೈಗೆಟುಕುತ್ತಿಲ್ಲ. ಇದರ ಪ್ರಮಾಣ ಆಫ್ರಿಕಾ ಮತ್ತು ಏಷ್ಯಾದಲ್ಲಿ 50%. ಭಾರತದಲ್ಲಿ ಒಟ್ಟು ಉತ್ಪನ್ನದ ಶೇ.1.2ರಷ್ಟನ್ನು ಭಾರತೀಯರು ತಮ್ಮ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ದೊರಕಬೇಕೆನ್ನುವ ಉದ್ದೇಶದಿಂದ 2016ರಲ್ಲಿ ಆರಂಭವಾದ ಪ್ರಧಾನಮಂತ್ರಿ ಜನರಿಕ್ ಔಷಧ ಕೇಂದ್ರಗಳು ಇಂದು ಭಾರತಾದ್ಯಂತ ಕ್ರಾಂತಿಯನ್ನೇ ಮಾಡಿವೆ. ನೀವು ಊರಿನಿಂದ ಊರಿಗೆ ಸಂಚರಿಸುವಾಗ ನಗರ, ಪಟ್ಟಣ, ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಜನರಿಕ್ ಔಷಧ ಕೇಂದ್ರ ಎಂಬ ಬೋರ್ಡ್ʼಗಳನ್ನು ನೋಡಬಹುದು, ಈ ಔಷಧ ಮಳಿಗೆಗಳ ಮೂಲಕ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10ರಿಂದ ಶೇ.90 ರವರೆಗೆ ರಿಯಾಯ್ತಿ ದರದಲ್ಲಿ ಸಿಗುವಂತೆ ಮಾಡಿದೆ. ಜನಸಾಮಾನ್ಯರು ತಮ್ಮ ಜೀವಮಾನದ ದುಡಿಮೆಯ ಆದಾಯದಲ್ಲಿ ಹೆಚ್ಚಿನ ಪ್ರಮಾಣವನ್ನು ಆರೋಗ್ಯಕ್ಕಾಗಿ ವಿನಿಯೋಗ ಮಾಡುವುದನ್ನು ತಪ್ಪಿಸಿದ ಕೀರ್ತಿ ಈ ಜನೌಷಧಿ ಕೇಂದ್ರಗಳಿಗೆ ಸಲ್ಲುತ್ತದೆ.
ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು 2008ರಲ್ಲೇ ಆರಂಭವಾಗಿದ್ದರೂ ಅದಕ್ಕೊಂದು ಸ್ಪಷ್ಟ ರೂಪ ಸಿಕ್ಕಿದ್ದು 2015-16ರಲ್ಲಿ. ಪ್ರಧಾನಿ ಮೋದಿವರು ಮತ್ತು ಕನ್ನಡಿಗರು ಆದ ಅಂದಿನ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ದಿವಂಗತ ಅನಂತಕುಮಾರ್ ಅವರು ಜನರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಜೀವನಾವಶ್ಯಕ ಔಷಧಗಳು ದೊರೆಯಬೇಕು ಎಂಬ ಸದುದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಿದ್ದರು.
ಕೆಲ ವರ್ಷಗಳ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಒಂದೆರಡರ ಸಂಖ್ಯೆಯಲ್ಲಿ ಇದ್ದ ಜನೌಷಧ ಕೇಂದ್ರಗಳು ಇಂದು ತಾಲೂಕು, ಹೋಬಳಿ ಮಟ್ಟಕ್ಕೂ ವಿಸ್ತಾರಗೊಂಡಿವೆ. ಪ್ರಸ್ತುತ ದೇಶದಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು, ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಜನೌಷಧ ಕೇಂದ್ರಗಳಿವೆ. ಇವತ್ತು ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಖರೀದಿಸುತ್ತಿದ್ದಾರೆ.
