Lead photo coutesy: Bhaskar Rao Facebook page
ಬೆಂಗಳೂರು: ಐಪಿಎಸ್ ಹುದ್ದೆಯನ್ನು ತೊರೆದು ಅಣ್ಣಾಮಲ್ಲೈ ಅವರು ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಹಾಗೆಯೇ, ರಾಜ್ಯದ ಇನ್ನೊಬ್ಬರು ಐಪಿಎಸ್ ಅಧಿಕಾರಿ ನೇರವಾಗಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ.
ಆ ಅಧಿಕಾರಿ ಬೇರೆ ಯಾರೂ ಅಲ್ಲ, ಸದ್ಯಕ್ಕೆ ರೈಲ್ವೆಯ ಎಡಿಜಿಪಿ ಭಾಸ್ಕರ್ ರಾವ್. ಅವರು ಭಾರತೀಯ ಜನತಾ ಪಕ್ಷ ಸೇರುವ ಸಾಧ್ಯತೆ ಇದೆ.
ಭಾಸ್ಕರ್ ರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಖಚಿತ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ. ಈಗಾಗಲೇ ಅವರು ಬೆಂಗಳೂರು ಪೊಲೀಸ್ ಆಯುಕ್ತ, ಕರ್ನಾಟಕ ಮೀಸಲು ಪಡೆ ಮುಖ್ಯಸ್ಥ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಕೋವಿಡ್ ಸಂಕಷ್ಟ ಬಂದೊದಗಿದಾಗ ಸ್ವಲ್ಪವೂ ಲೋಪ-ದೋಷ ಇಲ್ಲದಂತೆ ಬೆಂಗಳೂರು ನಗರವನ್ನು ಸುರಕ್ಷಿತವಾಗಿ ಕಾಪಾಡಿದ ಕೀರ್ತಿ ಆಗ ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರದ್ದು. ಅವರ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರೇ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಂತರದ ದಿನಗಳಲ್ಲಿ ಅವರಿಗೆ ರಾಜ್ಯ ಸರಕಾರ ಕೊಟ್ಟ ಹುದ್ದೆಗಳು ಅವರ ದಕ್ಷತೆಗೆ, ಅವರ ಹುರುಪಿನ ವ್ಯಕ್ತಿತ್ವಕ್ಕೆ ಅಷ್ಟೊಂದು ಹೊಂದುಕೊಂಡಿರಲಿಲ್ಲ. ಆದರೂ ವರ್ಗವಾಗಿ ಹೋದ ಪ್ರತಿ ಇಲಾಖೆಯಲ್ಲೂ ಹೊಸಹೊಸ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದಾರೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ ಭಾಸ್ಕರ್ ರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.
ಇವರ ಕಾರ್ಯವೈಖರಿ ಬಗ್ಗೆ ಅರಿವಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಭಾಸ್ಕರ್ ರಾವ್ ಅವರನ್ನು ತಮ್ಮ ಸರಕಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳುವ ಆಲೋಚನೆ ಹೊಂದಿದ್ದಾರೆಂದು ಹೇಳಲಾಗಿದೆ.
ಮಾಹಿತಿ ನೀಡಿರುವ ಮೂಲಗಳ ಪ್ರಕಾರ, ಭಾಸ್ಕರ್ ರಾವ್ ಅವರಿಗೆ ರಾಜ್ಯಪಾಲರ ಪದವಿ ಅಥವಾ ಯಾವುದಾದರೂ ವಿಶೇಷ ಸ್ಥಾನಮಾನ ಸಿಗಬಹುದು ಎನ್ನಲಾಗಿದೆ.
courtesy: Wikipedia
ರಾಜ್ಯದ ಐಪಿಎಸ್ ವಲಯದಲ್ಲಿ ಬಹಳ ಕ್ರಿಯಾಶೀಲರು, ಸಮಾಜಮುಖಿಯೂ ಆಗಿ ಕೆಲಸ ಮಾಡುತ್ತಿರುವ ಭಾಸ್ಕರ್ ರಾವ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ ಅವಧಿ ಬಹಳ ಸವಾಲಿನಿಂದ ಕೂಡಿತ್ತು. ಕೋವಿಡ್ ಮೊದಲ ಅಲೆಗೆ ಸಿಕ್ಕಿ ಇಡೀ ಬೆಂಗಳೂರು ತತ್ತರಿಸಿತ್ತು. ಒಂದೆಡೆ ಲಾಕ್‌ಡೌನ್ ಕಠಿಣ ನಿಯಮಗಳ ಜಾರಿ, ಮತ್ತೊಂದೆಡೆ ಪಾದರಾಯನಪುರ ಘಟನೆಯನ್ನು ಅವರು ಎದುರಸಿದರು. ಆದರೆ, ಪ್ರತಿ ಸವಾಲನ್ನೂ ಅವರು ಯಶಸ್ವಿಯಾಗಿ ನಿಭಾಯಿಸಿದ್ದರು.
ಎಲ್ಲಕ್ಕಿಂತ ಮಿಗಿಲಾಗಿ ಸರಳತೆ, ಸಜ್ಜನಿಕೆಯಿಂದ ಅವರು ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನ ಹೊಂದಿದ್ದಾರೆ.
Comments 1