ಪರೀಕ್ಷೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪರಿಶ್ರಮ; ಸಿದ್ಧತೆ, ಮುನ್ನಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ
by GS Bharath Gudibande
ಗುಡಿಬಂಡೆ: ಜುಲೈನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಶಿಕ್ಷಕರು ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಪರೀಕ್ಷೆಗೆ ಪೂರ್ವ ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಸಿಕೆನ್ಯೂಸ್ ನೌ ಗೆ ತಿಳಿಸಿದರು.
ಸರಕಾರ ಮತ್ತು ಶಿಕ್ಷಣ ಇಲಾಖೆ ಎಸ್ಒಪಿ ಬಿಡುಗಡೆ ಮಾಡಿದ್ದು, ಇದರ ಆಧಾರದ ಮೇಲೆ ತಾಲೂಕಿನಲ್ಲಿ ಪರೀಕ್ಷಾ ಕೇಂದ್ರಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿಶೇಷ ಕೊಠಡಿಗಳು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ತಯಾರಿಯನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವೆಂಕಟೇಶಪ್ಪ ಅವರು ನೀಡಿದ ಮಾಹಿತಿ ಹೀಗಿದೆ;
ಪರೀಕ್ಷೆಗೆ ಹಾಜರಾಗುವ ಶಿಕ್ಷಕರಿಗೆ ಲಸಿಕೆ ಕಡ್ಡಾಯ
ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಸಹಕಾರದಿಂದ ಕೋವಿಡ್ ಲಸಿಕೆ ಪಡೆಯಬೇಕೆಂದು ಎಸ್ಒಪಿಯಲ್ಲಿ ಸೂಚಿಸಲಾಗಿದೆ. ಪರೀಕ್ಷೆ ಆರಂಭದೊಳಗೆ ಮೊದಲ ಡೋಸ್ ಲಸಿಕೆಯನ್ನು ಹಾಜರಾಗುವ ಎಲ್ಲಾ ಶಿಕ್ಷಕರು ತಪ್ಪದೇ ಪಡೆದಿರಬೇಕು. ಈ ಬಗ್ಗೆ ಎಲ್ಲ ಶಿಕ್ಷಕರಿಗೆ ಸೂಚಿಸಲಾಗಿದೆ.
ಪರೀಕ್ಷಾ ಕೊಠಡಿ ಸ್ಯಾನಿಟೈಸ್
ಪರೀಕ್ಷಾ ಕೊಠಡಿ, ಶೌಚಾಲಯ ಸೇರಿ ಎಲ್ಲವನ್ನೂ ತಪ್ಪದೇ ಸ್ಯಾನಿಟೈಸ್ ಮಾಡಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳವಂತೆ ಪರೀಕ್ಷಾ ಮೇಲ್ವಿಚಾರಕರು ನೋಡಿಕೊಳ್ಳಬೇಕು.
1 ಪರೀಕ್ಷಾ ಕೇಂದ್ರಕ್ಕೆ 100 ವಿದ್ಯಾರ್ಥಿಗಳು
ಪ್ರತಿ ಒಂದು ಪರೀಕ್ಷಾ ಕೊಠಡಿಗೆ 12 ವಿದ್ಯಾರ್ಥಿಗಳು, ಒಂದು ಡೆಸ್ಕ್ʼಗೆ ಒಬ್ಬ ವಿದ್ಯಾರ್ಥಿ ಮಾತ್ರವೇ ಕೂರಬೇಕು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ತರುವುದಕ್ಕೆ ಅವಕಾಶ ಕಲ್ಪಿಸುವುದು. ಅಲ್ಲದೆ, ಒಂದು ಪರೀಕ್ಷಾ ಕೇಂದ್ರದಲ್ಲಿ ನೂರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಪ್ರತಿ ಕೇಂದ್ರದಲ್ಲಿ ವಿಶೇಷ ಕೊಠಡಿ
ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ, ಜ್ವರದಂಥ ಲಕ್ಷಣಗಳಿದ್ದರೆ ಅಥವಾ ವಿದ್ಯಾರ್ಥಿಗಳಲ್ಲಿ ಈ ತರಹದ ಲಕ್ಷಣಗಳು ಕಂಡು ಬಂದರೆ ಅಂಥ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್
ಪರೀಕ್ಷಾ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಕಂಡು ಬಂದಿದ್ದರೆ, ಅಂತಹ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರ ಹಾಗೂ ಒಟ್ಟು ವಿದ್ಯಾರ್ಥಿಗಳು
ಕೋವಿಡ್ ಕಾರಣ ತಾಲೂಕಿನಲ್ಲಿ ಈ ಬಾರಿ ಒಟ್ಟು 7 ಕೇಂದ್ರಗಳನ್ನು ಮಾಡಲಾಗಿದೆ. ಗುಡಿಬಂಡೆ ಪಟ್ಟಣದಲ್ಲಿ 2 ಪರೀಕ್ಷಾ ಕೇಂದ್ರ ಹಾಗೂ ಸೋಮೇನಹಳ್ಳಿ, ಹಂಪಸಂದ್ರ, ಜೆ.ಪಿ.ನಗರ ಆದರ್ಶ ವಿದ್ಯಾಲಯ, ಹಾಗೂ ಬೀಚಗಾನಹಳ್ಳಿ ಪ್ರೌಢಶಾಲೆಗಳಲ್ಲಿ ಮುಖ್ಯ ಪರೀಕ್ಷೆಯನ್ನು 732 ವಿದ್ಯಾರ್ಥಿಗಳು, 1 ಪುನರಾವರ್ತಿತ, 9 ವಲಸೆ ಮಕ್ಕಳು ಸೇರಿ 742 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಾಲೂಕಿನ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಸ್ಯಾನಿಟೈಸ್, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ, ಮಾಸ್ಕ್ ಸೇರಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷಾ ಹಿತದೃಷ್ಟಿಯಿಂದ 128 ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕ ಹಾಗೂ ಒಟ್ಟು 250 ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆಗಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಧನ್ಯವಾದಗಳು.
ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗುಡಿಬಂಡೆ
ವಿದ್ಯಾರ್ಥಿಗಳು ಭಯವಿಲ್ಲದ ಪರೀಕ್ಷೆ ಬರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ಮುಕ್ತವಾಗಿ ಕರೆದುಕೊಂಡು ಪರೀಕ್ಷೆ ಬರೆಸಲು ಮನವಿ, ಪರೀಕ್ಷೆ ನಡೆಯುವ ಕೇಂದ್ರಗಳ ಸಮೀಪ 200 ಮೀ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.
ಚಂದ್ರಶೇಖರ್, ನೋಡಲ್ ಅಧಿಕಾರಿ ಹಾಗೂ ಇಸಿಒ ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗುಡಿಬಂಡೆ