ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ 81,000 ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ
by Ra Na Gopala Reddy Bagepalli
ಬಾಗೇಪಲ್ಲಿ: ‘ಜನರ ಸಂಕಷ್ಟದಲ್ಲಿ ಭಾಗಿಯಾಗಿ, ನೆರವು ನೀಡಿ ಅವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ್ ಸಿದ್ಧಾಂತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬಾಗೇಪಲ್ಲಿಯಲ್ಲಿ ಬಡವರಿಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಸುಬ್ಬಾರೆಡ್ಡಿ ಅವರು 81 ಸಾವಿರ ಆಹಾರ ಕಿಟ್ ನೀಡಿದ್ದಾರೆ. 20 ಕೆ.ಜಿ ಅಕ್ಕಿ, ಎಣ್ಣೆ ಮತ್ತಿತರ ದಿನಸಿ ಪದಾರ್ಥ ಕೊಟ್ಟಿದ್ದಾರೆ. ಇಂತಹ ನಾಯಕರ ಜತೆ ಇದ್ದೀವಿ ಎಂದು ಹೇಳಲು ನಾನು ಮತ್ತು ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದಿದ್ದೇವೆ. ಸರಕಾರ ನಿಮಗೆ ಏನು ಕೊಡಬೇಕಿತ್ತೋ ಅದನ್ನು ನೀಡಲಿಲ್ಲ. ತರಕಾರಿ ಬೆಳೆಗಾರರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಹೋಗುತ್ತಿರುವವರಿಗೂ ಪರಿಹಾರ ಸಿಕ್ಕಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಈ ಸಮಯದಲ್ಲಿ ಎಲ್ಲರ ಮನೆಗೂ ಹೋಗಿ ಅವರಿಗೆ ಸಹಾಯ ಮಾಡಬೇಕು, ಸಾಂತ್ವನ ಹೇಳಬೇಕು. ಬಿಜೆಪಿಯವರು ಯಾರ ಮನೆಗೂ ಹೋಗಿಲ್ಲ, ಸಹಾಯ ಮಾಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಉದ್ದಗಲಕ್ಕೂ ಜನರ ಸೇವೆ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ.
ಜನರ ಮಧ್ಯೆ ಹೋಗಿ ಅವರ ಕಷ್ಟದಲ್ಲಿ ನಾವು ಇದ್ದೇವೆ ಎಂದು ಧೈರ್ಯ ತುಂಬಬೇಕು. ಇದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಜನರ ಮನೆಗೆ ಹೋಗಿ ಅವರಿಗೆ ಬೇಕಾದ ನೆರವು ನೀಡಿ. ನಾವು ನಿಮ್ಮ ಜತೆ ಇರುತ್ತೇವೆ.’
ಈಗ ಸುರಿಯುತ್ತಿರುವ ಮಳೆ ಶುಭಸೂಚಕ, ಸಮೃದ್ಧಿಯ ಸಂಕೇತ. ವರುಣನ ಆಗಮನ ಕಾಂಗ್ರೆಸ್ ನೆರವಿನ ಕಾರ್ಯ ಹಾಗೂ ಸರಕಾರದ ವಿರುದ್ಧದ ಹೋರಾಟಕ್ಕೆ ಶುಭ ಕೋರಿದೆ ಎಂದರು ಡಿ.ಕೆ.ಶಿವಕುಮಾರ್.
ಪ್ರಧಾನಿ ವಿರುದ್ಧ ಸಿದ್ದು ವಾಗ್ದಾಳಿ
ಕೊರೊನಾ ಕಡಿಮೆ ಮಾಡಿ ಅಂದರೆ ಚಪ್ಪಾಳೆ, ಜಾಗಟೆ ಬಾರಿಸಿ ಅಂತಾರೆ. ಇಂತಹ ಪ್ರಧಾನಿ ಯಾರಾದರೂ ಬಂದಿದ್ರಾ.? ಲಾಕ್ಡೌನ್ ಮಾಡಿದ್ದೀರಿ, ಜನತೆಗೆ ಕೆಲಸ ಕಾರ್ಯ ಇಲ್ಲ. ಯಡಿಯೂರಪ್ಪ ಸರಕಾರ ರಾಕ್ಷಸ ಸರಕಾರ. ಮನುಷ್ಯತ್ವ ಇಲ್ಲದ ಸರಕಾರ. ಮಾನ ಮರ್ಯಾದೆ ಇಲ್ಲ. ಈ ಸರಕಾರಕ್ಕೆ ಚರ್ಮ ದಪ್ಪ ಆಗಿದೆ. ದಬ್ಬಣ ಹಾಕಿ ಚುಚ್ಚಿದರೂ ಏನೂ ಆಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.
ಯಾರಿಗೂ ಕೋವಿಡ್ ಪರಿಹಾರದ ಹಣ ಬಂದಿಲ್ಲ. ಎಲ್ಲ ದುಡ್ಡು ಅವರೇ ಹೊಡೆತಿದ್ದಾರೆ. ಇದು ಕೆಟ್ಟ ಸರಕಾರ. ಈ ಸರಕಾರ ಕಿತ್ತೊಗೆಯಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಬಾರಿ ಮತ ಹಾಕಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ರಾಮಲಿಂಗಾರೆಡ್ಡಿ, ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕೆಡಿಪಿ ಸದಸ್ಯ ಅಮರನಾಥ ರೆಡ್ಡಿ, ಬಿ.ವಿ.ವೆಂಕಟರಮಣ, ಸಾಯಿ ಸಮಿತಿಯ ಅಧ್ಯಕ್ಷರು ನಂಜುಂಡಪ್ಪ, ತಾಲೂಕು ಪಂಚಾಯತಿ ಅಧ್ಯಕ್ಷರು ನರೇಂದ್ರಬಾಬು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಕೃಷ್ಣಪ್ಪ, ಮಲ್ಲಿರೆಡ್ಡಿ, ಸತೀಶ್ ರೆಡ್ಡಿ ಹಾಗೂ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
Comments 1