ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್; ದೃಶ್ಯ ರೂಪದಲ್ಲಿ ಭಗವಾನ್ ಬಾಹುಬಲಿ ಕಥೆ
Lead Photo by Aamir on Unsplash
ಬೆಂಗಳೂರು: ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ಇದೇ ಜುಲೈ 23ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರು ಚಿಕ್ಕಬಳ್ಳಾಪುರ ಮತ್ತು ನಂದಿಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆದ ನಂತರ ಸಚಿವರು ಈ ವಿಷಯ ತಿಳಿಸಿದರು.
ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಸಚಿವ ಯೋಗೇಶ್ವರ ಹೇಳಿದರು.
AARCON INFRA ಸಂಸ್ಥೆ ಪ್ರತಿನಿಧಿಗಳು ನಂದಿಬೆಟ್ಟದ ರೋಪ್ ವೇ ಯೋಜನೆಯ ಪ್ರಾತ್ಯಕ್ಷಿತೆ ತೋರಿಸಿದರು. ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದ್ದು, ದೇಶ ವಿದೇಶ ಹಾಗೂ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ 64 ರೋಪ್ ವೇಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದ ಪ್ರಪ್ರಥಮ ರೋಪ್ ವೇ ಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒರಿಸ್ಸಾದಲ್ಲಿ ಕೊನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ʼನಲ್ಲಿ ಆ ದೇಗುಲದ ಇತಿಹಾಸವನ್ನು ಚಲನಚಿತ್ರದ ಅಥವಾ ದೃಶ್ಯ ರೂಪದಲ್ಲಿ ನೋಡಬಹುದು. ಬಳಿಕ ದೇವಾಲಯ ದರ್ಶನ ಮಾಡುವ ವ್ಯವಸ್ಥೆ ಇದೆ. ಅದೇ ರೀತಿಯ ಯೋಜನೆಯನ್ನು ಶ್ರವಣಬೆಳಗೊಳದಲ್ಲಿ ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಭಗವಾನ್ ಬಾಹುಬಲಿ / courtesy: Wikipedia
ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿಯ ಇತಿಹಾಸ ಹೇಳುವ ದೃಶ್ಯ ರೂಪದ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ, ಅದನ್ನು ಥಿಯೇಟರ್ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರು ಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು ಅವರು.
ಮೈಸೂರಿನಲ್ಲಿ ಹೈಟೆಕ್ ಹಾಥ್ ವೇ
ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂದಾಜು ರೂ.100 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಯೋಗೇಶ್ವರ ಹೇಳಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ THE INDIA EXPO-2023 ಬೃಹತ್ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಈ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು ಅವರು.
ಇದೇ ವೇಳೆ ONE IRIS ಕಂಪನಿಯವರು ಪ್ರವಾಸೋದ್ಯಮ ಮೇಳದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Comments 1