by GS Bharath Gudibande
ಗುಡಿಬಂಡೆ: ಒಂದೆಡೆ ಗಡಿ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ದೊಡ್ಡದಾಗಿ ಹೇಳುತ್ತಲೇ, ಮತ್ತೊಂದೆಡೆ ಇದೇ ಗಡಿ ಪ್ರದೇಶಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಸರಕಾರದ ಕಾರ್ಯವೈಖರಿಗೆ ಇಲ್ಲಿದೆ ಒಂದು ಸ್ಪಷ್ಟ ಸಾಕ್ಷಿ.
ಗಾತ್ರದಲ್ಲಿ ಬಹಳ ಚಿಕ್ಕ ತಾಲೂಕಾದರೂ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತಿಕವಾಗಿ ಭವ್ಯ ಇತಿಹಾಸವುಳ್ಳ ನೆಲೆ ಗುಡಿಬಂಡೆ. ಆದರೆ, ಗಡಿ ಪ್ರದೇಶಗಳಲ್ಲಿ ಭಾಷಾಭಿವೃದ್ಧಿಯ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕಿದ್ದ ಸರಕಾರ ದಿವ್ಯ ನಿರ್ಲಕ್ಷ್ಯ ತೋರಿದೆ. ಅದಕ್ಕೆ ಪೂರಕವಾಗಿ ಗುಡಿಬಂಡೆಯ ಗ್ರಂಥಾಲಯವನ್ನು ಮುಖ್ಯ ಉದಾಹರಣೆಯಾಗಿ ಕೊಡಬಹುದು.
ಸುಮಾರು ಐವತ್ತು ವರ್ಷಗಳ ಇತಿಹಾಸವುಳ್ಳ ಈ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವಿಲ್ಲ. ತೀರಾ ಎಂದರೆ ತೀರಾ ಹಳೆಯ ಕಟ್ಟಡ. ಜತೆಗೆ ಮೂಲಭೂತ ಸೌಕರ್ಯಗಳ ಸೊಲ್ಲೇ ಇಲ್ಲ, ಶೌಚಾಲಯವೂ ಇಲ್ಲ.. ಇನ್ನೂ ಹತ್ತಾರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಜನರಲ್ಲಿ ಓದಿನ ಸಂಸ್ಕೃತಿ ಬೆಳೆಸಬೇಕಾದ ಗ್ರಂಥಾಲಯವೇ ಸೂಕ್ತ ಕಾಯಕಲ್ಪವಿಲ್ಲದೆ, ಅದು ಆಡಳಿತ ವ್ಯವಸ್ಥೆಯ ಅವಕೃಪೆಯಿಂದ ಸೊರಗಿದೆ. ಈಗಲಾದರೂ ಅದನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ.
ಅನೇಕ ವರ್ಷಗಳಿಂದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಪತ್ರಕರ್ತರ ನೆಚ್ಚಿನ ಓದಿನ ತಾಣವಾಗಿದ್ದ ಈ ಗ್ರಂಥಾಲಯದಲ್ಲಿ ಬರೀ ಕೊರತೆಗಳದ್ದೇ ಕಾರುಬಾರು. ಓದುಗರು ಬಂದು ಇಲ್ಲಿ ಕೂತು ತಾಸುಗಟ್ಟಲೇ ಕೂತು ಓದುವ ಪೂರಕ ವಾತಾವರಣವಿಲ್ಲ. ಇರಲೇಬೇಕಾದ ಅಗತ್ಯ ಸೌಕರ್ಯಗಳಿಲ್ಲ. ಹಿರಿಯ ನಾಗರೀಕರು ಬಂದರೆ ಶೌಚಕ್ಕೆ ಪರದಾಡಬೇಕು. ಸರಕಾರಿ ಮಾನದಂಡಗಳ ಪ್ರಕಾರ ಒಂದು ತಾಲೂಕು ಗ್ರಂಥಾಲಯಕ್ಕೆ ಇರಬೇಕಾದ ಯಾವುದೇ ಮೂಲಸೌಕರ್ಯವೂ ಇಲ್ಲಿಲ್ಲ.