ಬಿಪಿ, ಶುಗರ್, ಆಸ್ತಮಾ ಮುಂತಾದ ಕಾಯಿಲೆ ಇರುವವರು ಮುಕ್ತ ಮಾರುಕಟ್ಟೆಯಲ್ಲಿ ಔಷಧಿ ತೆಗೆದುಕೊಳ್ಳಬೇಕಾದರೆ ಸುಮಾರು ₹2,000 ರಿಂದ ₹2,500 ಕೊಡಬೇಕಾಗುತ್ತದೆ. ಆದರೆ ಜನೌಷಧಿಗೆ ಕೇವಲ ₹400 ರಿಂದ ₹500 ಸಾಕು. ಉದಾಹರಣೆ ಸಮೇತ ಹೇಳುವುದಾದರೆ, “ ಡೋಲೊ” ಇದು ಜ್ವರಕ್ಕೆ ಉಪಯೋಗಿಸುವ ಔಷಧದ ಬ್ರಾಂಡೆಡ್ ಹೆಸರು. “ಪ್ಯಾರಸೆಟಮಾಲ್” ಇದು ಡೋಲೊದಲ್ಲಿರುವ “ಜನರಿಕ್” ಔಷಧಿಯ ಹೆಸರು. ಜನರಿಕ್ ಔಷಧಿಯಾದ “ಪ್ಯಾರಾಸೆಟಮಾಲ್” ಅನ್ನು ಅನೇಕ ಕಂಪನಿಗಳು ಅನೇಕ ಬ್ರಾಂಡೆಡ್ ಹೆಸರಿನಲ್ಲಿಯೂ ತಯಾರಿಸುತ್ತಿವೆ. ಜನರಿಕ್ ಪ್ಯಾರಸೆಟಮಾಲ್ 15 ಗುಳಿಗೆಗೆ ರೂ. 5 ಇದ್ದರೆ ಡೋಲೊ 15 ಗುಳಿಗೆಗಳಿಗೆ ರೂ. 30 ಇರುತ್ತದೆ. ಅಂದರೆ ಬೆಲೆಯು ಬ್ರಾಂಡೆಡ್ ಔಷಧಿಗೆ ಕೊನೆಪಕ್ಷ 6 ಪಟ್ಟು ಜಾಸ್ತಿ!! ಎರಡರ ಪರಿಣಾಮವೂ ಒಂದೇ. ಇದರ ಬಗ್ಗೆ ಸಾಮಾನ್ಯರಿಗೆ ಗೊತ್ತಿರುವುದಿಲ್ಲ.
ಭಾರತ ಸರಕಾರವು ಜನರಿಕ್ ಔಷಧಿಗಳು ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿದ ವ್ಯವಸ್ಥೆಯೇ ಜನೌಷಧಿ ಕೇಂದ್ರಗಳು. ಇಲ್ಲಿ ದೊರೆಯುವ ಔಷಧಿಗಳು ಬ್ರಾಂಡೆಡ್ ಔಷಧಿಗಳಷ್ಟೇ ಪರಿಣಾಮಕಾರಿ. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕೇಂದ್ರ ಸರಕಾರದ ಔಷಧ ಇಲಾಖೆಯ ಸುಪರ್ಧಿಯಲ್ಲಿ ನಿಯಂತ್ರಣದಲ್ಲಿವೆ. ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಆಫ್ ಇಂಡಿಯಾ ಇದು ಜನೌಷಧಿಗಳ, ತಯಾರಿಕೆ, ಸಾಗಣೆ ಮತ್ತು ಗುಣಮಟ್ಟದ ಹೊಣೆ ಹೊತ್ತಿದೆ.
