ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯ ಕ್ಲೈಮ್ಯಾಕ್ಸ್‌ಗೆ ಬಂದ ಹಾಗೆ ಕಾಣುತ್ತಿದೆ.
ಶುಕ್ರವಾರ (ಜುಲೈ 16) ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬದಲಾವಣೆ ವಿಷಯದ ಬಗ್ಗೆ ಏನಾದರೊಂದನ್ನು ತೀರ್ಮಾನ ಮಾಡಿಕೊಂಡೇ ಬರಬೇಕೆಂದು ತೆರಳಿದ್ದರು ಎನ್ನಲಾಗಿದ್ದು, ರಾಜೀನಾಮೆ ಪತ್ರವನ್ನು ಜೇಬಿನಲ್ಲೇ ಇಟ್ಟುಕೊಂಡಿದ್ದರು ಎಂಬ ಸಂಗತಿಯನ್ನು ʼತಾರಾಪ್ರಭ ಮೀಡಿಯಾ ಹೌಸ್ʼ ಬಹಿರಂಗಪಡಿಸಿದೆ.
ರಾಜ್ಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಹಾಗೂ ಹೈಕಮಾಂಡ್ ವರಸೆಯಿಂದ ಬೇಸರಗೊಂಡಿರುವ ಯಡಿಯೂರಪ್ಪ ಅವರು, ಜುಲೈ ೧೦ರ ದಿನಾಂಕ ನಮೂದಿಸಿ ರಾಜೀನಾಮೆ ಪತ್ರವನ್ನು ಬರೆದು ಕಿಸೆಯಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾಗಲೂ ರಾಜೀನಾಮೆ ಪತ್ರವನ್ನು ಸಿಎಂ ಜೇಬಿನಲ್ಲೇ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ. ಪ್ರಧಾನಿ ಮತ್ತು ಬಿಎಸ್‌ವೈ ನಡುವೆ ನಡೆದ ಕೇವಲ ಆರು ನಿಮಿಷಗಳ ಮಾತುಕತೆಯಲ್ಲಿ ರಾಜೀನಾಮೆ ವಿಚಾರ ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.
ಈ ಮಾತುಕತೆ ವೇಳೆ, ಜೆ.ಪಿ.ನಡ್ಡಾ ಬಳಿ ಹೋಗಿ ರಾಜೀನಾಮೆ ಪತ್ರ ನೀಡುವಂತೆ ಯಡಿಯೂರಪ್ಪ ಅವರಿಗೆ ಪ್ರಧಾನಿ ಸೂಚಿಸಿದ್ದಾರೆ. ತದ ನಂತರ ನಡ್ಡಾ ಅವರನ್ನು ಭೇಟಿಯಾದಾಗ ಇಬ್ಬರ ನಡುವೆ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆಯೇ ಚರ್ಚೆಯಾಗಿದೆ ಎಂದು ಗೊತ್ತಾಗಿದೆ.
ಆದರೆ, ಈ ಮಾತುಕತೆ ವೇಳೆ ನಡ್ಡಾ ಅವರಿಗೆ ರಾಜೀನಾಮೆ ಪತ್ರವನ್ನು ಸಿಎಂ ನೀಡಿಲ್ಲ. ಬದಲಿಗೆ ತಾವು ನಂಬುವ ಜೋತಿಷ್ಯದ ಪ್ರಕಾರ ಈ ತಿಂಗಳ ಬದಲು ಮುಂದಿನ ತಿಂಗಳು ರಾಜೀನಾಮೆ ಪತ್ರ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದಾಗಿ ʼತಾರಾಪ್ರಭ ಮೀಡಿಯಾ ಹೌಸ್ʼ ವರದಿ ಮಾಡಿದೆ.
ರಾಜೀನಾಮೆ ನೀಡಲು ನಾನು ಸಿದ್ಧನಾಗಿದ್ದೇನೆ. ಆದರೆ ನನ್ನ ಮಗ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಬೆಳಸಬೇಕೆಂದು ನಡ್ಡಾ ಮುಂದೆ ಪ್ರಸ್ತಾವನೆ ಇಟ್ಟಿರುವ ಯಡಿಯೂರಪ್ಪ, ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ನನಗೆ ರಾಜ್ಯಪಾಲ ಹುದ್ದೆಯ ಬದಲು ಪಕ್ಷ ಸಂಘಟನೆಯ ಕೆಲಸ ಕೊಡಿ. ಸಂಘಟನೆ ಕೆಲಸ ಮಾಡಿಕೊಂಡು ಹೋಗುವೆ ಎಂದು ಕೋರಿದ್ದಾರೆ ಎನ್ನಲಾಗಿದೆ. ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಬರುವ ಶಾಸಕಾಂಗ ಪಕ್ಷದ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.