ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈಗಾಗಲೇ ಮಕ್ಕಳು ತಮ್ಮ ಶಾಲೆಗಳಿಂದ ಪರೀಕ್ಷಾ ಪ್ರವೇಶ ಪತ್ರಗಳನ್ನು ಪಡೆದುಕೊಂಡಿದ್ದು, ಪರೀಕ್ಷೆಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಸೋಮವಾರದಿಂದ ಪರೀಕ್ಷೆ ಆರಂಭವಾಗಲಿದೆ.
ರಾಜ್ಯದಲ್ಲಿ ಈ ಸಲ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ ಬಾಲಕರು 4,72,643 ಇದ್ದರೆ, 4,03,938 ಬಾಲಕಿರು ಇದ್ದಾರೆ. ಇನ್ನು 7,83,955 ಪ್ರೆಶರ್ಸ್ ಇದ್ದು, 977 ಪುನಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಜತೆಗೆ, 21,817 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಲ್ಲದೆ, 9419 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒ ಟ್ಟು 4,884 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 73,066 ಪರೀಕ್ಷಾ ಕೊಠಡಿಗಳವೆ.
ಜುಲೈ 19ರಿಂದ 22ರವರೆಗೂ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿಭದ್ರತೆ ಮಾಡಲಾಗಿದೆ. ಮುಖ್ಯವಾಗಿ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿ ಮಾಡಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಕೊನೆಗೊಳ್ಳಲಿದೆ.
ಪರೀಕ್ಷಾ ವಿಧಾನ ಮೊದಲಿನಂತೆ ಇರುವುದಿಲ್ಲ. ಕೆಪಿಎಸ್ಸಿ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಒಟ್ಟು 40 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಕಾಲಾವಕಾಶ ಮೂರು ಗಂಟೆ. ಈ ಅವಧಿಯಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ಬರೆಯಬೇಕಿದೆ.
ರಾಜ್ಯದ 1,4929 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಆಯಾ ಮುಖ್ಯೋಪಾಧ್ಯಾಯರು ಮಂಡಳಿಯ ಜಾಲತಾಣದ ಮೂಲಕ ಡೌನ್‍ಲೋಡ್ ಮಾಡಿಕೊಂಡಿದ್ದು, ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದಿದ್ದಾರೆ. ಎಲ್ಲ ಮಕ್ಕಳು ಪ್ರವೇಶ ಪತ್ರ ಪಡೆದು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಪರೀಕ್ಷೆಗೆ ಹಾಜರಾಗಲು ಸಿದ್ಧರಾಗಿದ್ದಾರೆ.
ಪರೀಕ್ಷೆಗೆ ನೋಂದಾಯಿಸಿದ ಯಾವುದೇ ವಿದ್ಯಾರ್ಥಿ ಪ್ರವೇಶ ಪತ್ರ ಪಡೆಯಲು ಸಾಧ್ಯವಾಗದಿದ್ದಲ್ಲಿ ಸಂಬಂಧಿಸಿದ ಬಿಇಒ/ಡಿಡಿಪಿಐಗಳನ್ನು ಸಂಪರ್ಕಿಸಿ ಪಡೆಯಬಹುದು. ಇದರ ಸಮನ್ವಯಕ್ಕಾಗಿ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೋಮವಾರ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರವೇ ಎಲ್ಲ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಆವರಣವನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ಪರೀಕ್ಷೆ ಮುಗಿದ ನಂತರವೂ ಸ್ಯಾನಿಟೈಜ್ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಶೇಷ ಕೊಠಡಿ
ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಲಾಗಿದೆ. ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್ ಪ್ರವೇಶಿಸುವರು. ಆರೋಗ್ಯ ಕೌಂಟರ್ ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಲಿವೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್ ಗಳಲ್ಲೇ ಮಾಸ್ಕ್ ನೀಡಲಾಗುತ್ತದೆ.
ತುರ್ತು ಚಿಕಿತ್ಸಾ ವಾಹನ
ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡುವುದು. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್ ಶೀಲ್ಡ್ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ಗಡಿ ಜಿಲ್ಲೆಯ ಅಧಿಕಾರಿಗಳೊಂದಿಗೆ ವ್ಯವಹರಿಸಿ ಕ್ರಮ ವಹಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್
ಪರೀಕ್ಷಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸೋಂದು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್ ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡು ಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್ ಕೇರ್ ಸೆಂಟರ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಕೋವಿಡ್ ಕೇರ್ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ ವಾಹನ ಕಾಯ್ದಿರಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒಎಂಆರ್ ಶೇಟ್ʼಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ನೀಡಲಾಗಿದೆ. ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಆಯಾ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್ʼಗಳನ್ನು ಮುಚ್ಚಿಸಲು ಮತ್ತು ಸೆಕ್ಷನ್-144 ಜಾರಿಗೊಳಿಸಲು ಕ್ರಮ ವಹಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರದ ಬಳಿ ಸಂಚಾರ ಒತ್ತಡವಾದಂತೆ ಕ್ರಮ ವಹಿಸಲಿದ್ದಾರೆ.