by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಡಿವಿಜಿ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಪ್ರಾವಿಜನ್ ಸ್ಟೋರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಮಳಿಗೆಯಲ್ಲಿದ್ದ ಕಂಪ್ಯೂಟರ್ ಮತ್ತು ಕರೆನ್ಸಿ ಎಣಿಕೆ ಯಂತ್ರದ ಜತೆಗೆ ಅಂಗಡಿಯಲ್ಲಿರುವ ಸರಕುಗಳೂ ಬಹುತೇಕ ಸುಟ್ಟು ಭಸ್ಮವಾಗಿವೆ.
ಅಲ್ಲದೆ ಏಳೆಂಟು ನೋಟಿನ ಕಂತೆಗಳು ಕೂಡ ಬೆಂಕಿಗೆ ಆಹುತಿಯಾಗಿವೆ. 500 ರೂ. ಮುಖಬೆಲೆ ಈ ಕಂತೆಗಳು ಬೆಂಕಿಗೆ ಸಿಕ್ಕಿ ಸುಟ್ಟಿದ್ದು, ಅವುಗಳ ಮೊತ್ತ 10ರಿಂದ 15 ಲಕ್ಷ ರೂ. ಇರಬಹುದು ಎನ್ನಲಾಗಿದೆ. ಬಾಗೇಪಲ್ಲಿ ಪಟ್ಟಣದ ಅತಿದೊಡ್ಡ ಸಗಟು ಮಾರಾಟ ಮಳಿಗೆಗಳಲ್ಲಿ ಇದೂ ಒಂದಾಗಿದ್ದು, ದಿನಕ್ಕೆ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ.
ಈ ಬಾಲಾಜಿ ಪ್ರಾವಿಷನ್ ಸ್ಟೋರ್ ತ್ಯಾಗರಾಜ್ ಅವರಿಗೆ ಸೇರಿದ್ದಾಗಿದ್ದು, ಅವಘಡ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ (ಬೆಳಗ್ಗೆ 6.15 ನಿಮಿಷಕ್ಕೆ) ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.
ಈ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಬ್ಬಂದಿಯಾದ ನಾರಾಯಣಸ್ವಾಮಿ ಅವರ ಮೇಲೆ ಮೇಲ್ಛಾವಣಿಯ ಪಿಓಪಿ ಬಿದ್ದು ಅವರಿಗೆ ಸಣ್ಣಪುಟ್ಟ ಗಾಯವಾದರೆ, ಇನ್ನು ಜಯಪ್ಪ ನಾಯಕ್ ಎಂಬುವವರ ಬೆರಳಿಗೆ ಮೊಳೆ ಚುಚ್ಚಿ ರಕ್ತಸ್ರಾವವಾಗಿದೆ. ಆದರೂ ಇದಾವುದನ್ನೂ ಲೆಕ್ಕಿಸದೆ ಅವರೆಲ್ಲರೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಮಳಿಗೆಯಲ್ಲಿದ್ದ ಆಹಾರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಸುಮಾರು 10 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಎನ್.ಸತ್ಯಪ್ಪ, ಎಂ.ಸಿ.ಜಯಪ್ಪ ನಾಯಕ್, ಚಾಲಕ ನರಸಿಂಹಪ್ಪ, ಗೃಹ ರಕ್ಷಕರಾದ ನಾರಾಯಣಸ್ವಾಮಿ, ವೆಂಕಟೇಶ್ ಪಾಲ್ಗೊಂಡಿದ್ದರು.