ಜಿಟಿಜಿಟಿ ಮಳೆಯ ನಡುವೆ ರಮ್ಯತಾಣಗಳಲ್ಲಿ ಪ್ರವಾಸಿಗರ ವಿಹಾರ
by GS Bharath Gudibande
ಗುಡಿಬಂಡೆ: ನಮ್ಮ ಹೆಮ್ಮೆಯ ದೇಶ ಭಾರತದ ನಕ್ಷೆಯಂತೆ ಕಾಣುವ ಅಮಾನಿ ಭೈರಸಾಗರ ಕೆರೆ, ಟ್ರೆಕಿಂಗ್ ಮಾಡಲು 7 ಸುತ್ತಿನ ಕೋಟೆಯುಳ್ಳ ಸುರಸದ್ಮಗಿರಿ, ಸುತ್ತಲೂ ಬಗೆಬಗೆಯ ವನ್ಯಜೀವಿಗಳಿರುವ ಕಾಡು, ಅಕ್ಕಪಕ್ಕದಲ್ಲೇ ಐತಿಹಾಸಿಕ ತಾಣಗಳು, ಅನತಿ ದೂರದಲ್ಲೇ ಜೀವವೈವಿಧ್ಯ ತಾಣ ಆದಿನಾರಾಯಣ ಬೆಟ್ಟ, ಪೂರ್ವಕ್ಕೆ ವರಾಹ ರೂಪದಲ್ಲಿ ಗಂಭೀರವಾಗಿ ಕಾಣುವ ವರ್ಲಕೊಂಡೆ ಬೆಟ್ಟ.. ಮೇಲಾಗಿ ಕಣ್ಣು ಹಾಯಿಸಿದಷ್ಟೂ ದೂರ ಬೆಟ್ಟಗಳ ನಯನಮನೋಹರ ಸಾಲು..
ಹೀಗೆ ಅನೇಕ ವಿಶೇಷಗಳ ಸುಂದರ ತಾಣವೊಂದು ರಾಜಧಾನಿ ಬೆಂಗಳೂರಿಗೆ ಕೇವಲ 95 ಕಿ.ಮೀ. ದೂರದಲ್ಲಿದೆ.
ಹೌದು. ಆಂಧ್ರ ಪ್ರದೇಶಕ್ಕೆ ಅಂಟಿಕೊಂಡಿರುವ ಗುಡಿಬಂಡೆಯೇ ಆ ಸೊಬಗಿನ ತಾಣ. ಬೆಂಗಳೂರಿನ ವಾರಾಂತ್ಯದ ವಿಹಾರಿಗಳಿಗೆ, ಮುಖ್ಯವಾಗಿ ಟ್ರೆಕ್ಕಿಂಗ್ ಪ್ರಿಯರಿಗೆ, ಟೆಕ್ಕಿಗಳಿಗೆ ಹಾಟ್ ಫೇವರೀಟ್ ಆಗಿರುವ ತಾಣವೂ ಹೌದು. ಬೆಂಗಳೂರಿಗರಿಗೆ ಲಾಂಗ್ಡ್ರೈವ್ ನೆನಪಾದರೆ ತಕ್ಷಣವೇ ಕಣ್ಣೆದುರು ಬರುವ ಐತಿಹಾಸಿಕ ಮನಮೋಹಕ ಪಟ್ಟಣವಾಗಿದೆ ಗುಡುಬಂಡೆ.
ಅನ್ಲಾಕ್ ಆದ ಪ್ರವಾಸಿಗರು
ಕೋವಿಡ್ ಕಾರಣಕ್ಕೆ ಮನೆಗಳಲ್ಲೇ ಲಾಕ್ ಆಗಿದ್ದ ಪ್ರವಾಸಿಗರು ಈಗ ಅನ್ಲಾಕ್ ಆಗಿದ್ದಾರೆ. ಅವರ ಜೋಶ್ ಇಮ್ಮಿಡಿಸಿದೆ. ಪರಿಣಾಮ ಗುಡಿಬಂಡೆಯತ್ತ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಈ ವೀಕೆಂಡ್ ಬಹಳ ವಿಶೇಷವಾಗಿದೆ. ಜಿಟಿಜಿಟಿ ಮಳೆಯ ನಡುವೆ ಬೆಂಗಳೂರಿನ ಜನ ಅಮಾನಿ ಭೈರಸಾಗರ ಮತ್ತು ಸುರಸದ್ಮಗಿರಿಯಲ್ಲಿ ವಿಹಾರ ನಡೆಸುತ್ತಿದ್ದಾರೆ. ಅದರಲ್ಲೂ ಸುರಸದ್ಮಗಿರಿಗೆ ಮೋಡಗಳು ಮುತ್ತಿಕ್ಕುವ ಹಾಗೂ ಬೆಟ್ಟದ ಮೋಡಗಳ ಹೊದಿಕೆಯಲ್ಲಿ ಪುಳಕಿರಾಗುತ್ತಿದ್ದಾರೆ.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ, ಊಟಿಯ ದೊಡ್ಡಬೆಟ್ಟದಲ್ಲಿ ಸಿಗುವಂಥ ಅವರ್ಣನೀಯ ಅನುಭೂತಿ ಗುಡಿಬಂಡೆ ಬೆಟ್ಟದಲ್ಲಿ ಸಿಗುತ್ತಿದೆ ಎನ್ನುತ್ತಾರೆ ಪ್ರವಾಸಿಗರು. ಅಲ್ಲದೆ, ನಂದಿಬೆಟ್ಟ, ಆವುಲಬೆಟ್ಟಕ್ಕೂ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರು ಹತ್ತಿರ ದೊಡ್ಡ ಟೂರಿಸ್ಟ್ ಸರ್ಯೂಟ್ ಆಗಿ ಹೊರಹೊಮ್ಮುತ್ತಿದೆ.