ಇನ್ನು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಒಮ್ಮೆಯೂ ಇತ್ತ ತಿರುಗಿ ನೋಡಿದ್ದಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಗಮನವಂತೂ ಹರಿದೇ ಇಲ್ಲ. ಸಾಂಪ್ರದಾಯಿಕ ಗ್ರಂಥಾಲಯಗಳ ಸೊಗಡನ್ನು ಉಳಿಸಿಕೊಂಡೇ ಡಿಜಿಟಲ್ ಓದಿನತ್ತ ಯುವಜನರನ್ನು ಕೊಂಡೊಯ್ಯಬೇಕಾದ ಗ್ರಂಥಾಲಯ ಇಲಾಖೆ ಗಡಿ ತಾಲೂಕಿನ ವಿಷಯದಲ್ಲಿ ಗಾಢನಿದ್ದೆ ಮಾಡುತ್ತಿದೆ. ಪರಿಣಾಮವಾಗಿ ಈ ಗ್ರಂಥಾಲಯಕ್ಕೆ ಬರುವ ಓದುಗರ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಅತ್ಯಂತ ಚಿಕ್ಕ ಗ್ರಂಥಾಲಯ
ಹೇಳಿ ಕೇಳಿ ಗುಡಿಬಂಡೆ ಅತ್ಯಂತ ಚಿಕ್ಕ ತಾಲೂಕು. ಅದಕ್ಕೆ ತಕ್ಕಂತೆ ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯವೂ ಚಿಕ್ಕದೇ. ಪಟ್ಟಣದ ಜನ ಸಂಖ್ಯೆ ಸುಮಾರು 12,000. ಆದರೆ, ಈ ಗ್ರಂಥಾಲಯದ ಒಳಗೆ 10 ಜನ ಕುಳಿತು ಓದಬಹುದಷ್ಟೇ. ಹೆಚ್ಚಿನ ಜನ ಬಂದರೆ, ಒಳಗೆ ಜಾಗವಿಲ್ಲದೆ ಹೊರಗೇ ಕೂತು ಓದಬೇಕು. ಪಟ್ಟಣದ ಗ್ರಂಥಾಲಯದ ಒಳಗೆ ಕೇವಲ ಒಂದೇ ಟೇಬಲ್ ಇದೆ. ಇದರ ಸುತ್ತಾ ಕುರ್ಚಿಗಳನ್ನು ಹಾಕಲಾಗಿದ್ದು, ಒಮ್ಮೆ 10 ಜನ ಕುಳಿತು ಓದಬಹುದು. ಹೀಗಾಗಿ ಗ್ರಂಥಾಲಯದ ಗಾತ್ರ ವಿಸ್ತರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ಓದುಗರು ಮತ್ತು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಗದ್ದಲ, ವಾಹನಗಳ ಕಿರಿಕಿರಿ
ಇನ್ನು ಈ ಗ್ರಂಥಾಲಯವು ಮುಖ್ಯ ರಸ್ತೆಯ ಪಕ್ಕದಲ್ಲಿರುವುದರಿಂದ ವಾಹನಗಳ ಶಬ್ದದಿಂದ ಓದುಗರಿಗೆ ತೊಂದರೆ ಆಗುತ್ತಿದೆ. ಗ್ರಂಥಾಲಯದ ಒಳಗೆ ನಿಶ್ಯಬ್ದ ಇರುತ್ತಾದರೂ ಹೊರಗೆ ಮಾತ್ರ ಎಲ್ಲವೂ ಪ್ರಕ್ಷುಬ್ಧ. ಹೊಸ ಬಸ್ ನಿಲ್ದಾಣ ಇದ್ದರೂ ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್ಸುಗಳು, ಆಟೋಗಳು ಗ್ರಂಥಾಲಯದ ಮುಂದೆಯೇ ನಿಲ್ಲುವುದರಿಂದ ಓದುಗರಿಗೆ ಆಗುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಮೌನವಾಗಿದ್ದಾರೆ ಎಂಬುದು ಓದುಗರ ಪ್ರಶ್ನೆ.
ಅಲ್ಲದೆ, ಗ್ರಂಥಾಲಯದ ಸುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಮುಖ್ಯರಸ್ತೆಯ ಅಗಲೀಕರಣದ ವೇಳೆ ಗ್ರಂಥಾಲಯದ ಕಾಂಪೌಡ್ ಕೆಡವಲಾಗಿತ್ತು. ಅದನ್ನು ಕೆಡವಿ ಕೆಲ ವರ್ಷಗಳೇ ಕಳೆದರೂ ಆ ಕಾಂಪೌಂಡ್ ದುರಸ್ಥಿಯಾಗಿಲ್ಲ. ಜತೆಗೆ, ಗ್ರಂಥಾಲಯದ ಸುತ್ತ ಪರಮ ಗಲೀಜು. ದುರ್ನಾತ ಬೇರೆ. ಸೊಳ್ಳೆಗಳ ಕಾಟ ವಿಪರೀತ.
ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆಯ ಜತೆಗೆ ಓದುಗರಿಗೆ ಅವಶ್ಯಕವಾದ ಪುಸ್ತಕಗಳು ಇಲ್ಲ. ಸಾರ್ವಜನಿಕರಿಗೆ ಗ್ರಂಥಾಲಯದಲ್ಲಿ ಪತ್ರಿಕೆಗಳಷ್ಟೇ ಲಭ್ಯವಾಗುತ್ತಿವೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಮಹತ್ವದ ಕೃತಿಗಳು, ಪ್ರಮುಖ ಲೇಖಕರ ರಚನೆಗಳು ಇಲ್ಲಿ ಲಭ್ಯವಿಲ್ಲ. ಹೀಗಾಗಿ ಸಹಜವಾಗಿಯೇ ಓದುಗರು ನಿರಾಶರಾಗುತ್ತಿದ್ದಾರೆ.
ಯಾರು ಏನಂತಾರೆ?