ಒಂದು ಔಷಧ ಕಂಪನಿ ‘ಹೊಸ ಔಷಧ’ ಕಂಡುಹಿಡಿಯಿತೆಂದರೆ ಇಂತಿಷ್ಟು ವರ್ಷಗಳ ಕಾಲ ಅದರ ಸ್ವಾಮ್ಯತೆ ಅಥವಾ ಹಕ್ಕು ಹೊಂದಿರುತ್ತದೆ. ಅಂದರೆ ಈ ಪೇಟಂಟ್ ಅವಧಿಯಲ್ಲಿ ಬೇರೆ ಯಾವ ಔಷಧ ಕಂಪನಿಗಳೂ ಸಹ ಈ ಹೊಸ ಔಷಧವನ್ನು ಬಳಸಿ ಹೊಸ ಕಂಪನಿ ಹೆಸರಿನೊಂದಿಗೆ ಮಾರುವಂತಿಲ್ಲ. ಪೇಟಂಟ್ ಅವಧಿ ಮುಗಿದ ನಂತರ ಯಾವ ಕಂಪನಿ ಬೇಕಾದರೂ ಈ ಔಷಧವನ್ನು ಸಿದ್ಧಪಡಿಸಿ ಹೊಸ ಬ್ರ್ಯಾಂಡ್ ಹೆಸರಿನಿಂದ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಬಹುದು. ಇದಕ್ಕೆ ಮೂಲ ಕಂಪನಿ/ಪೇಟಂಟ್ ಪಡೆದಿದ್ದ ಕಂಪನಿಯ ಪರವಾನಗಿ ಬೇಕಾಗಿರುವುದಿಲ್ಲ. ರಾಸಾಯನಿಕ ಹೆಸರು, ಜನರಿಕ್ ಹೆಸರು (ಮೂಲ ಹೆಸರು) ಮತ್ತು ಬ್ರ್ಯಾಂಡೆಡ್ ಹೆಸರು/ಟ್ರೇಡ್ ನೇಮ್/ಪ್ರೊಪ್ರೈಟರಿ ಹೆಸರುಗಳಿಂದ ಒಂದು ಔಷಧವನ್ನು ಗುರುತಿಸಬಹುದು. ಇವುಗಳಲ್ಲಿ ಔಷಧದ ರಾಸಾಯನಿಕ ಹೆಸರು ಮತ್ತು ಜನರಿಕ್ ಹೆಸರುಗಳು ಎಂದಿಗೂ ಬದಲಾಗುವುದಿಲ್ಲ. ರಾಸಾಯನಿಕ ಹೆಸರುಗಳನ್ನು ಓದುವುದು ಮತ್ತು ನೆನಪಿಟ್ಟುಕೊಳ್ಳುವುದು ಸಾಮಾನ್ಯವಾಗಿ ಕಷ್ಟ ಸಾದ್ಯ. ಆದರೆ, ಜನರಿಕ್ ಹೆಸರುಗಳನ್ನು ಸುಲಭವಾಗಿ ಓದಬಹುದು ಮತ್ತು ನೆನಪಿಟ್ಟುಕೊಳ್ಳಬಹುದು.
ಬ್ರ್ಯಾಂಡೆಡ್ ಔಷಧಗಳಿಗೆ ಪರ್ಯಾಯವಾಗಿ ಬಳಸುವ ಉದ್ದೇಶದಿಂದ ಸ್ವಾಮ್ಯತೆ ಅಥವಾ ಪೇಟಂಟ್ ಅವಧಿಯ ನಂತರ ಮಾರುಕಟ್ಟೆಯಲ್ಲಿ ಔಷಧದ ಮೂಲ ಹೆಸರಿನಲ್ಲಿ ಲಭ್ಯವಿರುವ ಔಷಧಗಳಿಗೆ “ಜನರಿಕ್ ಔಷಧ” ಗಳು ಎನ್ನುತ್ತಾರೆ.
ಮಾರುಕಟ್ಟೆಗೆ ಹೊಸ ಔಷಧಿ ಲಗ್ಗೆ ಇಡುವ ಮುನ್ನ ಅಮೆರಿಕ ಸರಕಾರದ ಅಧೀನದ ಸಂಸ್ಥೆಯಾದ ಆಹಾರ ಮತ್ತು ಔಷಧ ಪರವಾನಗಿ ಪ್ರಾಧಿಕಾರದ (ಎಫ್‌ಡಿಎ) ಕಠಿಣ ಕಣ್ಗಾವಲಿನಲ್ಲಿ ಪುನರಾವಲೋಕನಗೊಂಡಿರುತ್ತದೆ. ಕಂಪನಿಗಳು ಹೊಸ ಔಷಧಗಳನ್ನು ಕಂಡು ಹಿಡಿಯುವಲ್ಲಿ ಸಾಕಷ್ಟು ಸಮಯ (ಸುಮಾರು 6-12 ವರ್ಷಗಳು) ಮತ್ತು ಸುಮಾರು 200 ಬಿಲಿಯನ್ ಹಣವನ್ನು ವ್ಯಯಿಸಿರುತ್ತವೆ. ಎಫ್‌ಡಿಎಯು ಈ ಕಂಪಗಳಿಗೆ ತಾವು ತೊಡಗಿಸಿದ ಹಣವನ್ನು ಹಿಂಪಡೆಯಲು ನೆರವಾಗುವಂತೆ ಪೇಟಂಟ್ ಅವಧಿಯನ್ನು ನೀಡಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ನೆರವಾಗುತ್ತದೆ. ಹಾಗಾಗಿ ಬ್ರ್ಯಾಂಡೆಡ್ ಔಷಧಗಳು ತುಸು ತುಟ್ಟಿ. ಆದರೆ ಜನರಿಕ್ ಔಷಧಗಳು ಹಾಗಲ್ಲ, ಪೇಟಂಟ್ ಅವಧಿಯ ನಂತರವೇ ಜನರಿಕ್ ಔಷಧಿಗಳನ್ನು ಸಿದ್ದಪಡಿಸಲು ಎಫ್‌ಡಿಎಯು ಪರವಾನಗಿ ನೀಡುವುದರಿಂದ, ಮತ್ತೊಮ್ಮೆ ಪ್ರಾಣಿಗಳ ಮತ್ತು ಮಾನವನ ಮೇಲೆ ಪ್ರಯೋಗ ಮಾಡಿ ಇದರ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಪರೀಕ್ಷಿಸುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಜನರಿಕ್ ಔಷಧಿಗಳು ಅಗ್ಗ. ಬಹುಮುಖ್ಯವಾಗಿ ಯಾವುದೇ ಕಂಪನಿ ತಯಾರಿಸಿದರೂ ಔಷಧದ ಮೂಲ ಹೆಸರಿನಲ್ಲೆ (ಜನರಿಕ್ ಹೆಸರಿನಲ್ಲಿ) ಮಾರಾಟ ಮಾಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಕಂಪನಿ ದರ ಪೈಪೋಟಿಗೆ ಇಳಿದುಬಿಡುತ್ತದೆ. ಈ ಕಾರಣಗಳಿಂದ ಜನರಿಕ್ ಔಷಧಗಳು ಬ್ರ್ಯಾಂಡೆಡ್ ಔಷಧಗಳಿಗಿಂತ ಕೆಲವೊಮ್ಮೆ ಶೇ.70-85ರಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ.
ಯಾವುದೇ ಕಂಪನಿ ಹೊಸದಾಗಿ ಜನರಿಕ್ ಔಷಧಗಳನ್ನು ಸಿದ್ದಪಡಿಸಿ ಮಾರುಕಟ್ಟೆಗೆ ತರುವ ಮುನ್ನ ಹೊಸ ಅರ್ಜಿಯನ್ನು ಎಫ್‌ಡಿಎಗೆ ಸಲ್ಲಿಸಿರುತ್ತದೆ. ಆಗ ಎಪ್‌ಡಿಎ ವಿವಿಧ ಮೂಲಭೂತ ಪರೀಕ್ಷೆಗಳನ್ನು ನಡೆಸಿದ ನಂತರವೇ ಅನುಮೋದನೆ ನೀಡುತ್ತದೆ.
ಔಷಧದ ಅಡ್ಡ ಪರಿಣಾಮ ಮತ್ತು ಸುರಕ್ಷತೆಯ ಅಂಗವಾಗಿ ಜನರಿಕ್ ಅಥವಾ ಬೇರೆ ಯಾವುದೇ ಔಷಧ ಇರಲಿ, ಅವು ಎಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆಯೋ ಅಲ್ಲಿಯವರೆಗೆ ಎಪ್‌ಡಿಎಯ ಕಣ್ಗಾವಲಿನಲ್ಲಿರುತ್ತವೆ. ಔಷಧಗಳು ಸಿದ್ದವಾಗಿ ಬಳಕೆದಾರರಿಗೆ ಲಭ್ಯವಾಗುವ ತನಕದ ಎಲ್ಲಾ ಹಂತದಲ್ಲೂ ಎಪ್‌ಡಿಎಯು ಕಾಲಕಾಲಕ್ಕೆ ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಔಷಧಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಧೃಢಪಡಿಸುತ್ತದೆ. ಚಿಕಿತ್ಸಾ ವೈಫಲ್ಯ ಅಥವಾ ವೈಪರಿತ್ಯಗಳು ಕಂಡುಬಂದಲ್ಲಿ, ಸಾರ್ವಜನಿಕರಿಗೆ ಹಾಗೂ ಆರೋಗ್ಯ ಕ್ಷೇತ್ರ ವೃತ್ತಿಪರರಿಗೆ ಸೂಚನೆ/ಸಲಹೆ/ಶಿಫಾರಸ್ಸುಗಳನ್ನು ನೀಡುವ ಹೊಣೆಗಾರಿಕೆಯನ್ನು ಎಪ್‌ಡಿಎ ಹೊಂದಿದೆ.
ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್) ಸರಕಾರಿ ಮತ್ತು ಖಾಸಗಿ ತಯಾರಕರಿಂದ ಆಯ್ದ ಬ್ಯಾಚಿನ ಔಷಧಗಳನ್ನು ತಂದು ವಿವಿಧ ಪರೀಕ್ಷೆಗೆ ಒಳಪಡಿಸುವ ಮೂಲಕ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಧೃಢಪಡಿಸಿಕೊಳ್ಳುತ್ತದೆ.
ಕೇಂದ್ರ ಸರಕಾರದಿಂದ ಸಹಾಯಧನ ಪಡೆದ ಸರ್ಕಾರೇತರ ಅಥವಾ ಲಾಭ ನಿರಪೇಕ್ಷಿತ ಸಂಘಟನೆಗಳೇ ಸಾಮಾನ್ಯವಾಗಿ ಭಾರತದಲ್ಲಿ ಜನರಿಕ್ ಔಷಧ ತಯಾರಕರು. ಜನರಿಕ್ ಔಷಧಗಳಲ್ಲಿ ದರ ವ್ಯತ್ಯಾಸಗಳಿದ್ದರೂ ಅವುಗಳ ಪರಿಣಾಮಕಾರಿತ್ವವನ್ನು ಹೋಲಿಕೆ ಮಾಡಬಹುದು.
ಜನರಿಕ್ & ಬ್ರ್ಯಾಂಡೆಡ್ ಔಷಧಗಳ ಪರಿಣಾಮದಲ್ಲಿ ವ್ಯತ್ಯಾಸವಿಲ್ಲ
ಕಳೆದ ವರ್ಷ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅನೇಕ ಕಡೆ ಔಷಧ ಕೊರತೆ ಉಂಟಾಗಿ ವ್ಯವಹಾರ ಕುಸಿದಿದ್ದರೂ ಜನೌಷಧ ಮಳಿಗೆಗಳಲ್ಲಿ ಭರ್ಜರಿ ಮಾರಾಟ ಆಗಿದೆ. ಈಗ ಜನ ಸಾಮಾನ್ಯರಲ್ಲಿ ಜನರಿಕ್ ಔಷಧ ಬಗ್ಗೆ ಹೆಚ್ಚು ತಿಳಿವಳಿಕೆ ಮತ್ತು ನಂಬಿಕೆ ಮೂಡಿದ್ದರಿಂದ ಮತ್ತು ಜನೌಷಧ ಕೇಂದ್ರಗಳೂ ಹೆಚ್ಚಿವೆ. ಅನೇಕ ಆರೋಗ್ಯ ಸಂಬಂಧಿಸಿದ ವೃತ್ತಿಪರರು, ಹೆಸರಾಂತ ಕಂಪನಿಗಳ ಔಷಧಗಳನ್ನೇ ಬರೆದುಕೊಡುತ್ತಾರೆ. ಆದರೆ ಅವರಿಗೆ ಕಡಿಮೆ ಹೆಸರಿರುವ ಕಂಪನಿಗಳು ಜನರಿಕ ಔಷಧಗಳನ್ನು ತಯಾರಿಸುತ್ತವೆ ಎಂಬುದೇ ತಿಳಿದಿರುವುದಿಲ್ಲ!
ಈ ಮೊದಲು ಅನೇಕ ವೈದ್ಯರು ಜನರಿಕ್ ಔಷಧ ಬರೆದು ಕೊಡಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಪ್ರಧಾನಮಂತ್ರಿ ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ, ಇನ್ನು ಮುಂದೆ ವೈದ್ಯರು ರೋಗಿಗಳಿಗೆ ಜನರಿಕ್ ಔಷಧವನ್ನೇ ರೋಗಿಗಳಿಗೆ ಬರೆದುಕೊಡಬೇಕೆಂದು ತಿಳಿಸಿತ್ತು. ಇದಕ್ಕೆ ಹಲವು ವೈದ್ಯರು ಪೂರಕವಾಗಿ ಸ್ಪಂದಿಸಿದ್ದು ಕೂಡ ಜನೌಷಧ ಜನಪ್ರಿಯವಾಗಲು ಕಾರಣವಾಗಿದೆ.
ಯಾರೆಲ್ಲಾ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು?
