ಬಾಗೇಪಲ್ಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಬೇಟಿ ನೀಡಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಕಾಂಗ್ರೆಸ್ ಮುಖಂಡ ಡಿ.ಎನ್.ನಾಗಿರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರೂ ಆಗಿದ್ದ ಡಿ.ಎನ್.ನಾಗಿರೆಡ್ಡಿ ಮತ್ತು ಅವರ ಮಗ ಡಿ.ಎನ್.ಸುಬ್ಬಾರೆಡ್ಡಿಯವರು ಐದು ದಿನಗಳ ಅಂತರದಲ್ಲಿಯೇ ಕೊರೊನಾ ಸೋಂಕಿನಿಂದ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಕೊರೊನಾ ತಂದಿರುವ ಸಂಕಷ್ಟ ಅಷ್ಟಿಷ್ಟಲ್ಲ. ಅನೇಕ ಕುಟುಂಬಗಳಲ್ಲಿ ನೋವು ತಂದಿದೆ. ನೀವು ಧೈರ್ಯಗುಂದಬೇಡಿ. ಕಾಂಗ್ರೆಸ್ ಪಕ್ಷವು ನಿಮ್ಮ ಕುಟುಂಬದ ರಕ್ಷಣೆಗೆ ಇರುತ್ತದೆ. ಬಾಗೇಪಲ್ಲಿ ಶಾಸಕರು ನಿಮಗೆ ಅಗತ್ಯ ಸಹಕಾರವನ್ನು ನಿಮ್ಮ ಕುಟುಂಬಕ್ಕೆ ಕೊಡುತ್ತಾರೆ ಎಂದು ನಾಗಿರೆಡ್ಡ ಕುಟುಂಬದವರಿಗೆ ಡಿಕೆಶಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಡಿಸಿಸಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ನಾಗರಾಜ್, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಎಂ.ವಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.