ವೀಕೆಂಡ್ನಲ್ಲಿ ಅಂದಾಜು 200 ಕಾರು, ನೂರಾರು ಬೈಕ್ಗಳಲ್ಲಿ ಸುಮಾರು ಎರಡರಿಂದ ಮೂರು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಗುಡಿಬಂಡೆಗೆ ಭೇಟಿ ನೀಡುತ್ತಿದ್ದಾರೆ.
ನಾನು ಮೊದಲ ಸಲ ಗುಡಿಬಂಡೆಗೆ ಬಂದಿದ್ದೇನೆ. ಅದ್ಬುತ ಸ್ಥಳ. ವೀಕೆಂಡ್ ಸಂದರ್ಭದಲ್ಲಿ ಇಲ್ಲಿಗೆ ಬಂದು ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಏಳುಸುತ್ತಿನ ಕೋಟೆ, ಭಾರತದ ಭೂ ನಕ್ಷೆಯಂತಿರುವ ಕೆರೆ ಮನಮೋಹಕವಾಗಿದೆ. ಇಲ್ಲಿ ಎಲ್ಲ ತಾಣಗಳು ಬಹಳ ಚೆನ್ನಾಗಿವೆ.
ಹರೀಶ್ ಪಾಲ್ ಬೆಂಗಳೂರಿನ ಪ್ರವಾಸಿಗ
ಕೆಲಸದ ಒತ್ತಡದಿಂದ ಇರುವವರ ರಿಲ್ಯಾಕ್ಸ್ಗೆ ಗುಡಿಬಂಡೆ ಬೆಸ್ಟ್ ಪ್ಲೇಸ್. ಪ್ರಕೃತಿಯ ಸೊಬಗು ನೋಡಿ ಆನಂದಿಸಲು ಗುಡಿಬಂಡೆ ತಾಲೂಕಿಗೆ ಒಮ್ಮೆ ಭೇಟಿ ನೀಡಲೇಬೇಕು. ಇವತ್ತಿನ ತುಂತುರು ಮಳೆ, ಹಿತವಾದ ವಾತಾವರಣ, ಈ ಮನಮೋಹಕ ಪರಿಸರಕ್ಕೆ ನಮ್ಮ ಮನಸ್ಸು ಸೋತಿದೆ.
ರವಿ ಬೆಂಗಳೂರಿನ ಪ್ರವಾಸಿಗ
ಕೋವಿಡ್ ಆತಂಕ
ವೀಕೆಂಡ್ ಬಂದರೆ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಗುಡಿಬಂಡೆಗೆ ಬರುತ್ತಿದ್ದಾರೆ. ಪ್ರವಾಸಿಗರು ಬರುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಅವರಲ್ಲಿ ಬಹುತೇಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮೂರನೇ ಅಲೆ ಭೀತಿಯೂ ಇರುವುದರಿಂದ ಪಟ್ಟಣದ ಜನ ಹೆಚ್ಚು ಆತಂಕ್ಕೆ ಗುರಿಯಾಗಿದ್ದಾರೆ. ಪ್ರವಾಸಿಗರು ಕೋವಿಡ್ ನಿಯಮ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಅಲ್ಲದೆ, ಕೆಲವರು ಅಲ್ಲಲ್ಲಿಯೇ ಮಾಸ್ಕ್ಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಪ್ರವಾಸಿ ಸ್ಥಳಗಳಲ್ಲಿ ಶೌಚಾಲಯ, ಕಸದ ಡಬ್ಬಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗಳನ್ನು ಬಗೆಹರಿಸಬೇಕು.
ಗೋಪಿ ಗುಡಿಬಂಡೆ ನಿವಾಸಿ
ಚಿಕ್ಕಬಳ್ಳಾಪುರ ಟೂರಿಸಂ ಸರ್ಕ್ಯೂಟ್
ಅನೇಕ ಐತಿಹಾಸಿಕ, ಪ್ರಾಕೃತಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಇಡೀ ಚಿಕ್ಕಬಳ್ಳಾಪುರ ಅಷ್ಟೂ ತಾಣಗಳ ಸಂಪರ್ಕ ಕಲ್ಪಿಸುವ ಚಿಕ್ಕಬಳ್ಳಾಪುರ ಟೂರಿಸಂ ಸರ್ಕ್ಯೂಟ್ ರೂಪಿಸಬೇಕು ಎಂಬ ಬೇಡಿಕೆ ಜಿಲ್ಲೆಯ ಜನರಲ್ಲಿದೆ. ನಂದಿಬೆಟ್ಟ, ಆವಲಬೆಟ್ಟ, ಗುಡಿಬಂಡೆ ಬೆಟ್ಟ, ವರ್ಲಕೊಂಡೆ ಬೆಟ್ಟ. ಗಡಿದಂ, ಗುಮ್ಮನಾಯಕನಪಾಳ್ಯ, ದೇವಿಕುಂಟೆ ಕೋಟೆ, ವಿಧುರಾಶ್ವಥ, ನಂದಿ, ಕೈವಾರ ಇತ್ಯಾದಿ ತಾಣಗಳನ್ನು ಒಳಗೊಂಡ ಟೂರಿಸಂ ಸರ್ಕ್ಯೂಟ್ ರೂಪಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಪ್ರಯತ್ನ ಮಾಡಬೇಕಿದೆ.