ಸರಕಾರದಿಂದ ಮಾನ್ಯತೆ ಪಡೆದ ಜನಕಲ್ಯಾಣ ಕಾರ್ಯಕ್ರಮದಲ್ಲಿ ಕನಿಷ್ಠ 3 ವರ್ಷ ಅನುಭವವಿರುವ, ಸರಕಾರೇತರ ಸಂಸ್ಥೆಗಳು, ಸಹಕಾರಿ ಸಂಘಗಳು ಸರಕಾರಿ ಸಂಸ್ಥೆಗಳ ಆವರಣದಲ್ಲಿ ಉಚಿತವಾಗಿ ನೀಡಲ್ಪಡುವ ಸ್ಥಳದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು. ಅಲ್ಲದೇ ಫಾರ್ಮಾ ಪದವೀಧರರು ಸೇರಿ ಯಾವುದೇ ನಿರುದ್ಯೋಗಿ ಪದವೀಧರರು ಅವಶ್ಯಕ ಸ್ಥಳ, ಕನಿಷ್ಠ ಬಂಡವಾಳ, ಶೀತಲಿಕರಣ ಯಂತ್ರ, ಗೋದಾಮು, ಔಷಧಿ ಅಂಗಡಿ ತೆರೆಯಲು ಮೂಲಭೂತ ಸೌಲಭ್ಯ ಹೊಂದಿದ್ದರೆ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು. ಪ್ರತಿ ಔಷಧಿಯ ಮೇಲೆ ಶೇ.20ರಷ್ಟು ಲಾಭ ಇದ್ದೇ ಇದೆ. ಸರಕಾರದಿಂದ ರೂ.1.5 ಲಕ್ಷದ ವರೆಗೆ ಸಹಾಯವೂ ಸಹ ದೊರೆಯುವುದು.
ಈಗ ಸರಕಾರ ಜನೌಷಧಿ ಕೇಂದ್ರಗಳ ಬಗ್ಗೆ ಮಾಹಿತಿ ತಿಳಿಸಲು ‘ಜನರಿಕ್ ಮೆಡಿಸಿನ್ ಆ್ಯಪ್ ಆರಂಬಿಸಿದೆ. ಈ ಆಪ್ ಮೂಲಕ ಸಾರ್ವಜನಿಕರು ತಮ್ಮ ಮನೆಯ ಸಮೀಪದಲ್ಲೇ ಜನೌಷಧಿ ಮಳಿಗೆ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲದೆ, ನಿಮಗೆ ಬೇಕಿರುವ ಔಷಧಿಯ ಹೆಸರನ್ನು ನಮೂದಿಸಿದರೆ, ಆ ಔಷಧಿಯ ಫಾರ್ಮುಲಾ ಹೊಂದಿರುವ ಇತರೆ ಬ್ರಾಂಡ್‌ನ ಯಾವ ಔಷಧಿ ಮಳಿಗೆಯಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸರಕಾರವೂ ಜನರಿಗೆ ತಮ್ಮ ಸಮೀಪದಲ್ಲೇ ಔಷಧ ದೊರೆಯುವ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಜನೌಷಧ ಹೆಚ್ಚು ಜನಪ್ರಿಯವಾಗುತ್ತಿದೆ. ಜನರಿಕ್ ಔಷಧಗಳು ಇತರ ಔಷಧ ಮಾರುಕಟ್ಟೆ ದರಕ್ಕಿಂತ ಶೇ.80ರಿಂದ ಶೇ.90ರಷ್ಡು ಅಗ್ಗದಲ್ಲಿ ದೊರೆಯುತ್ತಿವೆ. ಆದರೆ, ಜನರಿಕ್ ಔಷಧ ಬಗ್ಗೆ ಸಾಕಷ್ಟು ಪ್ರಚಾರವಾದರೆ ಮತ್ತು ವೈದ್ಯರು ಸರಕಾರದ ಜತೆ ಕೈ ಜೋಡಿಸಿ ಈ ಔಷಧವನ್ನು ಪ್ರೋತ್ಸಾಹಿಸಿದರೆ ಒಳ್ಳೆಯದು. ಇಂದು ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಪಡೆಯುತ್ತಿದ್ದಾರೆ. ಮುಂದೆ ಕೋಟ್ಯಂತರ ಜನರಿಗೆ ಇದರ ಪ್ರಯೋಜನ ಲಭಿಸಲು ಸಾಧ್ಯವಿದೆ.
ಡಾ.ಗುರುಪ್ರಸಾದ ಹವಲ್ದಾರ್