by GS Bharath Gudibande
ಬಾಗೇಪಲ್ಲಿ: ಪಟ್ಟಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ದೃಶ್ಯವೊಂದು ಎಲ್ಲರ ಗಮನ ಸೆಳೆಯಿತು. ಅದೇನಂತೀರಾ… ಮುಂದೆ ಓದಿ
ಕೊವಿಡ್ ಮಹಮಾರಿಯಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಕ್ಷೇತ್ರದ 81 ಸಾವಿರ ಕುಟುಂಬಗಳಿಗೆ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಬಾಗೇಪಲ್ಲಿಯಲ್ಲಿ ಶಾಸಕರ ನಡೆದ ಈ ಕಾರ್ಯಕ್ರಮದಲ್ಲಿ ವರುಣನ ಆಗಮನ ವಿಶೇಷವಾಗಿತ್ತು. ಮಳೆಯ ನಡುವೆಯೂ ನಾಯಕರ ಮತ್ತ ಜನ ಉತ್ಸಾಹಕ್ಕೇನೂ ಕುಂದುಂಟಾಗಿರಲಿಲ್ಲ. ಮಳೆಯ ನಡುವೆಯೇ ನಾಯಕರು ಭಾಷಣ ಮಾಡಿದರೆ, ಜಡಿಮಳೆಯ ಹನಿಗಳ ಸಿಂಚನದ ನಡುವೆ ಜನರೂ ಕೂಡ ನಾಯಕರ ಮಾತುಗಳನ್ನು ಆಲಿಸಿದರು.
ಡಿ.ಕೆ.ಶಿವಕುಮಾರ್ ಅವರು ಮಾತನಾಡುವಾಗಲಂತೂ ಮಳೆ ಜೋರಿತ್ತು. ಆದರೆ, ಡಿಕೆಶಿ ಮಾತು ನಿಲ್ಲಿಸಲಿಲ್ಲ. “ಇಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಅದಕ್ಕೆ ಮಳೆಯೂ ಬರುತ್ತಿದೆ. ಇದು ಶುಭಸೂಚಕ” ಎಂದು ಜನರಲ್ಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಮಳೆಗೆ ಮೈಯೊಡ್ಡಿ ಭಾಷಣ ಮಾಡುತ್ತಿದ್ದ ಡಿಕೆಶಿ ಅವರಿಗೆ ಕೊಡೆ ಹಿಡಿದ ಶಾಸಕ ಸುಬ್ಬಾರೆಡ್ಡಿ ಅವರು, ಕೆಪಿಸಿಸಿ ಅಧ್ಯಕ್ಷರ ಭಾಷಣ ಮುಗಿಯುವ ತನಕ ಕೊಡೆ ಹಿಡಿದೇ ನಿಂತುಬಿಟ್ಟರು. ಇದು ಎಲ್ಲರ ಗಮನ ಸೆಳೆಯಿತು. ಜತೆಗೆ, ಶಾಸಕರ ಸರಳತೆಯ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡಿಕೊಂಡರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮಳೆ ಬರುತ್ತೆ ಮಳೆ ಹೋಗುತ್ತೆ. ಮಳೆ ಬಂದಾಗ ಮಾತ್ರ ಈ ಸಮಾಜಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು ಆಗುತ್ತೆ. ನಮ್ಮ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ 81 ಸಾವಿರ ಆಹಾರ ಕಿಟ್ಗಳನ್ನು ನೀಡುತ್ತಿರುವುದು ಇಡೀ ರಾಜ್ಯದ ಶಾಸಕರಿಗೆ ಮಾದರಿ. ಬಡವರು ಯಾರೂ ಹಸಿವಿನಿಂದ ಇರಬಾರದು ಎಂಬ ಶಾಸಕರ ಉದ್ದೇಶ ನಿಜಕ್ಕೂ ಶ್ಲಾಘನೀಯ. ಕೊರೋನಾದಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ, ಸರಕಾರ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ಸರಕಾರ ಮಾಡುವ ಕೆಲಸ ಕಾಂಗ್ರೆಸ್ ಪಕ್ಷದ ಶಾಸಕರು ಮಾಡುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಭಾಷಣಕ್ಕೆ ವೇದಿಕೆ ಮುಂದೆ ಇರುವ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಾಳೆ ಮತ್ತು ಶಿಳ್ಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.
Comments 1