ಮನೆಗಳಿಗೆ ನುಗ್ಗಿದ ನೀರು, ಇಡೀ ರಾತ್ರಿ ಜನರ ಜಾಗರಣೆ, ಕುಸಿದ ಗೋಡೆಗೆ ಸಿಕ್ಕಿ ಕಾರು ಜಖಂ
by M Krishnappa Chikkaballapura
ಚಿಕ್ಕಬಳ್ಳಾಪುರ: ನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನರು ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರೆ, ರಸ್ತೆಗಳು ಜಲಾವೃತವಾಗಿದ್ದವು. ವಾಹನಗಳ ಮೇಲೆ ಗೋಡೆಗಳು ಕುಸಿದುಬಿದ್ದು ಜಖಂಗೊಂಡಿವೆ.
ನಗರದ 9ನೇ ವಾರ್ಡಿನ ಶೆಟ್ಟಿಹಳ್ಳಿ ಬಡಾವಣೆಯ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈ ಬಡಾವಣೆಯ ಕೆಲ ಮನೆಗಳಿಗೆ ರಾತ್ರಿ 10 ಗಂಟೆಯಿಂದಲೇ ನುಗ್ಗಿದ ಒಳಚರಂಡಿ ನೀರಿನಿಂದಾಗಿ ರಾತ್ರಿ ಇಡೀ ನಿದ್ದೆ ಇಲ್ಲದೆ ಜನರು ಪರಿತಪಿಸುವಂತಾಯಿತು. ಬೆಳಗ್ಗೆ 8 ಗಂಟೆಯಾದರೂ ಮನೆಗಳಿಗೆ ನುಗ್ಗಿದ್ದ ನೀರನ್ನು ಸ್ಥಳೀಯ ನಿವಾಸಿಗಳು ಹೊರಹಾಕುತ್ತಲೇ ಇದ್ದರು.
ನಗರದ ಜಿಲ್ಲಾಸ್ಪತ್ರೆಯ ಮುಂಭಾಗದ ಪ್ರದೇಶ, ಶೆಟ್ಟಿಹಳ್ಳಿ ಬಡಾವಣೆ, ಜೈಭೀಮ್ ನಗರ, ಕಲ್ಲಪ್ಪ ಲೇಔಟ್ ಗೂಡು ಮಾರ್ಕೆಟ್ ರಸ್ತೆ ಪ್ರದೇಶಗಳು ತಗ್ಗು ಪ್ರದೇಶದಲ್ಲಿದ್ದು, ಅಲ್ಲೆಲ್ಲ ನೀರು ನುಗ್ಗಿದೆ. ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದೆ.
8ನೇ ವಾರ್ಡ್‌ನಲ್ಲಿರುವ ಅಂಜನಮ್ಮ ಎಂಬುವವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯವೆಲ್ಲಾ ನೀರು ಪಾಲಾಗಿದೆ. ಅಲ್ಲದೆ, ವಿದ್ಯುತ್ ಕಂಬಗಳು ಉರುಳಿ ತೇವಾಂಶದಿಂದ ಎಲ್ಲಿ ವಿದ್ಯುತ್ ಅವಘಡ ಉಂಟಾಗುವುದೋ ಎಂಬ ಭಯದಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ನಗರದ ಬಹುತೇಕ ಪ್ರದೇಶದಲ್ಲಿ ಇದೇ ಸ್ಥಿತಿ ಇತ್ತು.
ನಗರಸಭೆ ಸದಸ್ಯ ಮಟಮಪ್ಪ ಬೆಳಗ್ಗೆಯೇ ಸ್ಥಳಕ್ಕೆ ಧಾವಿಸಿ ನೀರನ್ನು ಅಲ್ಲಿಂದ ತೆರವುಗೊಳಿಸಲು ನೆರವಾದರು. ನಗರಸಭೆ ಅದ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮನೆಗಳಿಗೆ ನುಗ್ಗಿದ್ದ ನೀರಿನ ಅವಾಂತರದಿಂದ ತಾತ್ಕಾಲಿಕವಾಗಿ ನೀರು ಅಲ್ಲಿಂದ ತೆರವುಗೊಳಿಸುವಂತೆ ಕೂಡಲೇ ಆನಂದ ರೆಡ್ಡಿ ನಗರಸಭೆ ಸಿಬ್ಬಂದಿಗೆ ಸೂಚಿಸಿದರು. ಅದೇ ರೀತಿ ನಗರದ ಬಹುತೇಕ ಕಡೆಗಳಲ್ಲಿ ಮಳೆಯಿಂದ ಸೃಷ್ಟಿಯಾಗಿದ ಅವಾಂತರಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರಲ್ಲದೆ ಕೆಲ ಕಡೆಗಳಲ್ಲಿ ಈ ಹಿಂದೆಯೇ ಒಳಚರಂಡಿಗಳ ನಿರ್ಮಾಣ ವ್ಯವಸ್ಥಿತವಾಗಿರದ ಹಾಗೂ ಕೆಲ ಕಡೆ ತಗ್ಗು ಪ್ರದೇಶಗಳಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗದಂತೆ ತಕ್ಷಣ ಕ್ರಮ ವಹಿಸಲಾಗುವುದು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗುವುದು. ಈ ಬಗ್ಗೆ ಇಂದೇ ಅಧಿಕಾರಿಗಳ ಜತೆ ಚರ್ಚಿಸಲಾಗುವುದು.
ಡಿ.ಎಸ್.ಆನಂದರೆಡ್ಡಿ ಬಾಬು ನಗರಸಭೆ ಅಧ್ಯಕ್ಷ
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಟಮಪ್ಪ, ಯತೀಶ್, 8ನೇ ವಾರ್ಡಿನ ಯುವ ಮುಖಂಡ ಪಾಪು ಇನ್ನಿತರರು ಇದ್ದರು.