ಗುಡಿಬಂಡೆ: ತಾಲೂಕಿನ ಇತಿಹಾಸ ಪ್ರಸಿದ್ಧ ಐತಿಹಾಸಿಕ ವರಾಹಗಿರಿ (ವರ್ಲಕೊಂಡ) ಬೆಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ʼಶ್ರೀ ವರಾಹಗಿರಿ ಅಭಿವೃದ್ಧಿ ಸೇವಾ ಟ್ರಸ್ಟ್ʼ ರಚಿಸಲಾಗಿದ್ದು 15 ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ವರ್ಲಕೊಂಡ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಲ್.ಎ.ಬಾಬು ತಿಳಿಸಿದ್ದಾರೆ.
ವರ್ಲಕೊಂಡೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶ್ರೀ ವರಾಹಗಿರಿ ಅಭಿವೃದ್ಧಿ ಸೇವಾ ಟ್ರಸ್ಟಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿದ ನಂತರ ಅವರು ಮಾತನಾಡಿದರು.
ಪ್ರಾಚೀನ ಭವ್ಯ ಇತಿಹಾಸ ಹೊಂದಿರುವ ತಾಲೂಕಿನ ಪಂಚಗಿರಿಗಳಲ್ಲಿ ಒಂದಾದ ವರಾಹಗಿರಿ ಬೆಟ್ಟವು ಹಲವಾರು ವರ್ಷಗಳಿಂದ ಅಭಿವೃದ್ಧಿ ಇಲ್ಲದೇ ಸೂರಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಗಣ್ಯರು ಸೇರಿ ಈ ಬೆಟ್ಟವನ್ನು ಅಭಿವೃದ್ಧಿ ಮಾಡಲು ಪಣತೊಟ್ಟಿದ್ದು, ಅವರ ಸಲಹೆ ಸೂಚನೆಗಳಂತೆ ಅಭಿವೃದ್ಧಿ ಟ್ರಸ್ಟ್ ರಚಿಸಲಾಗಿದೆ. ಈ ಟ್ರಸ್ಟ್ ಮೂಲಕ ವರಾಹಗಿರಿ ಬೆಟ್ಟಕ್ಕೆ ಮೊದಲ ಹಂತದಲ್ಲೇ ಮೆಟ್ಟಿಲುಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ನೀಲನಕ್ಷೆ ತಯಾರಿಸಲಾಗಿದೆ. ಅದರಂತೆ ಬೆಟ್ಟದ ಮೇಲಿರುವ ಶ್ರೀ ರಾಮ ದೇವಾಲಯವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಎಂದು ಅವರು ಹೇಳಿದರು.
ಟ್ರಸ್ಟ್ ಗೌರವಾಧ್ಯಕ್ಷೆ ಗಾಯಿತ್ರಿ ನಂಜುಂಡಪ್ಪ ಮಾತನಾಡಿ, ಶ್ರೀ ವರಾಹಗಿರಿ ಅಭಿವೃದ್ಧಿ ಸೇವಾ ಟ್ರಸ್ಟ್ನ ರಚನೆಯ ಮುಖ್ಯ ಉದ್ದೇಶ ವರಾಹಗಿರಿ ಬೆಟ್ಟದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ವರಾಹಗಿರಿ ಬೆಟ್ಟದ ಮೆಟ್ಟಿಲು ನಿರ್ಮಾಣಕ್ಕೆ ದಾನಿಗಳ ಸಹಕಾರ ಬೇಕಾಗಿದೆ ಎಂದರು.
ಟ್ರಸ್ಟ್ ನೂತನ ಸದಸ್ಯರು
ಅಧ್ಯಕ್ಷರಾಗಿ ವಕೀಲ ಶಿವರಾಮ್, ಗೌರವಾಧ್ಯಕ್ಷರಾಗಿ ಗಾಯಿತ್ರಿ ನಂಜುಂಡಪ್ಪ, ಉಪಾಧ್ಯಕ್ಷರಾಗಿ ಎಲ್.ಎ.ಬಾಬು, ಕಾರ್ಯದರ್ಶಿಯಾಗಿ ಶ್ರೀನಿವಾಸ ಚಾರಿ, ಸದಸ್ಯರಾಗಿ ಶ್ರಿರಾಮಪ್ಪ, ಪಿ.ವಿ.ನರಸಿಂಹಮೂರ್ತಿ, ನಾರಾಯಣಪ್ಪ, ದೇವರಾಜು, ಚನ್ನರಾಯಪ್ಪ, ರಾಮಕೃಷ್ಣಪ್ಪ, ಲಕ್ಷ್ಮಯ್ಯ, ದೋಡ್ಡಮುದ್ದಪ್ಪ, ಗುರುಮೂರ್ತಿ, ನರಸಿಂಹಮೂರ್ತಿ, ಅಶ್ವತ್ಥಪ್ಪ ಆಯ್ಕೆಯಾಗಿದ್ದಾರೆ.
ಸ್ಥಳೀಯರಿಗೆ ಸಂತಸ
ಕೆಲ ದಿನಗಳ ಹಿಂದೆ ಈ ಬೆಟ್ಟವೂ ಕಲ್ಲು ಖದೀಮರ ಕಣ್ಣಿಗೆ ಬಿದ್ದಿತ್ತು. ಆಗ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಆತಂಕಗೊಂಡಿದ್ದರು. ಈಗ ಐತಿಹಾಸಿಕ ಬೆಟ್ಟದ ಉಳಿವಿಗಾಗಿ ಟ್ರಸ್ಟ್ ರಚನೆ ಆಗಿರುವುದು ಸ್ಥಳೀಯರಲ್ಲಿ ಸಂತಸ ಉಂಟು ಮಾಡಿದೆ.