50 ವರ್ಷಗಳಾದರೂ ಗ್ರಂಥಾಲಯದ ಅಭಿವೃದ್ಧಿಯಾಗಿಲ್ಲ. ಮಳೆ ಬಂದಾಗ ಸೋರುವ ಸ್ಥಿತಿ ಅಲ್ಲಿದೆ. ಗ್ರಂಥಾಲಯದ ಅಕ್ಕಪಕ್ಕ ಕಸದ ರಾಶಿ ಬಿದ್ದಿದ್ದು, ದುರ್ನಾತ ಬೀರುತ್ತಿದೆ. ಗ್ರಂಥಾಲಯದಲ್ಲಿ ಸರಿಯಾಗಿ ಬೆಳಕು ಇಲ್ಲ. ಜ್ಞಾನ ಕೊಡುವ ಗ್ರಂಥಾಲಯವೇ ಕಗ್ಗತ್ತಲಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಂಥಾಲಯಕ್ಕೆ ಎಲ್ಲ ಸೌಕರ್ಯ ಒದಗಿಸಬೇಕು.
ಪ್ರೆಸ್ ಸುಬ್ಬರಾಯಪ್ಪ ಗ್ರಂಥಾಲಯ ಸಮಿತಿ ಸದಸ್ಯ, ಗುಡಿಬಂಡೆ
ಒಂದು ಸುಸಜ್ಜಿತ ಗ್ರಂಥಾಲಯವನ್ನು ತಾಲೂಕು ಕೇಂದ್ರದಲ್ಲಿ ನಿರ್ಮಸಬೇಕು. ಓದುಗರ ಮಹಾಪೂರವೇ ಹರಿದು ಬರುವಂತೆ ಅದನ್ನು ರೂಪಿಸಲಾಗಿದೆ. ಈಗಿರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಡುವುದಕ್ಕೂ ಸ್ಥಳ ಸಾಕಾಗುತ್ತಿಲ್ಲ. ಗ್ರಂಥಾಲಯದ ಒಳಗೆ ಒಂದೇ ಟೇಬಲ್ ಹಳೇಯ ಕಟ್ಟಡ. ವಿದ್ಯತ್ ಸಂಪರ್ಕವೂ ಸರಿಯಾಗಿ ಇಲ್ಲ. ಹೀಗಿರುವಾಗ ಸರಕಾರ ರಾಷ್ಟ್ರೀಯ ಗ್ರಂಥಾಲಯಗಳ ಸಪ್ತಾಹವನ್ನು ಕಾಟಾಚಾರಕ್ಕೆ ಆಚರಿಸಿದಂತೆ ಕಾಣುತ್ತದೆ.
ಜಿ.ಎನ್.ನವೀನ್ ಜಿಲ್ಲಾ ಯುವ ಅಧ್ಯಕ್ಷ, ಜಯ ಕರ್ನಾಟಕ
ಸಾರ್ವಜನಿಕರಿಗೆ ಜ್ಞಾನದ ಬೆಳಕು ನೀಡುತ್ತಿರುವ ಗ್ರಂಥಾಲಯಗಳೇ ಇಂದು ನೂರೆಂಟು ಸಮಸ್ಯೆ ಎದುರಿಸುತ್ತಿವೆ. ಆಧುನಿಕತೆಗೆ ತಕ್ಕಂತೆ ಸರ್ಕಾರಗಳು ಗ್ರಂಥಾಲಯಗಳಿಗೆ ಹೈಟೆಕ್ ಟಚ್ ನೀಡಿ ಉನ್ನತೀಕರಿಸಬೇಕಿದೆ. ಇದಕ್ಕೆ ಗುಡಿಬಂಡೆ ತಾಲೂಕು ಗ್ರಂಥಾಲಯವು ಎದುರು ನೋಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಕ್ಕಂತೆ ಪುಸ್ತಕಗಳ ಬೇಡಿಕೆಯೂ ನಿವಾರಿಸಬೇಕು.
ಶ್ರೀಕಾಂತ್ ಓದುಗ, ಕರಿಗಾಂತಮ್ಮನಹಳ್ಳಿ
ಸರಕಾರದ ಉದ್ಯೋಗ ನೇಮಕಾತಿ, ಉನ್ನತ ಶಿಕ್ಷಣ ಪ್ರವೇಶ ಸೇರಿದಂತೆ ಪ್ರತಿಯೊಂದಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ನಡೆಯುತ್ತಿದೆ. ಬಡ ವಿದ್ಯಾರ್ಥಿಗಳು, ನಿರುದ್ಯೋಗ ಅಭ್ಯರ್ಥಿಗಳು ದುಬಾರಿ ಬೆಲೆಯ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಿಲ್ಲ. ಆದ್ದರಿಂದ ಗ್ರಂಥಾಲಯದಲ್ಲಿ ಇರುವ ಪುಸ್ತಕ ಬಳಕೆ ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬಂದವರು ತಾಸುಗಟ್ಟಲೇ ಅಭ್ಯಾಸ ಮಾಡಬೇಕಾಗುತ್ತದೆ.
ಮಂಜುನಾಥ್ ಗುಡಿಬಂಡೆ