ನಳೀನ್ ಕುಮಾರ್ ಕಟೀಲ್ ಸ್ಪೋಟಕ ಆಡಿಯೋ ಬಹಿರಂಗ
ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಅವರ ಜತೆಗೆ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಕೂಡ ಸಂಪುಟದಿಂದ ಕಾಯಂ ಆಗಿ ಹೊರಬೀಳಲಿದ್ದಾರೆ.
ಈ ಸ್ಪೋಟಕ ಸಂಗತಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದಲೇ ಬಹಿರಂಗವಾಗಿದ್ದು. ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ.
ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳೀನ್ ಕುಮಾರ್ ಕಟೀಲ್, ಈ ಸಂಗತಿಯನ್ನು ಬಹಿರಂಗಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆಯಲ್ಲದೆ ಸದ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ.
ಈ ಸಂಬಂಧದ ಕಟೀಲ್ ಅವರ ಆಡಿಯೋವನ್ನು ʼತಾರಾಪ್ರಭ ಮೀಡಿಯಾ ಹೌಸ್ʼಬಹಿರಂಗಪಡಿಸಿದ್ದು, ಯಡಿಯೂರಪ್ಪ ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ.
ತಮ್ಮ ಆಪ್ತರ ಬಳಿ ಕಟೀಲ್ ಅವರು ತುಳುವಿನಲ್ಲಿ ಮಾತನಾಡಿದ್ದು; ಯಾರಿಗೂ ಹೇಳಬೇಡ. ಶೆಟ್ಟರ್, ಈಶ್ವರಪ್ಪ ಜತೆಗೆ ಅವರ ಟೀಮುಗಳೂ ಸಂಪುಟದಿಂದ ಹೊರಬೀಳಲಿದ್ದು, ಆ ನಂತರ ನಾವು ಹೇಳಿದಂತೆಯೇ ನಡೆಯಲಿದೆ ಎಂದು ಹೇಳಿದ್ದಾರೆ.
ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು, ಮೂವರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದಿರುವ ಕಟೀಲ್, ಆ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಉಲ್ಟಾ ಹೇಳಿಕೆ ನೀಡಿದ್ದಾರೆ. ರಾಜ್ಯದ ಪಕ್ಷದ ಅಧ್ಯಕ್ಷರೇ ಈ ಬಗ್ಗೆ ಹೇಳಿಕೆ ನೀಡಿರವುದು ಮುಖ್ಯಮಂತ್ರಿ ಬದಲಾವಣೆ ಸಂಗತಿಯನ್ನು ಖಚಿತಪಡಿಸಿದಂತಾಗಿದೆ.
ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿರುವ ಮಾಜಿ ಮುಖ್ಯಮಂತ್ರಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂಡ್ ಟೀಂ ಕೂಡ ಹೊರಬೀಳಲಿದೆ ಎಂಬ ಅಂಶವನ್ನೂ ಕಟೀಲ್ ಬಹಿರಂಗಪಡಿಸಿದ್ದಾರೆ. ಆದರೆ, ಈ ಆಡಿಯೋದಲ್ಲಿರುವ ಧ್ವನಿ ಅವರದಾ? ಅಲ್ಲವಾ? ಇನ್ನಷ್ಟೇ ಗೊತ್ತಾಗಬೇಕಿದೆ.
ಆಡಿಯೋ ನನ್ನದಲ್ಲ ಎನ್ನುತ್ತಿದ್ದಾರೆ ಕಟೀಲ್
ಈ ಆಡಿಯೋ ನನ್ನದಲ್ಲ, ಯಾರೋ ಇದನ್ನು ಮ್ಯಾನುಪಲೇಟ್ ಮಾಡಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇನೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಕೊಡ್ತೇನೆ. ಆಡಿಯೋ ಬಗ್ಗೆ ತನಿಖೆ ಮಾಡಬೇಕು. ಆಗ ಸತ್ಯ ಏನೆಂಬುದು ಹೊರಬರುತ್ತದೆ ಎಂದು ಎಂದು ಮಂಗಳೂರಿನಲ್ಲಿ ಕಟೀಲ್ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಕೂಡ ಮಾಡಿ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಈ ಆಡಿಯೋ ಮಾತ್ರ ಬಿಜೆಪಿ ಪಾಳೆಯದಲ್ಲಿ ಭಾರೀ ಕಂಪನ ಉಂಟು ಮಾಡಿದೆ.